ಬೇತಮಂಗಲ: ಮುಂಬರುವ 2023ರ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಸಂಪೂರ್ಣ ಅಧಿಕಾರ ನೀಡಿ, ಕುಮಾರಸ್ವಾಮಿ ಅವರ ಕೈ ಬಲಪಡಿಸಿದರೆ ಆರೋಗ್ಯ, ಶಿಕ್ಷಣ, ನೀರಾವರಿ ಸೇರಿದಂತೆ ಮೂಲ ಸೌಲಭ್ಯಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಎಂಎಲ್‌ಸಿ ಇಂಚರ ಗೋವಿಂದ ರಾಜು ಹೇಳಿದರು.
ಪಟ್ಟಣದ ಬಳಿಯ ಬಡಮಾಕನಹಳ್ಳಿ ಗ್ರಾಮದಲ್ಲಿ ಬೇತಮಂಗಲ ಗ್ರಾಮಾಂತರ ಅಧ್ಯಕ್ಷ ರಮೇಶ್ ಬಾಬು ನೇತೃತ್ವದಲ್ಲಿ ಜನತಾ ಜಲಧಾರೆ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದ ಪ್ರತಿ ಹಳ್ಳಿಗೂ ನೀರು ಕಲ್ಪಿಸುವ ಉದ್ದೇಶವನ್ನು ಮಾಜಿ ಸಿಎಂ ಕುಮಾರಸ್ವಾಮಿ ಹೊಂದಿದ್ದು, ಜಲ ಸಂಪನ್ಮೂಲಗಳನ್ನು ಕಾರ್ಯರೂಪಕ್ಕೆ ಕಾನೂನಾತ್ಮಕವಾಗಿ ನದಿಗಳ ಜೋಡಣೆ, ನದಿ ನಾಲೆಗಳ ಪುನಶ್ವೇತನಗೊಳಿಸಲು ಪ್ರತಿ ವರ್ಷಕ್ಕೆ 2.50 ಲಕ್ಷ ಕೋಟಿ ರೂ., ಹಣ ಮೀಸಲಿಡಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳಿಗೂ ಬದ್ಧತೆಯಿಲ್ಲ. ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತವೆ. ಆದರೆ, ರೈತರ, ಬಡವರ ಪರ ಕಾಳಜಿಯುಳ್ಳ ಪಕ್ಷ ಜೆಡಿಎಸ್ ಆಗಿದೆ. ಮುಂಭರುವ 2023ರ ಚುನಾವಣೆಯಲ್ಲಿ ಸಂಪೂರ್ಣ ಬೆಂಬಲ ನೀಡಬೇಕು. ಮೈತ್ರಿ ಸರ್ಕಾರದ ಅವಧಿಯಲ್ಲಿ 20 ಸಾವಿರ ಕೋಟಿ ರೂ., ರೈತರ ಸಾಲಮನ್ನಾ ಮಾಡಿದ್ದಾರೆ ಎಂದು ತಿಳಿಸಿದರು.
ನೀರಿನ ಯೋಜನೆ ಅನುಷ್ಠಾನಕ್ಕೆ ಯಾತ್ರೆ: ಸಮಾಜ ಸೇವಕ ಹಾಗೂ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ರಾಜ್ಯದ ಜನರಿಗೆ ಶುದ್ಧ ಕುಡಿಯುವ ನೀರು ಪೊರೈಸುವ ಯೋಜನೆ ಅನುಷ್ಠಾನಗೊಳಿಸಲು 180 ವಿಧಾನ ಸಭಾ ಕ್ಷೇತ್ರಗಳಲ್ಲಿ ಜನತಾ ಜಲಧಾರೆ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಕುಮಾರ ಸ್ವಾಮಿ ಅವರಿಗೆ ಮಾತ್ರ ಜನರ ಕಷ್ಟ-ಸುಖದ ಬಗ್ಗೆ ಗೊತ್ತಿದೆ. ಕಾರ್ಯಕರ್ತರು ಸಂಘಟಿತರಾಗಿ, ಕುಮಾರಸ್ವಾಮಿ ಕೈ ಬಲಪಡಿಸಿದರೆ ಮಾತ್ರ ಸಂವೃದ್ಧಿ ಸರ್ಕಾರ ರಚನೆಯಾಗಲಿದೆ. ಕೆಜಿಎಫ್ ಕ್ಷೇತ್ರಕ್ಕೆ ಶೀಘ್ರದಲ್ಲೇ ಹೊಸ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಚರ್ಚೆ ಮಾಡುತ್ತೇವೆ ಎಂದರು.
ಬಡಮಾಕನಹಳ್ಳಿಯಿಂದ ಬೇತಮಂಗಲ, ಗುಟ್ಟಹಳ್ಳಿ, ಸುಂದರಪಾಳ್ಯ, ರಾಮಸಾಗರ, ಕ್ಯಾಸಂಬಳ್ಳಿ ಮೂಲಕ ಕೆಜಿಎಫ್ ನಗರ ನಂತರ ಬಂಗಾರಪೇಟೆಗೆ ಜನತಾ ಜಲಧಾರೆ ಯಾತ್ರೆ ಸೇರಿತು. ಬಡಮಾಕನಹಳ್ಳಿಯಿಂದ ಇಡೀ ಕೆಜಿಎಫ್ ತಾಲೂಕಿನ ಜಲಧಾರೆ ಯಾತ್ರೆಯಲ್ಲಿ ಬೈಕ್ ರ್ಯಾಲಿ ನಡೆದಿದ್ದು, ಎಲ್ಲರ ಗಮನ ಸೆಳೆಯಿತು.
ಜೆಡಿಎಸ್ ಮುಖಂಡರಾದ ವಕ್ಕಲೇರಿ ರಾಮು, ಕಾರ್ಯದರ್ಶಿ ನಟರಾಜ್, ಸುರೇಶ್, ಕೆಜಿಎಫ್ ಘಟಕ ಅಧ್ಯಕ್ಷ ದಯಾನಂದ್, ಗ್ರಾಮಾಂತರ ಅಧ್ಯಕ್ಷ ರಮೇಶ್ ಬಾಬು, ಮುಖಂಡರಾದ ಯೋಗೇಶ್, ಸುರೇಂದ್ರ, ಆನಂದ್, ಕಾರಿ ರವಿ, ಶ್ರೀನಾಥ್, ಪ್ರವೀಣ್, ವಿಕ್ಕಿ, ಮಧು, ಚಲಪತಿ, ಚೌಡಪ್ಪ, ತಿಮ್ಮರಾಜು, ಎಂಜಿನಿಯರ್ ಭರತ್ ಹಾಗೂ ಕಾರ್ಯಕರ್ತರು, ಮುಖಂಡರು ಹಾಜರಿದ್ದರು.