Advertisement

ನೀರಾವರಿ ಯೋಜನೆಗೆ ಜೆಡಿಎಸ್‌ ಆಶಾಕಿರಣ

06:02 PM Aug 26, 2021 | Team Udayavani |

ಹುಬ್ಬಳ್ಳಿ: ಉತ್ತರ ಕರ್ನಾಟಕದ ಎರಡು ಪ್ರಮುಖ ನೀರಾವರಿ ಯೋಜನೆಗಳು ಸೇರಿದಂತೆ ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನ ನಿಟ್ಟಿನಲ್ಲಿ ಹೋರಾಟಕ್ಕೆ ಜೆಡಿಎಸ್‌ ಕಂಕಣ ತೊಟ್ಟಿದೆ.

Advertisement

ಈ ಹೋರಾಟ ಕೇವಲ ರಾಜಕೀಯ ಪರಿಮಿತಿ ಇಲ್ಲವೇ ಮತ್ತೊಂದು  ಪ್ರಹಸನವಾಗದೆ ಜನರ ಭಾವನೆಗಳಿಗೆ ಬಲ ನೀಡುವ ಧ್ವನಿ ಆಗಲಿ ಎಂಬುದು ಈ ಭಾಗದ ಜನರ ಆಶಯ. ಕೃಷ್ಣಾ ಮೇಲ್ದಂಡೆ, ಮಹದಾಯಿ, ಮೇಕೆದಾಟು ಹಾಗೂ ಎತ್ತಿನಹೊಳೆ ನೀರಾವರಿ ಯೋಜನೆಗಳ ಕುರಿತಾಗಿ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುವ ಮೂಲಕ ಹಲವಾರು ದಶಕಗಳಿಂದ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು, ರಾಜ್ಯದ ಪಾಲಿನ ನೀರು ಬಳಕೆಗೆ ಸಾಧ್ಯವಾಗದ ಸ್ಥಿತಿ ಬಗ್ಗೆ ಗಮನ ಸೆಳೆಯುವ ಯತ್ನವನ್ನು ಜೆಡಿಎಸ್‌ ಮಾಡಿದ್ದು, ಇದರ
ಮುಂದುವರಿದ ಭಾಗವಾಗಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಪಾದಯಾತ್ರೆಗೆ ಮುಂದಡಿ ಇರಿಸಿದೆ.

ಕೃಷ್ಣಾ, ಕಾವೇರಿ, ತುಂಗಭದ್ರಾ, ಮಹದಾಯಿ ಸೇರಿದಂತೆ ಯಾವುದೇ ನದಿ ನೀರಿನ ಹಂಚಿಕೆ ಹಾಗೂ ನೀರಾವರಿ ಯೋಜನೆಗಳ ವಿಚಾರಕ್ಕೆ ಬಂದರೆ ಕೇಂದ್ರದಿಂದ ಕರ್ನಾಟಕ ಒಂದು ರೀತಿಯಲ್ಲಿ ಮಲತಾಯಿ ಧೋರಣೆಗೆ ಸಿಲುಕುತ್ತಲೇ ಬಂದಿದೆ. ಅದು ಯಾವುದೇ ಪಕ್ಷದ ಸರ್ಕಾರ ಇದ್ದರೂ ರಾಜ್ಯಕ್ಕೆ ಒಂದಿಲ್ಲೊಂದು ರೀತಿಯ ಅನ್ಯಾಯವಾಗುತ್ತ ಬಂದಿದೆ. ರಾಜಕೀಯ ಬಲ, ಒತ್ತಡ ತಂತ್ರ ಬಳಸಿ ನೆರೆಯ ರಾಜ್ಯಗಳು ಕಾಲಕಾಲಕ್ಕೆ ನಮ್ಮ ಮೇಲೆ ಸವಾರಿ ಮಾಡುತ್ತಲೇ ಬಂದಿವೆ.

ಮೂರು ಯೋಜನೆಗಳ ಪ್ರಸ್ತಾಪ: ರಾಜ್ಯದ ಪ್ರಮುಖ ಮೂರು ನೀರಾವರಿ ಯೋಜನೆಗಳು ಅನೇಕ ದಶಕಗಳಿಂದ ನನೆಗುದಿಗೆ ಬಿದ್ದಿದ್ದು, ಅವುಗಳ
ಅನುಷ್ಠಾನಕ್ಕಿರುವ ಅಡ್ಡಿ ನಿವಾರಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕೆಂಬ ಒತ್ತಾಯದೊಂದಿಗೆ ಜೆಡಿಎಸ್‌ ಹೋರಾಟಕ್ಕೆ ಮುಂದಾಗಿದೆ. ಯುಕೆಪಿ, ಮಹದಾಯಿ ಹಾಗೂ ಮೇಕೆದಾಟು ಯೋಜನೆಗಳ ಚಿತ್ರಣ, ವಾಸ್ತವದ ಸ್ಥಿತಿ, ಅಡ್ಡಿಯ ಕುರಿತಾದ ಸಮಗ್ರ ಮಾಹಿತಿಯನ್ನು ರಾಷ್ಟ್ರಪತಿ ಗಳಿಗೆ ನೀಡಿದ ಮನವಿಯಲ್ಲಿ ವಿವರಿಸಲಾಗಿದೆ. ಕೃಷ್ಣಾ ನದಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾ| ಬಚಾವತ್‌ ಆಯೋಗ 1976ರಲ್ಲಿಯೇ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿತ್ತು. ಇದಾದ ನಂತರ ನ್ಯಾ|ಬ್ರಿಜೇಶ ಕುಮಾರ ನೇತೃತ್ವದ ಎರಡನೇ ನ್ಯಾಯಾಧಿಕರಣ ಆಲಮಟ್ಟಿ ಜಲಾಶಯ ಎತ್ತರವನ್ನು 519.60 ಮೀಟರ್‌ನಿಂದ 524.25 ಮೀಟರ್‌ಗೆ ಹೆಚ್ಚಿಸಲು ಅನುಮತಿ ನೀಡಿತ್ತಲ್ಲದೆ, ಲಭ್ಯವಾಗುವ ನೀರನ್ನು ಮೂರು ರಾಜ್ಯಗಳಿಗೆ ಹಂಚಿಕೆ ಮಾಡಿ 2013ರಲ್ಲಿಯೇ ತೀರ್ಪು ನೀಡಿದೆ.

ನ್ಯಾಯಾಧಿಕರಣದ ತೀರ್ಪು ಹೊರ ಬಿದ್ದು ಎಂಟು ವರ್ಷಗಳು ಗತಿಸುತ್ತ ಬಂದರೂ ಇದುವರೆಗೂ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ. ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳಕ್ಕೆ ಕ್ರಸ್ಟ್‌ ಗೇಟ್‌ಗಳು ಇದ್ದರೂ ಅಳವಡಿಕೆ ಸಾಧ್ಯವಾಗಿಲ್ಲ. ಅವಿಭಜಿತ ಆಂಧ್ರಪ್ರದೇಶಕ್ಕೆ ನೀರು ಹಂಚಿಕೆ ಮಾಡಲಾಗಿದ್ದರೂ ಆಂಧ್ರದಿಂದ ಪ್ರತ್ಯೇಕಗೊಂಡ ತೆಲಂಗಾಣ ತನಗೆ ಪತ್ಯೇಕ ನೀರು ನೀಡಬೇಕೆಂಬ ತಗಾದೆ ತೆಗೆದಿದೆ. ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಇದರಿಂದ ಅಧಿಸೂಚನೆ ಹೊರಡಿಸಿಲ್ಲ ಎಂಬ ನೆಪವನ್ನು ಕೇಂದ್ರ ಹೇಳುತ್ತಿದೆ. ಯುಕೆಪಿ 3ನೇ ಹಂತದ ಯೋಜನೆ ಜಾರಿಗೊಂಡಲ್ಲಿ ಸುಮಾರು 6 ಲಕ್ಷ ಹೆಕ್ಟೇರ್‌ ಪ್ರದೇಶವನ್ನು ನೀರಾವರಿಗೆ ಒಳಪಡಿಸಬಹುದಾಗಿದೆ. ಇದೊಂದು ಬೃಹತ್‌ ಯೋಜನೆಯಾಗಿದ್ದು, ಅಂದಾಜು 75-80 ಸಾವಿರ ಕೋಟಿ ರೂ.ಗೆ ವೆಚ್ಚ ತಲುಪಿದೆ. ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ರಾಜ್ಯ ಸರ್ಕಾರ ಭರಿಸುವುದು ಕಷ್ಟ ಸಾಧ್ಯವಾಗಿದ್ದು, ಕೇಂದ್ರ ಸರ್ಕಾರ ಯುಕೆಪಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿ ಆರ್ಥಿಕ ನೆರವಿಗೆ ಮುಂದಾಗಬೇಕು.

Advertisement

ಇದನ್ನೂ ಓದಿ:ರಾಜಕೀಯ ಮಾಡುವುದರಲ್ಲಿ ಬಿಜೆಪಿಯವರನ್ನು ಮೀರಿಸುವವರುಂಟೆ ? : ದಿನೇಶ್ ಗುಂಡೂರಾವ್ ಪ್ರಶ್ನೆ

ಆಲಮಟ್ಟಿ ಜಲಾಶಯ ಸುಮಾರು 28 ಲಕ್ಷ ಎಕರೆಗೆ ಪ್ರದೇಶಕ್ಕೆ ನೀರಾವರಿ ಒದಗಿಸುವ, ಸುಮಾರು 227 ಟಿಎಂಸಿ ಅಡಿಯಷ್ಟು ನೀರು ಸಂಗ್ರಹ ಸಾಮರ್ಥ್ಯದ ದೇಶದ ಅತಿ ದೊಡ್ಡ ಜಲಾಶಯಗಳಲ್ಲಿ ಒಂದಾಗಿದೆ. ಇದಕ್ಕಿಂತಲೂ ಕಡಿಮೆ ಸಾಮರ್ಥ್ಯದ ನೆರೆ ರಾಜ್ಯದ ನೀರಾವರಿ ಯೋಜನೆಗಳು ರಾಷ್ಟ್ರೀಯ ಯೋಜನೆ ಸ್ಥಾನ ಪಡೆದಿವೆ. ಯುಕೆಪಿ ಬಗ್ಗೆ ಏಕೆ ಮಲತಾಯಿ ಧೋರಣೆ ಎಂಬುದು ಜೆಡಿಎಸ್‌ ಪ್ರಶ್ನೆಯಾಗಿದೆ.

ಮಹದಾಯಿ ಕಥೆ ಏನು?: ಮಹದಾಯಿ ನದಿ ನೀರು ಬಳಕೆ ವಿಚಾರ 1976ರಿಂದಲೇ ಧ್ವನಿ ಎತ್ತುತ್ತಲೇ ಬಂದಿದೆ. ಮಹದಾಯಿ ಅಂತಾರಾಜ್ಯ ಜಲವಿವಾದಕ್ಕೆ ಸಿಲುಕಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಹಳ್ಳಗಳನ್ನು ಬಳಸಿಕೊಂಡು ಕುಡಿಯುವ ನೀರಿನ ಯೋಜನೆಯಾಗಿ ಕಳಸಾ-ಬಂಡೂರಿ ನಾಲಾ ಯೋಜನೆ 2000ರದಲ್ಲಿಯೇ ಆರಂಭಿಸಲಾಗಿದ್ದರೂ, ಇದುವರೆಗೂ ಹನಿ ನೀರು ಬಳಕೆ ಸಾಧ್ಯವಾಗಿಲ್ಲ. ಕಳಸಾ-ಬಂಡೂರಿ ಯೋಜನೆ ಅಡಿಯಲ್ಲಿ 7.56 ಟಿಎಂಸಿ ಅಡಿ ನೀರು ಬಳಕೆಗೆ ಕೇಂದ್ರದ ಅಂದಿನ ಎನ್‌ಡಿಎ ಸರ್ಕಾರ 2002, ಏಪ್ರಿಲ್‌ನಲ್ಲಿ ಅನುಮೋದನೆ ನೀಡಿತ್ತು. ಗೋವಾದ ಆಕ್ಷೇಪದಿಂದ ತಾನೇ ನೀಡಿದ್ದ ಅನುಮೋದನೆಯನ್ನು ರದ್ದುಪಡಿಸಿತ್ತು. ಗೋವಾದ ಒತ್ತಡದೊಂದಿಗೆ ಕೇಂದ್ರ 2010ರಲ್ಲಿ ನ್ಯಾ|ಪಾಂಚಾಲ ನೇತೃತ್ವದಲ್ಲಿ ಮಹದಾಯಿ ಜಲ ವಿವಾದ ನ್ಯಾಯಮಂಡಳಿ ರಚಿಸಿತ್ತು. ನ್ಯಾಯಮಂಡಳಿ 2014ರಲ್ಲಿ ಕರ್ನಾಟಕಕ್ಕೆ ವಿದ್ಯುತ್‌ ಉತ್ಪಾದನೆ ಸೇರಿದಂತೆ ಕುಡಿಯುವ ನೀರು ಯೋಜನೆಗೆ ಒಟ್ಟು 13.42 ಟಿಎಂಸಿ ಅಡಿ, ಗೋವಾಕ್ಕೆ 33.39 ಟಿಎಂಸಿ ಅಡಿ, ಮಹಾರಾಷ್ಟ್ರಕ್ಕೆ 1.33 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ ತೀರ್ಪು ನೀಡಿತ್ತು. ಇದರ ಆಧಾರದಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಕುಡಿಯುವ ನೀರಿನ ಯೋಜನೆಗೆ ಪರಿಸರ ಇಲಾಖೆ ಅನುಮೋದನೆ ಅಗತ್ಯವಿಲ್ಲ ಎಂದಿದ್ದ ಕೇಂದ್ರ ಸರ್ಕಾರ, ಗೋವಾದ ಒತ್ತಡಕ್ಕೆ ಮಣಿದು ಮೌನಕ್ಕೆ ಜಾರಿದೆ. ಮೇಕೆದಾಟು ಯೋಜನೆ ವಿಚಾರದಲ್ಲೂ ತಮಿಳುನಾಡು ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಇದುವರೆಗೂ ರಾಜ್ಯಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಅನ್ಯಾಯ ಮಾಡುತ್ತ ಬಂದಿದೆ. ಬೆಂಗಳೂರು ಮಹಾನಗರ ಪ್ರಸ್ತುತ ಸುಮಾರು 1.35 ಕೋಟಿಯಷ್ಟು ಜನಸಂಖ್ಯೆ ಹೊಂದಿದ್ದು, 2044ರ ವೇಳೆಗೆ ಜನಸಂಖ್ಯೆ 3 ಕೋಟಿಗೆ ತಲುಪಬಹುದೆಂದು ಅಂದಾಜಿಸಲಾಗಿದೆ. ಮಹಾನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಕ್ಕೆ ಕುಡಿಯುವ ನೀರಿನ ಪೂರೈಕೆ ಮಹತ್ವದ್ದಾಗಿದ್ದು, ಮೇಕೆದಾಟು ಯೋಜನೆ ಇದಕ್ಕೆ ಪೂರಕವಾಗಿದ್ದಾದರೂ ತಮಿಳುನಾಡು ಪದೆ ಪದೆ ತಗಾದೆ ತೆಗೆದು ಕೊಕ್ಕೆ ಹಾಕುವ ಕಾರ್ಯಕ್ಕೆ ಮುಂದಾಗಿದೆ ಎಂಬ ವಿಚಾರಗಳನ್ನು ಜೆಡಿಎಸ್‌ ರಾಷ್ಟ್ರಪತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಪ್ರಸ್ತಾಪಿಸಿದೆ.

ಮತ್ತೊಂದು ಪ್ರಹಸನ ಆಗದಿರಲಿ:
ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ಯುಕೆಪಿ, ಮಹದಾಯಿ, ಮೇಕೆದಾಟು, ಎತ್ತಿನಹೊಳೆ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳು, ಸಮಗ್ರ ನೀರಾವರಿ ವ್ಯವಸ್ಥೆಗೆ ಒತ್ತಾಯಿಸಿ ಜೆಡಿಎಸ್‌ ಪಾದಯಾತ್ರೆ ನಡೆಸಲು
ಮುಂದಾಗಿದೆ. ಆಲಮಟ್ಟಿ, ಕಣಕುಂಬಿ, ತಲಕಾಡು, ಸಕಲೇಶಪುರದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲು ಯೋಜಿಸಿದೆ. ನೀರಾವರಿ ಯೋಜನೆಗಳ ಬಗ್ಗೆ ಕಾತುರದಿಂದ ನೋಡುತ್ತಿರುವ ರೈತ ಸಮುದಾಯಕ್ಕೆ ಜೆಡಿಎಸ್‌ ಹೋರಾಟ ಆಶಾಕಿರಣವಾಗಿ ಗೋಚರಿಸದೆ ಇರದು. ಆದರೆ ಈ ಹೋರಾಟ ಕೇವಲ ರಾಜಕೀಯ ಗಿಮಿಕ್‌ ಇಲ್ಲವೆ ಕೆಲವು ದಿನಗಳ ಪ್ರಚಾರದ ಪ್ರಹಸನ ಆಗದಿರಲಿ ಎಂಬ ಆಶಯ ಜನತೆಯದ್ದಾಗಿದೆ.
ಅಧಿಕಾರಕ್ಕೆ ಬಂದ 48 ಗಂಟೆಯಲ್ಲಿ ಕಳಸಾ-ಬಂಡೂರಿಗೆ ಚಾಲನೆ ನೀಡುತ್ತೇವೆ, ಮಹದಾಯಿ ನದಿಯಿಂದ ನಮ್ಮ ಪಾಲಿನ ನೀರು ಪಡೆಯುತ್ತೇವೆ, ಯುಕೆಪಿ 3ನೇ ಹಂತ ಪೂರ್ಣಗೊಳಿಸುವುದಕ್ಕೆ ನಾವು ಬದ್ಧ ಎಂದು ಭರವಸೆಗಳ ಮಹಾಪೂರ ಹರಿಸಿದ್ದ ಬಿಜೆಪಿ ಅಧಿಕಾರ ದಲ್ಲಿದ್ದರೂ ಮೌನಕ್ಕೆ ಜಾರಿದೆ. ಕಾಂಗ್ರೆಸ್‌ ನಡಿಗೆ ಕೃಷ್ಣೆಯ ಕಡೆ ಎಂದು ಪಾದಯಾತ್ರೆ ನಡೆಸಿ, ಅಧಿಕಾರಕ್ಕೆ ಬಂದರೆ ಯುಕೆಪಿ ಯೋಜನೆ ಪೂರ್ಣಕ್ಕೆ ಪ್ರತಿ ವರ್ಷ 10 ಸಾವಿರ ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ನೀಡುವುದಾಗಿ ಘೋಷಿಸಿದ್ದ ಕಾಂಗ್ರೆಸ್‌ ವಿಪಕ್ಷ ಸ್ಥಾನದಲ್ಲಿದೆ. ಆದರೆ ಈ ಭಾಗದ ಎರಡು ಪ್ರಮುಖ ನೀರಾವರಿ ಯೋಜನೆಯಲ್ಲಿ ಯಾವುದೇ ಮಹತ್ವದ ಬೆಳವಣಿಗೆ ಕಂಡಿಲ್ಲ. ಇದೀಗ ಜೆಡಿಎಸ್‌ ಪ್ರಮುಖ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಹೋರಾಟದ ಹೆಜ್ಜೆ ಇರಿಸಿದೆ. ಜೆಡಿಎಸ್‌ಗೆ ಹೈಕಮಾಂಡ್‌ ಅಂಕುಶ ಇಲ್ಲವೆ ಮುಲಾಜು ಇಲ್ಲ. ರಾಜ್ಯದ ಹಿತ ಕಾಯುವ ನಿಟ್ಟಿನಲ್ಲಿ ಪ್ರಾಮಾಣಿಕ ಯತ್ನ-ಹೋರಾಟಕ್ಕೆ ಮುಂದಡಿ ಇರಿಸಬೇಕಿದೆ. ಬೇಡಿಕೆ ತಾರ್ತಿಕ ಅಂತ್ಯ ಕಾಣುವವರೆಗೂ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ.

ಕೇಂದ್ರದ ನಿರ್ಲಕ್ಷ್ಯ ವಿಳಂಬ ಹಾಗೂ ಮಲತಾಯಿ ಧೋರಣೆಯಿಂದ ನನೆಗುದಿಗೆ ಬಿದ್ದ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಅನುಷ್ಠಾನ ಕ್ಕೆ ಒತ್ತಾಯಿಸಿ ಜೆಡಿಎಸ್‌ ಹೋರಾಟಕ್ಕೆ ಮುಂದಾಗಿದೆ. ಹಂತ ಹಂತವಾಗಿ ಹೋರಾಟ ಕೈಗೊಳ್ಳುತ್ತೇವೆ. ರಾಜ್ಯದ ಹಿತ ಕಾಯುವ ನಿಟ್ಟಿನಲ್ಲಿ ಯಾವುದೇ ಮುಲಾಜಿಗೂ ಒಳಗಾಗದೆ ಕೇಂದ್ರದ ಮೇಲೆ ಒತ್ತಡ ತರುತ್ತೇವೆ. ಜತೆಗೆ ನೀರಾವರಿ ವಿಚಾರದಲ್ಲಿ ಸುಳ್ಳು ಭರವಸೆ ನೀಡುವ, ನಂಬಿಸುವ, ವಾಸ್ತವ ಮರೆಮಾಚಿಸುವ ಯತ್ನಗಳನ್ನು ಜನರ ಮುಂದಿಡುತ್ತೇವೆ. ಎತ್ತಿನಹೊಳೆ ಯೋಜನೆಯನ್ನೇ ತೆಗೆದುಕೊಳ್ಳಿ ಸರಿಸುಮಾರು 8 ಸಾವಿರ ಕೋಟಿ ರೂ. ವೆಚ್ಚ ಯೋಜನೆ ಘೋಷಿಸಲಾಗಿದ್ದು, ನೀರಿನ ಅಗತ್ಯವಿರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ಯೋಜನೆಯಿಂದ ಹನಿ ನೀರು ಹೋಗದ ಸ್ಥಿತಿ ಇದೆ.
-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next