Advertisement

2 ದಿನಗಳಲ್ಲಿ 78 ಕ್ಷೇತ್ರಗಳಿಗೆ ಜೆಡಿಎಸ್‌ ಪಟ್ಟಿ

06:45 AM Apr 19, 2018 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆ ಜೆಡಿಎಸ್‌ ಅಭ್ಯರ್ಥಿಗಳ ಎರಡನೇ ಮತ್ತು ಅಂತಿಮ ಪಟ್ಟಿ ಇನ್ನೆರಡು ದಿನಗಳೊಳಗೆ ಬಿಡುಗಡೆಯಾಗಲಿದೆ. ಅಲ್ಲದೆ, ಈಗಾಗಲೇ ಬಿಡುಗಡೆಯಾಗಿರುವ 126 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಒಂದೆರಡು ಬದಲಾವಣೆಗಳನ್ನು ಮಾಡಲು ನಿರ್ಧರಿಸಲಾಗಿದೆ.

Advertisement

ಜೆಡಿಎಸ್‌ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಗುರುವಾರ ಅಥವಾ ಶುಕ್ರವಾರ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.

ಇದೀಗ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಹಲವು ಪ್ರಮುಖರು ಜೆಡಿಎಸ್‌ ಸೇರಿದ್ದು, ಇವರನ್ನು ಸೇರಿಸಿಕೊಂಡು ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು. 7-8 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳಿಂದ ಜೆಡಿಎಸ್‌ ಸೇರಿದ ಪ್ರಮುಖರಿಗೆ ಟಿಕೆಟ್‌ ನೀಡಲಾಗುವುದು ಎಂದು ತಿಳಿಸಿದರು.

ಒಟ್ಟು 224 ಕ್ಷೇತ್ರಗಳ ಪೈಕಿ 126 ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. 20 ಕ್ಷೇತ್ರಗಳನ್ನು ಬಿಎಸ್‌ಪಿಗೆ ಬಿಟ್ಟುಕೊಡಲಾಗಿದ್ದು, ಇನ್ನು 78 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗುವುದು. ಈ ಸಂದರ್ಭದಲ್ಲಿ ಮೊದಲ ಪಟ್ಟಿಯಲ್ಲಿ ಘೋಷಣೆಯಾದ 2-3ಅಭ್ಯರ್ಥಿಗಳು ಬದಲಾಗಲಿದ್ದಾರೆ ಎಂದು ಹೇಳಿದರು.

ಕಳೆದ ಫೆಬ್ರವರಿಯಲ್ಲಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ನಂತರ ಎಲ್ಲಾ ಅಭ್ಯರ್ಥಿಗಳ ಪ್ರಚಾರ, ಸಂಘಟನೆ ಮಚತ್ತಿತರ ವಿಚಾರಗಳ ಮೇಲೆ ಕಣ್ಣಿಟ್ಟು ವರದಿಗಳನ್ನು ತರಿಸಿಕೊಳ್ಳಲಾಗಿದ್ದು, 2-3 ಅಭ್ಯರ್ಥಿಗಳು ಸರಿಯಾಗಿ ಪ್ರಚಾರ ಮಾಡುತ್ತಿಲ್ಲ ಎಂದು ಗೊತ್ತಾಗಿದೆ. ಅಂಥವರನ್ನು ಬದಲಾವಣೆ ಮಾಡಲಾಗುವುದು ಎಂದರು. ಆದರೆ, ಯಾರನ್ನು ಬದಲಾವಣೆ ಮಾಡಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಲಿಲ್ಲ.

Advertisement

ವಿಧಾನಸಭೆ ಚುನಾವಣೆ ಪಕ್ಷದ ಪ್ರಣಾಳಿಕೆಯನ್ನು ನಿವೃತ್ತ ಐಎಎಸ್‌ ಅಧಿಕಾರಿ ಸುಬ್ರಮಣ್ಯ ನೇತೃತ್ವದ ಸಮಿತಿ 
ಅಂತಿಮಗೊಳಿಸುತ್ತಿದೆ. ಸುಬ್ರಮಣ್ಯ ಅವರು ತಮ್ಮ ಮಗನ ಮದುವೆ ಕೆಲಸದಲ್ಲಿ ನಿರತರಾಗಿದ್ದು, ಶುಕ್ರವಾರ ಮರಳಿ ಬರಲಿದ್ದಾರೆ. ನಂತರ ಪ್ರಣಾಳಿಕೆ ಅಂತಿಮಗೊಳಿಸಿ ಏ. 23 ಅಥವಾ 24ರಂದು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಮತ ಪರಿವರ್ತನೆ ಸಾಧ್ಯವಿಲ್ಲ
ಅಮಿತ್‌ ಶಾ ಅವರು ಸಾಹಿತಿಗಳ ಮನೆ,ಮಠಗಳಿಗೆ ಹೋಗುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಕುಮಾರಸ್ವಾಮಿ, ಚುನಾವಣೆ ಸಮೀಪಿಸುತ್ತಿದೆ ಎನ್ನುವಾಗ ಮಠ, ದೇವಸ್ಥಾನ, ಸಾಹಿತಿಗಳ ಮನೆಗಳಿಗೆ ಹೋಗಿ ಮತಗಳನ್ನು ಪರಿವರ್ತನೆ ಮಾಡಲು ಸಾಧ್ಯವಿಲ್ಲ. ಇದು ಕರ್ನಾಟಕ ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಲಿ ಎಂದರು.

ತರೀಕೆರೆ ಶಾಸಕ ಶ್ರೀನಿವಾಸ್‌, ರವಿ ಪಾಟೀಲ್‌ ಜೆಡಿಎಸ್‌ಗೆ
ಬೆಂಗಳೂರು:
ಕಾಂಗ್ರೆಸ್‌ ಟಿಕೆಟ್‌ ವಂಚಿತ ತರೀಕೆರೆ ಶಾಸಕ ಶ್ರೀನಿವಾಸ್‌, ರಾಯಚೂರು ಗ್ರಾಮೀಣ ಕ್ಷೇತ್ರದ ರವಿ ಪಾಟೀಲ್‌ ಸೇರಿದಂತೆ ಕಾಂಗ್ರೆಸ್‌ ಮತ್ತು ಬಿಜೆಪಿಯ ಹಲವು ಮುಖಂಡರು ಬುಧವಾರ ಜೆಡಿಎಸ್‌ ಸೇರಿದ್ದಾರೆ.

ಜೆಡಿಎಸ್‌ ಕಚೇರಿಯಲ್ಲಿ ಬುಧವಾರ ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್‌ ಸೇರಿದರು. ಇವರೊಂದಿಗೆ ಶಾಂತಿನಗರ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಶ್ರೀಧರರೆಡ್ಡಿ, ಕಾಂಗ್ರೆಸ್‌ನ ಬಿ.ಎಸ್‌.ರಾಘವನ್‌, ಬಸವನಗುಡಿಯ ಕೆಂಪಣ್ಣ, ಬಿಬಿಎಂಪಿ ಮಾಜಿ ಸದಸ್ಯೆ ಗೀತಾ ಶ್ರೀನಿವಾಸ ರೆಡ್ಡಿ, ಶ್ರೀನಿವಾಸ ನಾಯ್ಕ, ಆರೀಫ್ ಖಾನ್‌, ಪಾರ್ಥಸಾರಥಿ ಮತ್ತಿತರರು ಬೆಂಬಲಿಗರೊಂದಿಗೆ ಜೆಡಿಎಸ್‌ ಸೇರಿದ್ದಾರೆ. ಈ ಪೈಕಿ ಶ್ರೀನಿವಾಸ್‌ ಅವರಿಗೆ ತರೀಕೆರೆ, ರವಿ ಪಾಟೀಲ್‌ಗೆ ರಾಯಚೂರು ಗ್ರಾಮೀಣ, ಶ್ರೀಧರರೆಡ್ಡಿ ಅವರಿಗೆ ಶಾಂತಿನಗರ ಕ್ಷೇತ್ರದ ಟಿಕೆಟ್‌ ಬಹುತೇಕ ಖಾತರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next