Advertisement

ಜೆಡಿಎಸ್‌-ಜೆಡಿಯು ಕಚೇರಿ ಕಲಹ

05:30 PM Sep 12, 2018 | |

ಹುಬ್ಬಳ್ಳಿ: ಇಲ್ಲಿನ ಲ್ಯಾಮಿಂಗ್ಟನ್‌ ರಸ್ತೆಯಲ್ಲಿರುವ ಜೆಡಿಯು ಕಚೇರಿ ಯಾರಿಗೆ ಸೇರಿದ್ದು ಎಂಬುದರ ಕುರಿತು ಜನತಾ ಪರಿವಾರದ ದಾಯಾದಿ ಕಲಹ ಇದ್ದೇ ಇದೆ. ಇದರ ನಡುವೆ ನಮ್ಮ ಪಕ್ಷದ ಅಧ್ಯಕ್ಷರ ಹೆಸರಿಗೆ ಕಚೇರಿಯ ಆಸ್ತಿ ಕರ ನೋಟಿಸ್‌ ಬಂದಿದೆ. ಕಚೇರಿ ನಮಗೆ ಸೇರಿದ್ದು ಎಂದು ಜೆಡಿಎಸ್‌ ಕಾರ್ಯಕರ್ತರು ಮಂಗಳವಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಜನತಾ ಪಕ್ಷದ ನಂತರ ಜನತಾದಳ ಬಳಿಕ ಸಂಯುಕ್ತ ಜನತಾದಳಕ್ಕೆ ಸೇರಿದ ಈ ಕಚೇರಿಯ ಬಗ್ಗೆ ಜನತಾ ಪರಿವಾರದ ದಾಯಾದಿಗಳ ನಡುವೆ ಕಲಹ ಇದೆ. ಸದ್ಯಕ್ಕೆ ಅದು ಜೆಡಿಯು ಸುಪರ್ದಿಯಲ್ಲಿದೆ. ಆದರೆ, ಪಾಲಿಕೆಯವರು ಜೆಡಿಎಸ್‌ ಮಹಾನಗರ ಜಿಲ್ಲಾಧ್ಯಕ್ಷರಿಗೆ ಸುಮಾರು 15 ಲಕ್ಷ ರೂ. ಆಸ್ತಿಕರ ಬಾಕಿ ಪಾವತಿಸುವಂತೆ ನೋಟಿಸ್‌ ಜಾರಿ ಮಾಡಿದ್ದಾರೆ.

ಕಚೇರಿಯೇ ತಮ್ಮ ಸುಪರ್ದಿಯಲ್ಲಿ ಇಲ್ಲ. ನಾವೇಕೆ ಆಸ್ತಿಕರ ಪಾವತಿಸಬೇಕು ಎಂಬುದು ಜೆಡಿಎಸ್‌ನವರ ವಾದವಾಗಿದೆ. ಅಲ್ಲದೆ ದಾಖಲೆಗಳಲ್ಲಿ ನಮ್ಮ ಹೆಸರೇ ಇರುವುದರಿಂದ ಕಚೇರಿ ತಮಗೆ ಸೇರಿದ್ದು, ಅದನ್ನು ಬಿಟ್ಟುಕೊಡಬೇಕು ಎಂದು ಒತ್ತಾಯಿಸಿ ಜೆಡಿಎಸ್‌ನ ಕೆಲ ಕಾರ್ಯಕರ್ತರು ಮಂಗಳವಾರ ಜೆಡಿಎಸ್‌ ಕಚೇರಿ ಕಟ್ಟಡದ ಎದುರು ಪ್ರತಿಭಟನೆ ನಡೆಸಿದರು. ಅಲ್ಲದೆ ಜೆಡಿಎಸ್‌ ಕಚೇರಿ ಎಂದು ನಾಮಫ‌ಲಕ ಹಾಕಿ, ಪಕ್ಷದ ಬಾವುಟ ಕಟ್ಟಿರುವುದು ಗೊಂದಲಕ್ಕೆ ಕಾರಣವಾಗಿದೆ. ಇಬ್ಬರ ನಡುವೆ ಒಪ್ಪಂದ: ಜನತಾ ಪಾರ್ಟಿ ಅಧ್ಯಕ್ಷರ ಹೆಸರಲ್ಲಿ ಆಸ್ತಿ ಇರುವುದರಿಂದ ಜೆಡಿಎಸ್‌ ಹಾಗೂ ಜೆಡಿಯು ಎರಡೂ ಪಕ್ಷಗಳಿಗೆ ಈ ಕಚೇರಿ ಅನ್ವಯಿಸುತ್ತದೆ. ಗಣೇಶ ಹಬ್ಬ ಇರುವುದರಿಂದ ಯಾವುದೇ ಬೆಳವಣಿಗೆಗೆ ಆಸ್ಪದ ನೀಡದೆ ಹಬ್ಬ ಮುಗಿದ ನಂತರ ಎರಡು ಪಕ್ಷದ ರಾಜ್ಯ ನಾಯಕರ ಸಮ್ಮುಖದಲ್ಲಿ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವ ಒಪ್ಪಂದಕ್ಕೆ ಬಂದಿದ್ದು, ಸದ್ಯ ತಾತ್ಕಾಲಿಕವಾಗಿ ಪ್ರಕರಣಕ್ಕೆ ತೆರೆ ಬಿದ್ದಿದೆ.

ತೆರಿಗೆ ಯಾರು ತುಂಬಬೇಕು: ಜೆಡಿಯು ಸುಪರ್ದಿಯಲ್ಲಿರುವ ಈ ಕಚೇರಿಯ ಆಸ್ತಿಕರ 15,69,847 ಬಾಕಿಯಿದ್ದು, ಇಷ್ಟೊಂದು ದೊಡ್ಡ ಮೊತ್ತದ ಬಾಕಿ ಹಣ ತುಂಬುವವರು ಯಾರು ಎಂಬುದು ಪ್ರಶ್ನೆಯಾಗಿದೆ. ಈ ಕಟ್ಟಡದ ಆಸ್ತಿ ಜನತಾ ಪಕ್ಷದ ಅಧ್ಯಕ್ಷರ ಹೆಸರಲ್ಲಿ ನೋಂದಣಿಯಾಗಿದೆ. ಇದೀಗ ಜನತಾ ಪಕ್ಷ ಇಲ್ಲಿ ಅಸ್ತಿತ್ವವೇ ಇಲ್ಲವಾಗಿದ್ದು, ಕರ ಪಾವತಿ ಯಾರು ಮಾಡಬೇಕು ಎಂಬ ಗೊಂದಲ ಸೃಷ್ಟಿಯಾಗಿದೆ.

ತೆರಿಗೆ ಪಾವತಿಸಲು ನಾವು ಸಿದ್ಧರಿದ್ದೇವೆ. ಆದರೆ ಇಲ್ಲಿಯವರೆಗೆ ಜೆಡಿಯು ಪಕ್ಷದವರು ಈ ಆಸ್ತಿಯನ್ನು ಅನುಭವಿಸಿದ್ದಾರೆ. ಅಲ್ಲದೆ ಈ ಆಸ್ತಿ ಜನತಾ ಪಾರ್ಟಿ ಅಧ್ಯಕ್ಷರ ಹೆಸರಲ್ಲಿ ಇರುವುದರಿಂದ ತೆರಿಗೆ ಪಾವತಿ ಮಾಡುವಲ್ಲಿ ಗೊಂದಲ ಸೃಷ್ಟಿಸಿದೆ. ಈ ಕುರಿತು ರಾಜ್ಯ ನಾಯಕರ ಸಮ್ಮುಖದಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.
ರಾಜಣ್ಣ ಕೊರವಿ
ಮಹಾನಗರ ಜೆಡಿಎಸ್‌ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next