ಜೇವರ್ಗಿ: ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಜೆಡಿಎಸ್ ತಾಲೂಕು ಘಟಕ ವತಿಯಿಂದ ಪಟ್ಟಣದ ತಹಶೀಲ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಹಳೆಯ ತಹಶೀಲ್ ಕಚೇರಿಯಿಂದ ನೂರಾರು ಜನ ರೈತರು, ಮಹಿಳೆಯರು, ಜೆಡಿಎಸ್ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮಿನಿ ವಿಧಾನಸೌಧ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಂತರ ತಹಶೀಲ್ದಾರ್ ಸಿದರಾಯ ಭೋಸಗಿ ಅವರ ಮೂಲಕ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆ ನೇತೃತ್ವ ವಹಿಸಿದ್ದ ಜೆಡಿಎಸ್ ಯುವ ಮುಖಂಡ ವಿಜಯಕುಮಾರ ಕೇದಾರಲಿಂಗಯ್ಯ ಹಿರೇಮಠ ಮಾತನಾಡಿ, ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನಲ್ಲಿ ಅತೀವೃಷ್ಟಿಯಿಂದ ಬೆಳೆಗಳು ಹಾಳಾಗಿದ್ದು, ಕೆಲವೇ ರೈತರಿಗೆ ಪರಿಹಾರ ಬಂದಿದೆ. ಒಟ್ಟು 35 ಸಾವಿರಕ್ಕೂ ಹೆಚ್ಚಿನ ರೈತರಿಗೆ ಪರಿಹಾರ ಬರಬೇಕಾಗಿದ್ದು, ಕೂಡಲೇ ಬಿಡುಗಡೆ ಮಾಡಬೇಕು.
2 ಸಾವಿರಕ್ಕೂ ಅಧಿಕ ಮನೆಗಳು ಹಾನಿಯಾಗಿದ್ದು, ಬಾಕಿ ಉಳಿದ ಮನೆಗಳ ಸಂತ್ರಸ್ತರಿಗೆ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು. ನೂತನ ಯಡ್ರಾಮಿ ತಾಲೂಕಿಗೆ ಅವಶ್ಯವಿರುವ ತಾಲೂಕು ಕಚೇರಿಗಳು ಸ್ಥಾಪನೆ ಮಾಡಬೇಕು. ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ಸುಮಾರು 1 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವ ಮಲ್ಲಾಬಾದ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಬೇಕು. ಪ್ರತಿ ಕ್ವಿಂಟಲ್ ತೊಗರಿಗೆ 8 ಸಾವಿರ ರೂ.ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಮಾಡಬೇಕು. ಈ ಎಲ್ಲಾ ಬೇಡಿಕೆಗಳು ಕೂಡಲೇ ಈಡೇರಿಸಬೇಕು ಎಂದು ಎಚ್ಚರಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ಖಾನಗೌಡರ, ಮುಖಂಡರಾದ ಶಂಕರ ಕಟ್ಟಿಸಂಗಾವಿ, ಚಂದ್ರಶೇಖರ ಮಲ್ಲಾಬಾದ, ಭೀಮರಾಯ ಜನಿವಾರ,
ಭಗವಂತ್ರಾಯಗೌಡ ಅಂಕಲಗಾ, ಮಲ್ಲಿಕಾರ್ಜುನ ದಂಡೂಲ್ಕರ್, ರುದ್ರಗೌಡ ಹವಳಗಿ, ಅಬ್ದುಲ್ ರೌಫ್ ಹವಲ್ದಾರ್, ನಿಂಗಣ್ಣಗೌಡ ಹಿರೇಗೌಡ, ಸಿದ್ದು ಮಾವನೂರ, ರಮೇಶ ಕೆಲ್ಲೂರ, ಸಿದ್ದು ಹೂಗಾರ, ಅಮೀರ ಪಟೇಲ, ಗೊಲ್ಲಾಳಪ್ಪ ಕರಕಳ್ಳಿ, ಹಣಮಂತ ಯಾಳವಾರ, ಶಿವಶಂಕರ ಜವಳಗಿ, ವಿನೋದ ಸಾಥಖೆಡ, ತಿಪ್ಪಣ್ಣ ಹುಲ್ಲೂರ, ಬಾಬಾ ಹನೀಫ್, ಖಯೂಮ್ ಜಮಾದಾರ, ನಿಂಗಣ್ಣಗೌಡ ನಂದಿಹಳ್ಳಿ, ತಮ್ಮಣ್ಣಗೌಡ ಬೇಲೂರ, ಕೇರನಾಥ ಪಾರ್ಶಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.