ಬೆಂಗಳೂರು: ‘ಮೈತ್ರಿ ಸರ್ಕಾರ ಪತನವಾಗಿರುವುದಕ್ಕೆ ನಮಗೇನೂ ತೊಂದರೆ ಇಲ್ಲ. ಸರ್ಕಾರ ರಚನೆ ಮಾಡಿ ನನ್ನ ಮಗ ಎಷ್ಟು ಕಷ್ಟ ಪಟ್ಟಿದ್ದಾನೆ ಎಂಬುದು ನನಗೆ ಗೊತ್ತಿದೆ. ಇದೇ ಜೆಪಿ ಭವನದಲ್ಲಿ ಹದಿನೈದು ನಿಮಿಷ ಕಣ್ಣೀರು ಹಾಕಿದ್ದಾನೆ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹದಿನಾಲ್ಕು ತಿಂಗಳಿಗೆ ಸರ್ಕಾರ ಹೋಯಿತಲ್ಲಾ ಎಂಬ ನೋವು ಕಾಂಗ್ರೆಸ್‌ನವರಿಗೂ ಇದೆ, ಜೆಡಿಎಸ್‌ನವರಿಗೂ ಇದೆ. ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಕುರಿತು ಜಿ.ಟಿ.ದೇವೇಗೌಡರು ಹೇಳಿದ ಮಾತನ್ನು ದೊಡ್ಡದು ಮಾಡುವ ಅಗತ್ಯವಿಲ್ಲ. ಈಗ್ಯಾಕೆ ಆ ಮಾತು? ಮೈತ್ರಿ ಬಗ್ಗೆ ನಾನು ಮತ್ತು ಕುಮಾರಸ್ವಾಮಿ ತೀರ್ಮಾನ ಮಾಡ್ತೇವೆ. ಶಾಸಕರಿಗೆ ಆ ಚಿಂತೆ ಬೇಡ ಎಂದು ತಿಳಿಸಿದರು.
ನಾವು ಪ್ರಾದೇಶಿಕ ಪಕ್ಷವಾಗಿ ಪ್ರತಿಪಕ್ಷದಲ್ಲಿ ಕುಳಿತು ರಚನಾತ್ಮಕವಾಗಿ ಕೆಲಸ ಮಾಡುತ್ತೇವೆ. ನಾವು ಎಲ್ಲದಕ್ಕೂ ವಿರೋಧ ಮಾಡಲ್ಲ. ವಿಷಯಾಧಾರಿತ ಬೆಂಬಲ ಕೊಡುತ್ತೇವೆಂದು ತಿಳಿಸಿದರು. ದ್ವೇಷದ ರಾಜಕಾರಣ ಮಾಡಲ್ಲ ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆ ಸ್ವಾಗತಿಸಿದ ಅವರು, ರಾಜ್ಯಕ್ಕೆ ಒಳ್ಳೆಯದನ್ನು ಮಾಡಿದರೆ ನಮ್ಮ ಬೆಂಬಲ ಇರು ತ್ತದೆ. ಹಣಕಾಸು ಮಸೂದೆಗೆ ಎಲ್ಲರೂ ಒಪ್ಪಿಗೆ ನೀಡಿದರೆ ನಾವೂ ಒಪ್ಪಿಗೆ ನೀಡುತ್ತೇವೆ ಎಂದರು.
ಲೋಕಸಭೆ ಚುನಾವಣೆ ನಂತರ ನಾನು ಪಕ್ಷ ಸಂಘಟಿಸುವ ಕೆಲಸ ಮಾಡುತ್ತಿದ್ದೇನೆ. ಆ ಬಗ್ಗೆ ಮಾತ್ರ ನನ್ನ ಗಮನವಿದೆ. ಜೆಡಿಎಸ್‌ನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. ಆಗಸ್ಟ್ 7ರಂದು ಕಾಯಕರ್ತರ ಸಮಾವೇಶ, ಎರಡನೇ ವಾರದಲ್ಲಿ ಮಹಿಳಾ ಸಮಾವೇಶ ಮಾಡುತ್ತೇವೆ ಎಂದು ಹೇಳಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಗೋಪಾಲಯ್ಯ ಅವರು, ಕುಮಾರಸ್ವಾಮಿ ವಿರುದ್ಧವೂ ಆರೋಪ ಮಾಡಿದ್ದಾರೆ. ಶಾಸಕರ ರಾಜೀನಾಮೆ ವಿಚಾರ ಸ್ಪೀಕರ್ ಅವರ ಪರಿಶೀಲನೆಯಲ್ಲಿದೆ. ಅವರ ತೀರ್ಪು ಬರಲಿ ನೋಡೋಣ, ಉಪ ಚುನಾವಣೆ ಬರುತ್ತೋ ಇಲ್ಲವೋ ನೋಡೋಣ ಎಂದು ತಿಳಿಸಿದರು.
ಉಪ ಚುನಾವಣೆಗೆ ಸಜ್ಜಾಗೋಣ: ಶನಿವಾರ ರಾಜರಾಜೇಶ್ವರಿ ನಗರ ಹಾಗೂ ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿದ ದೇವೇಗೌಡರು, ಉಪ ಚುನಾವಣೆಗೆ ಸಜ್ಜಾಗೋಣ ಎಂದು ಹೇಳಿದರು. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮುಖಂಡರ ಜತೆ ಚರ್ಚಿಸಿದರು. ಕಾಂಗ್ರೆಸ್ ಜತೆ ಮೈತ್ರಿ ಬೇಡ ಎಂದು ಹೇಳಿದ ಕೆಲವು ನಾಯಕರು, ರಾಜರಾಜೇಶ್ವರಿ ನಗರಕ್ಕೆ ನಿಖೀಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿ ಸಬೇಕು ಎಂದು ಮನವಿ ಮಾಡಿದರು. ಆದರೆ, ಇದಕ್ಕೆ ದೇವೇಗೌಡರು, ಮಂಡ್ಯದಲ್ಲಿ ಸ್ಪರ್ಧೆ ಮಾಡಿ ಎದುರಿಸಿದ ಆರೋಪಗಳು ಸಾಕು. ದಯವಿಟ್ಟು ನಿಷ್ಠಾವಂತ ಕಾರ್ಯಕತರನ್ನು ಹುಡುಕಿ ಅಭ್ಯರ್ಥಿ ಮಾಡೋಣ ಎಂದು ಹೇಳಿದರು ಎಂದು ಹೇಳಲಾಗಿದೆ.