ಬೆಂಗಳೂರು: ಲೋಕಸಭಾ ಚುನಾವಣೆಗೆ ಜೆಡಿಎಸ್‌ಗೆ ಸೀಟು ಬಿಟ್ಟು ಕೊಟ್ಟಿರುವ ವಿಷಯದಲ್ಲೂ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಬೇಸರ, ಅಸಮಾಧಾನ, ತಳಮಳ ಇದ್ದರೂ ಹೇಳಿಕೊಳ್ಳಲಾಗದ ಬೇಗುದಿ ಸ್ಥಿತಿ ನಿರ್ಮಾಣವಾಗಿದೆ.
ರಾಷ್ಟ್ರ ರಾಜಕಾರಣದ ದೃಷ್ಟಿಯಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾತಿಗೆ ಕಟ್ಟು ಬಿದ್ದು ಮೈತ್ರಿ ಮಾಡಿಕೊಂಡಿರುವ ರಾಜ್ಯ ಕಾಂಗ್ರೆಸ್ ನಾಯಕರು ಜೆಡಿಎಸ್‌ನ ಬೇಡಿಕೆಗಳಿಗೆ ಸಮ್ಮತಿಸಿ ಕೈ ಕಟ್ಟಿ ನಿಲ್ಲುವಂತಹ
ಪರಿಸ್ಥಿತಿ ಬಂದಿರುವುದು ಪಕ್ಷದ ಅನೇಕ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಆದರೆ, ಸೀಟು ಹಂಚಿಕೆಯಲ್ಲಿ ಬಯಸಿದ ಮೈಸೂರು ಕ್ಷೇತ್ರ ಸಿಗಲಿಲ್ಲ. ತಾನು ಬಯಸದ ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರ ನೀಡಲಾಗಿದೆ ಎಂಬ ಎಂಬ ಬೇಸರ ಜೆಡಿಎಸ್‌ಗೆ ಇದೆಯಾದರೂ ಅಂತಿಮವಾಗಿ ಸಮಾಧಾನಪಟ್ಟುಕೊಂಡಂತಿದೆ. ರಾಜ್ಯ ದಲ್ಲಿ ಸಮ್ಮಿಶ್ರ ಸರ್ಕಾರ ಇದ್ದು ಕಾಂಗ್ರೆಸ್ 80 ಸ್ಥಾನ ಪಡೆದರೂ 37 ಸ್ಥಾನ ಪಡೆದ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿರುವುದರಿಂದ ಲೋಕಸಭೆ ಸೀಟು ಹಂಚಿಕೆಯಲ್ಲಿ ಅನಾವಶ್ಯಕ ಜಗಳ ಮಾಡಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಸುಮ್ಮ ನಾಗಿದೆ. ಜತೆಗೆ ಕಳೆದ ಬಾರಿ ಇದ್ದ 2 ಕ್ಷೇತ್ರಗಳಿಗಿಂದ ಈ ಬಾರಿ ಗುರಿಯಿಟ್ಟು ರುವ 6 ಕ್ಷೇತ್ರಗಳು ತನ್ನ ಪಾಲಿಗೆ ಬಂದರೆ ಅದುವೇ ಪಂಚಾಮೃತ ಎಂದು ಜೆಡಿ ಎಸ್ ನಾಯಕರು ಅಂದುಕೊಂಡಿದ್ದಾರೆ. ಬುಧವಾರ ಬಿಡುಗಡೆಯಾಗಿರುವ ಸೀಟು ಹಂಚಿಕೆಯ ಪಟ್ಟಿಯನ್ನು ರಾಜ್ಯ ಕಾಂಗ್ರೆಸ್ ನಾಯಕರು ಬೇಸರದಿಂದಲೇ ಒಪ್ಪಿಕೊಳ್ಳುವಂತಾಗಿದೆ. 2-3 ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿರುವ ಜೆಡಿಎಸ್ ಪಟ್ಟು ಹಿಡಿದು 8 ಕ್ಷೇತ್ರಗಳನ್ನು ಪಡೆದುಕೊಂಡಿದ್ದರಿಂದ ಕಾಂಗ್ರೆಸ್ ಗೆಲ್ಲಲು ಸಾಧ್ಯವಿದ್ದ ಮೂರ್ನಾಲ್ಕು ಕ್ಷೇತ್ರಗಳನ್ನು ಅನಾಯಾಸವಾಗಿಕಳೆದುಕೊಳ್ಳುವಂತಾಗಿದೆ ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಮೈತ್ರಿ ಧರ್ಮದ ಪ್ರಕಾರ ಎರಡೂ ಪಕ್ಷಗಳು ಹಾಲಿ ಸಂಸದರಿರುವ ಕ್ಷೇತ್ರಗಳನ್ನು ಬಿಟ್ಟುಕೊಡಬಾರದು ಎಂದು ಒತ್ತಡ ಹೇರಿದ್ದರೂ, ಹಾಲಿ ಸಂಸದರಿರುವ ತುಮಕೂರು ಕ್ಷೇತ್ರವನ್ನು ಪಡೆದುಕೊಂಡು ಕಾಂಗ್ರೆಸ್ ಗೆಲ್ಲುವ ಅವಕಾಶ ಇರುವ ಕ್ಷೇತ್ರ ಕೈ ತಪ್ಪುವಂತೆ ಮಾಡಿದರು. ಅಲ್ಲದೇ ಈ ಮೂಲಕ ತಮ್ಮ ಪಕ್ಷದಿಂದಲೇ ವಲಸೆ ಹೋಗಿದ್ದ ಹಾಲಿ ಸಂಸದ ಮುದ್ದ ಹನುಮೇಗೌಡ ಅವರ ರಾಜಕೀಯ ಭವಿಷ್ಯವನ್ನೂ ಮಂಕು ಮಾಡಿದಂತಾಗಿದೆ.
ಜೆಡಿಎಸ್ ತೆಕ್ಕೆಯಲ್ಲಿ ರುವ ಹಾಸನ, ಮಂಡ್ಯ ಕ್ಷೇತ್ರದಲ್ಲಿ ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ ಬಿಟ್ಟುಕೊಡುವಂತೆ ಕೇಳಿ ದರೂ ಜೆಡಿಎಸ್‌ನವರು ಮಂಡ್ಯ ಬಿಟ್ಟುಕೊಡಲಿಲ್ಲ. ಒಂದೊಮ್ಮೆ ಕಾಂಗ್ರೆಸ್‌ನಿಂದ ಸುಮಲತಾಗೆ ಟಿಕೆಟ್ ನೀಡಿದ್ದರೆ ಗೆಲ್ಲುವ ಅವಕಾಶ ಇತ್ತು. ಈಗ ಅದನ್ನೂ ಕಳೆದುಕೊಂಡಂತಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾ ಗುತ್ತಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲೂ ಜೆಡಿಎಸ್‌ಗೆ ಹೇಳಿಕೊಳ್ಳುವಂತಹ ಅಭ್ಯರ್ಥಿ ಇಲ್ಲದಿದ್ದರೂ, ದೇವೇಗೌಡರು ಪಟ್ಟು ಹಿಡಿದು ಪಡೆದುಕೊಳ್ಳುವ ಮೂಲಕ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮಾಜಿ ಸಂಸದ ಸಿ.ನಾರಾಯಣ ಸ್ವಾಮಿ, ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಅವರಿಗೆ ಇದ್ದ ಅವಕಾಶ ತಪ್ಪಿದಂತಾಗಿದೆ. ಜೆಡಿಎಸ್‌ನಿಂದ ದೂರವಾಗಿ ಕಾಂಗ್ರೆಸ್ ಸೇರಿದವರನ್ನು ವ್ಯವಸ್ಥಿತವಾಗಿ ತೆರೆಗೆ ಸರಿಸುವ ತಂತ್ರ ದೇವೇಗೌಡರು ಅನುಸರಿಸಿದ್ದಾರೆ ಎಂಬ ಮಾತುಗಳು ಕೈ ಪಾಳಯದಲ್ಲಿ ಕೇಳಿ ಬರುತ್ತಿದೆ.
ಚಿಕ್ಕಮಗಳೂರು-ಉಡುಪಿ, ವಿಜಯಪುರ ಹಾಗೂ ಉತ್ತರ ಕನ್ನಡ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ ಗೆಲ್ಲುವ ಸಾಧ್ಯತೆ ಇತ್ತು ಎನ್ನಲಾಗಿತ್ತು. ಅಲ್ಲದೇ 3 ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಭದ್ರ ನೆಲೆ ಇಲ್ಲದಿದ್ದರೂ, ಅವರಿಗೆ ಕ್ಷೇತ್ರ ಬಿಟ್ಟು ಕೊಟ್ಟು ಕಾಂಗ್ರೆಸ್ ತನ್ನ ಶಕ್ತಿಯನ್ನು ತಾನೇ ಕಳೆದುಕೊಳ್ಳುವಂ ತಾಗಿದೆ. ಆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಆ ಪಕ್ಷದ ಕಾರ್ಯಕರ್ತರಿಗೆ ಅಸಮಾಧಾನ ಇರುವುದರಿಂದ 3 ಕ್ಷೇತ್ರಗಳಲ್ಲಿ ಅಲ್ಲದಿದ್ದರೂ ಕನಿಷ್ಠ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ವರದಾನವಾಗುತ್ತಿತ್ತು. ಆದರೆ, ಗೆಲ್ಲುವ ಮಂತ್ರಕ್ಕಿಂತ ಹೆಚ್ಚಿನ ಸೀಟು ಪಡೆಯುವ ಹಠಕ್ಕೆ ಬಿದ್ದು, ಜೆಡಿಎಸ್ 8 ಕ್ಷೇತ್ರಗಳನ್ನು ಪಡೆದು ಕೊಂಡಿರುವುದು ಮೈತ್ರಿಯ ಲೆಕ್ಕಾಚಾರದ ಬಗ್ಗೆಯೇ ಅನೇಕ ಕಾಂಗ್ರೆಸ್ ನಾಯಕರು ಒಳಗೊಳಗೆ ಅಸಮಾಧಾನ ಹೊರಹಾಕುವಂತಾಗಿದೆ.
ಕಾಂಗೆಸ್‌ಗೆ ದೊರೆತಿರುವ 20 ಕ್ಷೇತ್ರಗಳಲ್ಲಿ ಚಿಕ್ಕಬಳ್ಳಾ ಪುರ, ಕೋಲಾರದಲ್ಲಿ ಜೆಡಿಎಸ್ ಸ್ಪರ್ಧೆ ಮಾಡಿ ದರೇನೆ ಕಾಂಗ್ರೆಸ್ ಗೆಲುವಿಗೆ ಅನುಕೂಲವಾಗುತ್ತಿತ್ತು ಎಂಬ ಲೆಕ್ಕಾಚಾರ ಹಾಕಲಾಗಿದೆ. ಆ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಮಾಡದಿರುವುದು ಕೈ ಅಭ್ಯರ್ಥಿ ಗಳಿಗೇ ನಷ್ಟ ಎಂಬ ವಿಶ್ಲೇಷಣೆ ಮಾಡಲಾಗುತ್ತಿದೆ. ಬಿಜೆಪಿ ಸಂಸದರಿರುವ ಉ.ಕರ್ನಾಟಕ, ಕರಾವಳಿ ಭಾಗದಲ್ಲಿ ಜೆಡಿಎಸ್‌ನಿಂದ ಕಾಂಗ್ರೆಸ್ ಹೆಚ್ಚಿನ ಪ್ರಯೋಜನವಾಗುವುದಿಲ್ಲ ಎಂಬ ಮಾತುಗಳು ಕಾಂಗ್ರೆಸ್‌ನಲ್ಲಿ ಕೇಳಿ ಬರುತ್ತಿದೆ. ಹೈಕಮಾಂಡ್ ಆದೇಶದಿಂದ ಜೆಡಿ ಎಸ್‌ನ ಎಲ್ಲ ಬೇಡಿಕೆಗಳಿಗೂ ಸಮ್ಮತಿ ನೀಡುತ್ತಿರುವುದು ಸ್ಥಳೀಯ ಕಾರ್ಯಕರ್ತರಿಗಷ್ಟೇ ಅಲ್ಲ. ರಾಜ್ಯ ನಾಯಕರಿಗೂ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಶಂಕರ ಪಾಗೋಜಿ