Advertisement

JDS Legislative Leader; ಕೈ ತಪ್ಪಿದ ನಾಯಕ ಸ್ಥಾನ: ಜಿಟಿಡಿ ಅಸಮಾಧಾನ?

11:54 PM Jul 17, 2024 | Team Udayavani |

ಬೆಂಗಳೂರು: ವಿಧಾನಸಭೆಯಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಸಿ.ಬಿ. ಸುರೇಶ್‌ಬಾಬು ಅವರಿಗೆ ಸಿಕ್ಕಿದ್ದಕ್ಕೆ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಪಕ್ಷದ ಕೆಲವರ ವಿರುದ್ಧ ತಮ್ಮ ಆಪ್ತವಲಯದಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

Advertisement

ಎಚ್‌.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾದ ಬಳಿಕ ಜೆಡಿಎಸ್‌ ನಾಯಕ ಸ್ಥಾನ ತಮಗೇ ಸಿಗಲಿದೆ ಎಂದು ಜಿ.ಟಿ.ದೇವೇಗೌಡ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಏಕಾಏಕಿ ಸುರೇಶ್‌ ಬಾಬು ಅವರನ್ನು ಈ ಸ್ಥಾನಕ್ಕೆ ನೇಮಕ ಮಾಡಿದ್ದು ವಿಧಾನಸಭೆಯಲ್ಲಿ ಸ್ಪೀಕರ್‌ ಖಾದರ್‌ ಅವರು ಈ ವಿಚಾರವನ್ನು ಪ್ರಕಟಿಸಿಯೂ ಬಿಟ್ಟರು.

ಈ ವಿಚಾರ ತಿಳಿದು ಅಸಮಾಧಾನಗೊಂಡಿರುವ ಜಿಟಿಡಿ, ಎರಡು ದಿನಗಳಿಂದ ವಿಧಾನಸಭೆ ಕಲಾಪದಲ್ಲೂ ಭಾಗಿಯಾಗಿಲ್ಲ. ಇದಕ್ಕೆ ಸ್ಪಷ್ಟನೆ ನೀಡಲು ಪ್ರಯತ್ನಿಸಿರುವ ಸುರೇಶ್‌ಬಾಬು, ನಮ್ಮಲ್ಲಿ ಯಾವುದೇ ಅಸಮಾಧಾನಗಳಿಲ್ಲ. ಮೇಲ್ಮನೆಯಲ್ಲಿ ಭೋಜೇಗೌಡರನ್ನು ಜೆಡಿಎಸ್‌ ನಾಯಕರನ್ನಾಗಿ ಮಾಡಿದ್ದು, ವಿಧಾನಸಭೆಯಲ್ಲಿ ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಜಿ.ಟಿ.ದೇವೇಗೌಡರು ಪಕ್ಷದ ಕೋರ್‌ ಕಮಿಟಿ ಅಧ್ಯಕ್ಷರಾಗಿದ್ದಾರೆ ಎಂದು ಸಮಾಧಾನದ ಮಾತುಗಳನ್ನು ಆಡಿದ್ದರು.

ಸಾ.ರಾ. ಮಹೇಶ್‌ ಮೇಲೂ ಮುನಿಸು
ಆಪ್ತ ವಲಯದಲ್ಲಿ ಅಳಲು ತೋಡಿಕೊಂಡಿರುವ, ಜಿ.ಟಿ. ದೇವೇಗೌಡ, ನನಗೆ ಸಿಗಬೇಕಿದ್ದ ಸ್ಥಾನವನ್ನು ಸುರೇಶ್‌ಬಾಬುಗೆ ಕೊಡಲಾಗಿದೆ. ಪಕ್ಷದಲ್ಲಿ ನನಗೆ ಪದೇಪದೆ ಅನ್ಯಾಯ ಆಗುತ್ತಲೇ ಇದೆ. ಈ ಹಿಂದೆ ಪಕ್ಷ ತೊರೆಯಲು ಸಿದ್ಧನಾಗಿದ್ದೆ. ಆದರೆ ಬಲವಂತಕ್ಕೆ ಉಳಿದುಕೊಂಡೆ. ಕೋರ್‌ ಕಮಿಟಿ ಅಧ್ಯಕ್ಷ ಸ್ಥಾನ ನೀಡಿದರು. ಇದರಿಂದ ಏನೂ ಪ್ರಯೋಜನವಿಲ್ಲ. ಪಕ್ಷದಲ್ಲಿ ಹಿರಿಯನಾದ ನನಗೆ ಜೆಡಿಎಲ್‌ಪಿ ನಾಯಕ ಸ್ಥಾನ ಸಿಗಬೇಕಿತ್ತು. ಮಾಜಿ ಸಚಿವ ಸಾ.ರಾ. ಮಹೇಶ್‌ ಕುತಂತ್ರದಿಂದ ನನಗೆ ಸ್ಥಾನ ತಪ್ಪಿದೆ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಮುಡಾ ಹೋರಾಟಕ್ಕೆ ಕೈಜೋಡಿಸುವರೇ?
ಇದೇ ಕಾರಣದಿಂದ ವಿಧಾನಸಭೆ ಕಲಾಪದಿಂದ ದೂರ ಉಳಿದಿದ್ದು ಮುಡಾ ನಿವೇಶನ ಹಂಚಿಕೆ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಬಳಿ ದಾಖಲೆ ಇದೆ ಎಂದಿದ್ದ ಜಿಟಿಡಿ, ಕಲಾಪಕ್ಕೆ ಬಾರದೆ ಮುನಿಸಿಕೊಂಡು ಮೈಸೂರಿನಲ್ಲೇ ಉಳಿದಿದ್ದಾರೆ. ಮುಡಾ ವಿಚಾರವಾಗಿ ಸೋಮವಾರದಿಂದ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು ಎಂದುಕೊಂಡಿರುವ ಮಿತ್ರಪಕ್ಷವೂ ಆಗಿರುವ ಅಧಿಕೃತ ವಿರೋಧ ಪಕ್ಷ ಬಿಜೆಪಿಗೆ ಸಾಥ್‌ ನೀಡಲಿದ್ದಾರೆಯೇ ಅಥವಾ ಕಲಾಪಕ್ಕೆ ಹಾಜರಾಗದೆ ಹಿಂದೆ ಸರಿಯುತ್ತಾರೆಯೇ ಎನ್ನುವ ಸಂಶಯ ಮೂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next