Advertisement

ವಿಲೀನ : ಜೆಡಿಎಸ್‌ನೊಳಗೆ ಭಿನ್ನ ಚರ್ಚೆ ಶುರು

02:41 PM Dec 22, 2020 | Suhan S |

ಮಂಡ್ಯ: ರಾಜ್ಯದಲ್ಲಿ ಬಿಜೆಪಿ ಪಕ್ಷದೊಂದಿಗೆ ಜೆಡಿಎಸ್‌ ಪಕ್ಷ ವಿಲೀನಗೊಳಿಸಲಾಗುತ್ತದೆ ಎಂಬ ಚರ್ಚೆಗಳು ನಡೆಯುತ್ತಿದ್ದು, ಇದು ಜಿಲ್ಲೆಯ ಭದ್ರಕೋಟೆಯಾಗಿರುವ ಜೆಡಿಎಸ್‌ ಪಕ್ಷಕ್ಕೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ರಾಜಕೀಯ ಲೆಕ್ಕಾಚಾರ ನಡೆಯುತ್ತಿದೆ.

Advertisement

ಈ ನಿಟ್ಟಿನಲ್ಲಿ ಜಿಲ್ಲೆಯ ಆರು ಮಂದಿ ಜೆಡಿಎಸ್‌ ಶಾಸಕರಿದ್ದು, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಬಹು ತೇಕ ಶಾಸಕರಿಗೆ ವಿಲೀನ ಪರ ಒಲವಿದೆ ಎನ್ನಲಾಗುತ್ತಿದೆ. ಇದು ರಾಜಕೀಯವಾಗಿದ್ದು,ಏನುಬೇಕಾದರೂಆಗಲಿದೆ. ಆದರೆ, ಪಕ್ಷದ ಅಸ್ತಿತ್ವ ಮುಖ್ಯವಾಗಿದೆ. ವಿಲೀನಗೊಳಿಸಿದರೆ ಒಳ್ಳೆಯದು. ವಿಲೀನ ಬದಲು ಹೊಂದಾಣಿಕೆಯಾಗಲಿ. ವರಿಷ್ಠರ ತೀರ್ಮಾನ ಅಂತಿಮ ಎಂಬ ಅಭಿಪ್ರಾಯಗಳು ಕೇಳಿ ಬಂದಿದ್ದು, ವಿಲೀನ ಅಥವಾ ಹೊಂದಾಣಿಕೆಗೆ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ.

ಈ ಎಲ್ಲದರ ನಡುವೆ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಸಾಕಷ್ಟು ರಾಜಕೀಯ ಸ್ಥಾನ ಪಲ್ಲಟಗಳು ಆಗಲಿವೆ. ವಿಲೀನ ಅಥವಾ ಹೊಂದಾಣಿಕೆಯಾದರೆ ಪಕ್ಷ ವಿಭಜನೆಯಾಗುತ್ತಾ ಎಂಬ ಪ್ರಶ್ನೆಗಳೂ ಎದ್ದಿವೆ.

ಶಾಸಕ ಕೆ.ಅನ್ನದಾನಿ ಬೆಂಬಲ: ಮಳವಳ್ಳಿ ಕ್ಷೇತ್ರದ ಶಾಸಕ ಕೆ.ಅನ್ನದಾನಿ ಅವರು ಬಿಜೆಪಿಯೊಂದಿಗೆ ವಿಲೀನ ಮಾಡಿ ಕೊಂಡರೆ ಒಳ್ಳೆಯದು. ಈ ನಿಟ್ಟಿನಲ್ಲಿ ವರಿಷ್ಠರು ತೀರ್ಮಾನ ಕೈಗೊಳ್ಳಬೇಕು ಎಂದು ಹೇಳುವ ಮೂಲಕ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಇದು ಅವರ ಮುಂದಿನ ವಿಧಾನಸಭೆ ಚುನಾ ವಣೆ ಹಾಗೂ ರಾಜಕೀಯ ಭವಿಷ್ಯದ ಲೆಕ್ಕಾಚಾರವೂ ಇದೆಎನ್ನಲಾಗುತ್ತಿದೆ.

ಪಕ್ಷದ ಅಸ್ತಿತ್ವ ಮುಖ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಶ್ರೀನಿವಾಸ್‌ ಅವರು, ಏನೇ ಆದರೂ ಪಕ್ಷದ ಅಸ್ತಿತ್ವ ಮುಖ್ಯವಾಗುತ್ತದೆ. ವಿಲೀನ ಬಗ್ಗೆ ಮಾಹಿತಿ ಇಲ್ಲ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಲು ಶ್ರಮವಹಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಇಂಥ ಚರ್ಚೆಗಳು ಅನಗತ್ಯವಾಗಿದ್ದು, ಮುಂದಿನ ಸ್ಥಳೀಯ ಚುನಾವಣೆಗಳ ಮೇಲೆ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ನನಗೆ ಮಾಹಿತಿ ಇಲ್ಲ: ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್‌.ಪುಟ್ಟರಾಜು ಅವರು, ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಾಯಕರೊಂದಿಗೆ ಚರ್ಚಿಸಿ ಮಾಹಿತಿ ಪಡೆಯು ತ್ತೇನೆ ಎಂದು ವಿಲೀನ ವಿಚಾರದ ಚರ್ಚೆಯ ಬಗ್ಗೆ ಹೆಚ್ಚುಮಾತನಾಡಲಿಲ್ಲ.

ವರಿಷ್ಠರ ತೀರ್ಮಾನಕ್ಕೆ ಬದ್ಧ: ನಾಗಮಂಗಲ ಕ್ಷೇತ್ರದ ಶಾಸಕ ಕೆ.ಸುರೇಶ್‌ಗೌಡ ಅಚವರು, ವರಿಷ್ಠರ ತೀರ್ಮಾನವೇ ಅಂತಿಮವಾಗಿದೆ. ಇದು ರಾಜಕೀಯ ಏನಾದರೂ ಆಗಬಹುದು. ವಿಲೀನ ಅಥವಾ ಹೊಂದಾಣಿಕೆ ರಾಜಕೀಯದಲ್ಲಿ ಸಹಜ. ವರಿಷ್ಠರು ಯಾವ ತೀರ್ಮಾನ ಕೈಗೊಂಡರೂ ನಾವು ಅದಕ್ಕೆ ಬದ್ಧರಾಗಿದ್ದೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಹಮತ ವ್ಯಕ್ತಪಡಿಸಿದ್ದಾರೆ.

ವರಿಷ್ಠರ ತೀರ್ಮಾನ ಅಂತಿಮ: ದೇವೇಗೌಡರ ಕುಟುಂಬಕ್ಕೆ ಸಂಬಂಧಿಕರೇ ಆಗಿರುವ ಮದ್ದೂರು ಕ್ಷೇತ್ರದಡಿ.ಸಿ.ತಮ್ಮಣ್ಣ ಅವರು, ವರಿಷ್ಠರ ತೀರ್ಮಾನವೇ ಅಂತಿಮ ಎಂದಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷ ಭದ್ರವಾಗಿದೆ. ಯಾರು ಏನೇ ಮಾಡಿದರೂ ಜೆಡಿಎಸ್‌ ಪಕ್ಷದ ಶಕ್ತಿಯನ್ನುಕುಗ್ಗಿಸಲಾರರು ಎಂದು ಹೇಳುವ ಮೂಲಕ ಸಹಮತವಿದೆ ಎನ್ನುವ ಸಂದೇಶ ನೀಡಿದ್ದಾರೆ.

ಹೊಂದಾಣಿಕೆ ಅಗತ್ಯ: ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ, ಬಿಜೆಪಿಯೊಂದಿಗೆ ವಿಲೀನ ಬಗ್ಗೆ ಅಧಿಕೃತವಾಗಿ ಚರ್ಚೆಯಲ್ಲಿಲ್ಲ. ವಿಷಯಾಧಾರಿತ ಹೊಂದಾಣಿಕೆ ಈಗಾಗಲೇ ಸಾಭೀತಾಗಿದೆ. ಜನರ ಒಳಿತಿಗಾಗಿ 5ವರ್ಷ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧವಿರುವುದುಜೆಡಿಎಸ್‌ ಶಾಸಕರ ಒಕ್ಕೊರಲ ಅಭಿಪ್ರಾಯವಾಗಿದೆ.ಬಿಜೆಪಿ ಜತೆ ವಿಲೀನ ಮಾಡಿಕೊಂಡರೆ ಪಕ್ಷ ಬಿಡುತ್ತೇವೆ ಎಂದು ಯಾವ ಶಾಸಕರೂ ಹೇಳಿಲ್ಲ ಎಂದು ಹೇಳುವ ಮೂಲಕ ಬಿಜೆಪಿಯೊಂದಿಗಿನ ಮೈತ್ರಿ ಹಾಗೂ ವಿಲೀನದ ಪರ ಇದ್ದೇವೆ ಎಂಬುದನ್ನು ಸುಳಿವು ನೀಡಿದ್ದಾರೆ.

ಕಾರ್ಯಕರ್ತರ ಒಗ್ಗೂಡುವಿಕೆ ಪ್ರಶ್ನೆ  :  ಮೇಲ್ಮಟ್ಟದ ನಾಯಕರು ಪಕ್ಷ ವಿಲೀನ ಮಾಡಿಕೊಂಡರೆ ತಳಮಟ್ಟದ ನಿಷ್ಠಾವಂತ ಕಾರ್ಯಕರ್ತರ ಪಡೆಯ ಸಂಖ್ಯೆ ಇಳಿಕೆಯಾಗುವ ಸಾಧ್ಯತೆಯೂ ಹೆಚ್ಚಿದೆ. ಬಿಜೆಪಿಗೆ ಮತ ಹಾಕದ ಸಾಕಷ್ಟು ಮಂದಿ ನಿಷ್ಠಾವಂತ ಕಾರ್ಯಕರ್ತರು ಜೆಡಿಎಸ್‌ ಪಕ್ಷದಲ್ಲಿ ದುಡಿಯುತ್ತಿದ್ದಾರೆ. ಇಂಥ ಕಾರ್ಯಕರ್ತರು ಬಿಜೆಪಿ ಪರ ದುಡಿಯಲು ಹಿಂದೇಟು ಹಾಕಬಹುದು ಎಂಬುದನ್ನು ತಳ್ಳಿ ಹಾಕುವಂತಿಲ್ಲ

ಜಿಲ್ಲೆಗೆ ಮಂತ್ರಿ ಸ್ಥಾನ :  ಬಿಜೆಪಿಯೊಂದಿಗೆ ವಿಲೀನ ಮಾಡಿಕೊಂಡರೆ ಉತ್ತಮ. ಮುಂದಿನ ವಿಧಾನಸಭೆಚುನಾವಣೆಯಲ್ಲಿ ಸ್ಥಾನಗಳ ಹಂಚಿಕೆಯಾದರೆ ಹೆಚ್ಚು ಸ್ಥಾನ ಗೆದ್ದಾಗ ಎಚ್‌.ಡಿ.ಕುಮಾರಸ್ವಾಮಿ ಅವರು ಸಿಎಂ ಆಗುವ ಸಾಧ್ಯತೆ ಇದ್ದು, ಜಿಲ್ಲೆಗೂ ಮಂತ್ರಿ ಸ್ಥಾನಗಳು ಸಿಗಲಿದೆ ಎಂಬ ನಿಟ್ಟಿನಲ್ಲಿ ಚರ್ಚೆ ಶುರುವಾಗಿದೆ.

ಪಕ್ಷದ ಅಸ್ತಿತ್ವದ ಪ್ರಶ್ನೆ  :  ಎಚ್‌ಡಿಕೆ ವಿಲೀನ ಪ್ರಕ್ರಿಯೆ ಮಾಡಲ್ಲ. ವಿಷಯಾಧರಿತ ಬೆಂಬಲ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ. ವಿಲೀನಗೊಂಡರೆ ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷ ಅಸ್ತಿತ್ವದ ಪ್ರಶ್ನೆ ಎದುರಾಗಲಿದೆ. ಇದುವರೆಗೂ ಕಾಂಗ್ರೆಸ್‌ ಮತ್ತುಜೆಡಿಎಸ್‌ ಸಾಂಪ್ರದಾಯಿಕ ಎದುರಾಳಿಗಳಾಗಿದ್ದರು. ಮುಂದೆ ಕಾಂಗ್ರೆಸ್‌, ಬಿಜೆಪಿ ಎದುರಾಳಿಗಳಾಗಲಿದೆ.

ನಾರಾಯಣಗೌಡರ ಮುಂದಿನ ನಡೆ? :

ಒಂದು ವೇಳೆ ಬಿಜೆಪಿಯೊಂದಿಗೆ ಹೊಂದಾಣಿಕೆ ಅಥ‌ವಾ ವಿಲೀನ ಮಾಡಿಕೊಂಡರೆ ಕೆ.ಆರ್‌.ಪೇಟೆಯ ಕ್ಷೇತ್ರದಲ್ಲಿ ಕೆ.ಸಿ.ನಾರಾಯಣಗೌಡ ಅವರ ‌ ಮುಂದಿನ ನಡೆ ಏನು? ಎಂಬ ಪ್ರಶ್ನೆಯೂ ಉದ್ಭವವಾಗಲಿದೆ. ಈಗಾಗಲೇ ಜೆಡಿಎಸ್‌ ಪಕ್ಷ ತೊರೆದು ಕಮಲ ಹಿಡಿದು ಉಪಚುನಾವಣೆಯಲ್ಲಿ ಭ‌ರ್ಜರಿ ಗೆಲುವು ಸಾಧಿಸಿ ಮಂತ್ರಿಯಾಗಿರುವ ನಾರಾಯಣಗೌಡ ಜೆಡಿಎಸ್‌ ವಿರುದ್ಧ ಕೆಂಡ ಕಾರುತ್ತಲೇ ಇದ್ದಾರೆ. ದೇವೇಗೌಡ ‌ ಕುಟುಂಬದವರ ವಿರುದ್ಧ ತೊಡೆತಟ್ಟುವ ನಾರಾಯಣಗೌಡರ ಮುಂದಿನ ರಾಜಕೀಯ ಭವಿಷ್ಯ ಏನಾಗಲಿದೆ ಎಂಬ ಕುತೂಹಲವೂ ರಾಜಕೀಯ ಪಂಡಿತರ ಕಣ್ಣ‌ರಳಿಸಿ ನೋಡುವಂತೆ ಮಾಡಿದೆ

Advertisement

Udayavani is now on Telegram. Click here to join our channel and stay updated with the latest news.

Next