ರಾಮನಗರ : ‘ನಾನು ವಿಧಾನಸಭಾ ಚುನಾವಣೆ ಲ್ಲಿ ಚನ್ನಪಟ್ಟಣದಿಂದ ಗೆದ್ದಿದ್ದೇನೆ, ಜನ ನನಗೆ ಆಶೀರ್ವಾದ ಮಾಡಿದ್ದಾರೆ ಹಾಗಾಗಿ ಲೋಕಸಭೆಗೆ ಸ್ಪರ್ಧೆ ಮಾಡೋ ಪ್ರಶ್ನೆಯೇ ಇಲ್ಲ’ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ‘ನಾಳೆ(ಗುರುವಾರ) ಮೈತ್ರಿ ಕುರಿತ ಚರ್ಚೆಗೆ ಕೇಂದ್ರದ ಬಿಜೆಪಿ ಹೈಕಮಾಂಡ್ ನ ಕೆಲ ನಾಯಕರನ್ನ ಭೇಟಿ ಮಾಡುತ್ತೇವೆ. ಭೇಟಿ ಬಳಿಕ ಏನು ಚರ್ಚೆ ಆಗುತ್ತದೋ ನೋಡೊಣ’ ಎಂದು ಹೇಳಿದರು.
ದೆಹಲಿಯಲ್ಲಿ ಸಂಸದರ ಜೊತೆ ಸಿಎಂ ಸಭೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ‘ಇವತ್ತು ದೆಹಲಿಯಲ್ಲಿ ಸಿಎಂ, ಡಿಸಿಎಂ ಸಭೆ ಮಾಡಿದ್ದಾರೆ. ಇನ್ನೂ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕ್ತೀವಿ ಅಂತ ಕಾಲಹರಣ ಮಾಡ್ತಿದ್ದಾರೆ.ರೈತರ ಉಳಿವಿಗೆ ಇಷ್ಟೊತ್ತಿಗಾಗಲೇ ಚಿಂತನೆ ನಡೆಸಬೇಕಾಗಿತ್ತು.ಆದರೆ ಸರ್ಕಾರ ಇನ್ನೂ ಆ ಕೆಲಸ ಮಾಡಿಲ್ಲ.ಇನ್ನೂ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಲು ಮೀನಾಮೇಷ ಎಣಿಸುತ್ತಿದ್ದಾರೆ.ತಮಿಳುನಾಡಿನವರು ಒಂದು ತಿಂಗಳ ಹಿಂದೆಯೇ ಅರ್ಜಿ ಹಾಕಿದ್ದಾರೆ. ಆದರೆ ನೀವು ಅರ್ಜಿ ಹಾಕಿದ ತತ್ ಕ್ಷಣ ನೀರು ಬಿಟ್ರಿ.ಅದರ ಬದಲು ನೀವು ಅರ್ಜಿ ಹಾಕಬಹುದಿತ್ತು. ನಾನು ಈ ಬಗ್ಗೆ ಒಂದು ತಿಂಗಳ ಮುಂಚೆಯೇ ಹೇಳಿದ್ದೆ. ಕಾವೇರಿ ನಿರ್ವಹಣಾ ಪ್ರಾಧಿಕಾರವದವರು ದೇವಲೋಕದಿಂದ ಇಳಿದು ಬಂದಿಲ್ಲ.ನಮ್ಮ ರಾಜ್ಯದ ವಾಸ್ತವ ಸ್ಥಿತಿ ಬಗ್ಗೆ ಅವರಿಗೆ ಮಾಹಿತಿ ಇಲ್ಲ.ನಮ್ಮ ಅಧಿಕಾರಿಗಳು ಕೂಡಾ ಕಾಟಾಚಾರಕ್ಕೆ ಹೋಗಿ ಸಭೆಯಲ್ಲಿ ಭಾಗಿಯಾಗ್ತಾರೆ. ಇವತ್ತು ದೆಹಲಿಯಲ್ಲಿ ಸಭೆ ಮಾಡಿ ಏನ್ ಚರ್ಚೆ ಮಾಡಿದ್ದಾರೆ.ಹೊರನೋಟಕ್ಕೆ ಸಭೆ ಮಾಡಿ ಬರೀ ಭಾಷಣ ಮಾಡೋಕೆ ಹೋಗಿದ್ದಾರೆ. ರಾತ್ರೋರಾತ್ರಿ ದೆಹಲಿಗೆ ಹೋಗಿ ಏನು ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.
ಇನ್ನೂ ಸಂಕಷ್ಟ ಸೂತ್ರ ತಯಾರಾಗಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ‘ಇದನ್ನ ತಯಾರು ಮಾಡಬೇಕಾಗಿರೋದು ಯಾರು? ಸಂಕಷ್ಟ ಸೂತ್ರ ಇಲ್ಲದೇ ಇಷ್ಟುದಿನ ಯಾಕೆ ನೀರು ಬಿಟ್ಟಿರಿ?’ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ರಾಜ್ಯದಲ್ಲಿ ಬರ ಪರಿಹಾರಕ್ಕೆ ಕೇಂದ್ರಕ್ಕೆ ಪತ್ರ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ‘ಕಳೆದ ಒಂದು ತಿಂಗಳಿನಿಂದ ಮಾಹಿತಿ ಸಂಗ್ರಹ ಮಾಡ್ತೀವಿ ಅನ್ನೊದರಲ್ಲೇ ಇದ್ದಾರೆ. ಕೇಂದ್ರಕ್ಕೆ ವರದಿ ಕೊಡ್ತೀವಿ, ನಿಯೋಗ ಹೋಗ್ತಿವಿ ಅಂತ ಕಾಲಾಹರಣ ಮಾಡ್ತಿದ್ದಾರೆ. ಕೇವಲ ಮಾಧ್ಯಮದ ಮುಂದೆ ಹೇಳಿಕೆ ಕೊಡ್ತಾ ನಿಂತಿದ್ದಾರೆ. ಇನ್ನೂ ಯಾಕೆ ವರದಿ ಸಲ್ಲಿಸಿಲ್ಲ. ಕೇವಲ ಪತ್ರ ಬರೆದರೆ ರೈತರು ಉಳಿಯುತ್ತಾರಾ.? 6ಸಾವಿರ ಕೋಟಿ ಬೆಳೆನಾಶ ಅಂದರೆ ಹುಡುಗಾಟವಾ.? ಏನು ತೀರ್ಮಾನ ಮಾಡಿಕೊಂಡಿದ್ದೀರಿ’ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಕುಕ್ಕರ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ‘ಈ ಚುನಾವಣೆ ನಡೆಸಿದ್ದೇ ಕುಕ್ಕರ್, ಇಸ್ತ್ರಿಪೆಟ್ಟಿಗೆ, ತವಾ ಹಂಚಿಕೊಂಡು.ಇದಕ್ಕೆ ರಾಜ್ಯದ ಜನತೆಗೆ ಮರುಳಾಗಬೇಡಿ ಅಂದಿದ್ದೆ.ಆದ್ರೆ ಚನ್ನಪಟ್ಟಣದ ಜನ ಮರುಳಾಗಿಲ್ಲ.ರಾಮನಗದದಲ್ಲೂ ಈ ರೀತಿ ಹಂಚಿಕೆ ಮಾಡಲಾಗಿದೆ.ಇವತ್ತು ರಾಜ್ಯದಲ್ಲಿ ಈ ಸರ್ಕಾರ ಸರಿಯಾದ ರೀತಿ ಬಂದಿಲ್ಲ.ಚುನಾವಣಾ ಆಯೋಗ ಸರಿಯಾದ ರೀತಿ ತೀರ್ಮಾನ ಮಾಡಿದ್ರೆ ಸರ್ಕಾರವನ್ನ ವಜಾ ಮಾಡಬೇಕು. ಕೇಂದ್ರ ಸರ್ಕಾರವೂ ಗಿಫ್ಟ್ ಕೂಪನ್ ಬಗ್ಗೆ ತನಿಖೆ ಮಾಡಬೇಕು. ಗ್ಯಾರಂಟಿ ಕಾರ್ಡ್ ಕೊಟ್ಟು ಮನೆಮನೆಗೆ ಹಂಚಿದ್ರಲ್ಲ, ಅದೇ ಚುನಾವಣ ನೀತಿ ಉಲ್ಲಂಘನೆಮಾಡಲಾಗಿದ್ದು, ರಾಜ್ಯದ 224ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಚುನಾವಣಾ ಆಯೋಗ ಡಿಬಾರ್ ಮಾಡಬೇಕು.ಇದರ ಬಗ್ಗೆ ಚರ್ಚೆ ಮಾಡುತ್ತೇವೆ’ ಎಂದರು.