Advertisement

ಚುನಾವಣೆ ಗುಂಗಿನಲ್ಲಿ ತೆನೆಹೊತ್ತ ಮಹಿಳೆ

11:15 PM Sep 11, 2019 | Lakshmi GovindaRaju |

ಬೆಂಗಳೂರು: ಮುಂಬರುವ ಏಪ್ರಿಲ್‌ ಒಳಗೆ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಬಹುದೆಂಬ ಲೆಕ್ಕಾಚಾರದಲ್ಲಿರುವ ಜೆಡಿಎಸ್‌ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ತಳ ಮಟ್ಟದಿಂದ ಪಕ್ಷ ಬಲವರ್ಧನೆ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ರಾಜ್ಯ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. ಅಲ್ಲದೇ, ಜಿಲ್ಲಾ ಮಟ್ಟದಲ್ಲಿ ಸಮಾವೇಶಗಳನ್ನು ನಡೆಸಲು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಅವರಿಗೆ ಸೂಚನೆ ನೀಡಲಾಗಿದೆ.

Advertisement

ಪಾದಯಾತ್ರೆ: ಪ್ರಚಾರ ಸಮಿತಿ ಆಧ್ಯಕ್ಷ ವೈ.ಎಸ್‌. ವಿ.ದತ್ತಾ, ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ, ಯುವ ಘಟಕದ ಅಧ್ಯಕ್ಷ ನಿಖೀಲ್‌ ಕುಮಾರಸ್ವಾಮಿ ಈ ಮಾಸಾಂತ್ಯ ಅಥವಾ ಅಕ್ಟೋಬರ್‌ನಲ್ಲಿ ಪಾದಯಾತ್ರೆ ಕೈಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ನಡುವೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವವರ 17 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದರೆ ಎಲ್ಲಾ ಕಡೆ ಸ್ವತಂತ್ರವಾಗಿ ಸ್ಪರ್ಧೆ ಮಾಡಿ ಪಕ್ಷದ ಶಕ್ತಿ ಪ್ರದರ್ಶನಕ್ಕೂ ತೀರ್ಮಾನಿಸಲಾಗಿದೆ. ಈಗಾಗಲೇ ಪ್ರತಿ ಕ್ಷೇತ್ರಕ್ಕೆ ಮೂವರು ಸಂಭವನೀಯ ಅಭ್ಯರ್ಥಿಗಳನ್ನು ಗುರುತಿಸಲಾಗಿದೆ ಎಂದು ಹೇಳಲಾಗಿದೆ.

ನಿಷ್ಠಾವಂತರಿಗೆ ಸ್ಥಾನಮಾನ: ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಇದ್ದಾಗ ಪಕ್ಷ ಸಂಘಟನೆಯತ್ತ ಗಮನಹರಿಸದಿರುವುದು ಹಾಗೂ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ನಿಗಮ-ಮಂಡಳಿ ಅಧ್ಯಕ್ಷಗಿರಿ ಸೇರಿ ಅಧಿಕಾರ ನೀಡದಿರುವುದರಿಂದ ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರಿದೆ. ಇದೀಗ ಆ ವ್ಯತ್ಯಾಸ ಸರಿಪಡಿಸಿ ಕಾರ್ಯಕರ್ತರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ್ತೆ ಪಕ್ಷ ಸಂಘಟಿಸುವ ಸವಾಲು ಎದುರಾಗಿದೆ. ಹೀಗಾಗಿ, ಇನ್ನು ಮುಂದೆ ನಿಷ್ಠಾವಂತ ಕಾರ್ಯಕರ್ತರು, ಮುಖಂಡರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಮಾಜಿ ಸಿಎಂ ಎಚ್‌. ಡಿ.ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿಗೆ ಸೂಚನೆ ನೀಡಿದ್ದಾರೆನ್ನಲಾಗಿದೆ.

ರಾಜ್ಯ ಪ್ರವಾಸ ಹಾಗೂ ಜಿಲ್ಲಾ ಮಟ್ಟದ ಸಮಾವೇಶಗಳ ಜತೆ ಜತೆಯಲ್ಲೇ ಹಿಂದುಳಿದ, ಅಲ್ಪಸಂಖ್ಯಾತ, ದಲಿತ, ಮಹಿಳಾ, ರೈತ ಹಾಗೂ ಕಾರ್ಮಿಕರ ಸಮಾವೇಶಗಳನ್ನು ರಾಜ್ಯದ ಎಲ್ಲಾ ವಿಭಾಗಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ ಮಹಿಳಾ ಸಮಾವೇಶ, ಉತ್ತರ ಕರ್ನಾಟಕ ಭಾಗದಲ್ಲಿ ರೈತ ಸಮಾವೇಶ, ಚಿತ್ರದುರ್ಗ ಅಥವಾ ತುಮಕೂರಿನಲ್ಲಿ ಹಿಂದುಳಿದ ವರ್ಗಗಳ ಸಮಾವೇಶ, ಮಂಡ್ಯ ಅಥವಾ ಮೈಸೂರಿನಲ್ಲಿ ರೈತ ಸಮಾವೇಶ, ಕಲಬುರಗಿಯಲ್ಲಿ ಕಾರ್ಮಿಕ ಸಮಾವೇಶ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಕ್ಷ ಸಂಘಟನೆಗೆ ಒತ್ತು: ನೂತನ ಸರ್ಕಾರದ ವಿರುದ್ಧ ಮೂರು ತಿಂಗಳ ಮಟ್ಟಿಗೆ ಯಾವುದೇ ರೀತಿಯ ವಿರೋಧ ಅಥವಾ ಹೋರಾಟಕ್ಕೆ ಮುಂದಾಗುವುದು ಬೇಡ. ಸರ್ಕಾರದ ವಿರುದ್ಧ ಮಾತನಾಡಿದರೆ ಒಂದು ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಅದರ ಬದಲು ಪಕ್ಷ ಸಂಘಟನೆಗೆ ಒತ್ತು ನೀಡೋಣ. 4 ತಿಂಗಳ ಬಳಿಕ, ಸರ್ಕಾರದ ಕಾರ್ಯವೈಖರಿ ನೋಡಿ ವಿಷಯಾಧಾರಿತವಾಗಿ ಹೋರಾಟ ರೂಪಿಸುವುದು ಸೂಕ್ತ ಎಂಬ ನಿಲುವಿಗೆ ಬರಲಾಗಿದೆ ಎಂದು ಹೇಳಲಾಗಿದೆ.

Advertisement

* ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next