Advertisement

JDS;ನಾವೇನು ಸನ್ಯಾಸತ್ವ ಸ್ವೀಕರಿಸಿದ್ದೇವೆಯೇ? ಡಿಕೆಶಿಗೆ ಟಾಂಗ್ ಕೊಟ್ಟ ಎಚ್ ಡಿಕೆ

05:36 PM Oct 20, 2024 | Team Udayavani |

ಮಂಡ್ಯ: ಚನ್ನಪಟ್ಟಣವನ್ನು ಜೆಡಿಎಸ್ ಬಿಟ್ಟಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ‘ನಾವೇನು ಸನ್ಯಾಸ ಸ್ವೀಕಾರ ಮಾಡಿದ್ದೇವೆಯೇ? ನಾವು ಹೋರಾಟ ಮಾಡುತ್ತೇವೆ” ಎಂದು  ಭಾನುವಾರ(ಅ20)ತಿರುಗೇಟು ನೀಡಿದ್ದಾರೆ.

Advertisement

ಶ್ರೀರಂಗಪಟ್ಟಣ – ಪಾಂಡವಪುರ ನಡುವಿನ ಹೆದ್ದಾರಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ ಡಿಕೆ ”ಅವರ ಹೇಳಿಕೆ ಇರಲಿ, ಅವರು ಹೇಳಿದಂತೆ ಆಗುತ್ತದೆಯೇ? ನಾವು ಸನ್ಯಾಸತ್ವ ಸ್ವೀಕಾರ ಮಾಡಿದ್ದೀವಾ? ನಾವು ಚುನಾವಣೆ ಗೆಲ್ಲಲು ಏನು ನಿರ್ಧಾರ ಮಾಡಬೇಕು ಅದನ್ನು ಮಾಡುತ್ತೇವೆ” ಎಂದು ಹೇಳಿದರು.

ಡಿ.ಕೆ.ಸುರೇಶ್ ಸಂಸ್ಕೃತಿ ಎಲ್ಲರಿಗೂ ಗೊತ್ತಿದೆ
ತಮ್ಮ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಡಿ.ಕೆ.ಸುರೇಶ್‌ ಸಂಸ್ಕೃತಿಯ ಬಗ್ಗೆ ನಾನು ಮಾತನಾಡಲ್ಲ. ಎಲ್ಲರಿಗೂ ಗೊತ್ತಿದೆ. ಅವರು ಏನೇ ಚರ್ಚೆ ಮಾಡಿದರೂ ನನಗೆ ಸಂಬಂಧ ಇಲ್ಲ. ಜನರು ಬಹುನಿರೀಕ್ಷೆ ಇಟ್ಟು ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ. ಕಾಂಗ್ರೆಸ್‌ಗೆ 136 ಸೀಟ್‌ಗಳನ್ನು ಕೊಟ್ಟಿರೋದು ನಿಜ. ಈ ಕಾಂಗ್ರೆಸ್ ರಾಜ್ಯದಲ್ಲಿ ಯಾವ ರೀತಿ ಕೆಲಸ ಮಾಡ್ತಾ ಇದೆ ಎನ್ನುವುದನ್ನು ಜನ ನೋಡುತ್ತಿದ್ದಾರೆ. ದಿನವೂ ಒಂದೊಂದು ಅಕ್ರಮಗಳು ಬೆಳಕಿಗೆ ಬರುತ್ತಿವೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ನನಗೆ ಮಣ್ಣಿನ ಮೇಲೆ ಆಸೆಯೇ ಇಲ್ಲ ಎಂದು ಪದೇ ಪದೆ ಹೇಳುತ್ತಾರೆ. ಒಂದು ಕಡೆ ಅವರು ಹಾಗೆ ಹೇಳುತ್ತಿದ್ದರೆ ಇನ್ನೊಂದು ಕಡೆ ಒಂದೊಂದೇ ವಿಕೆಟ್ ಉದುರುತ್ತಿವೆ. ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳುಏನು ಬೇಕಾದರೂ ಆಗಬಹುದು ಎನ್ನುವಂತೆ ಇವೆ ಎಂದು ಹೇಳಿದರು.

ನನಗೆ ಐದು ವರ್ಷದ ಪೂರ್ಣ ಬಹುಮತದ ಸರ್ಕಾರ ಜನರು ನೀಡಬಹುದು ಎಂದು ವಿಶ್ವಾಸ ಹೊಂದಿದ್ದೇನೆ. ನಾನು ವಿಶ್ವಾಸ ಇಟ್ಟುಕೊಳ್ಳಲು ಅವರ ಪರ್ಮಿಷನ್ ತಗೋ ಬೇಕಾ? 5 ವರ್ಷದ ಸರ್ಕಾರ ಬಂದರೆ ನನ್ನದೇ ಆದ ಅಭಿವೃದ್ಧಿ ಪರಿಕಲ್ಪನೆಗಳು ಇವೆ. ಜನರ ಸಮಸ್ಯೆ ಬಗೆಹರಿಸಲು ಕಾರ್ಯಕ್ರಮ ಹಾಕಿಕೊಂಡಿದ್ದೇನೆ. ನಮ್ಮ‌ ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ಕರ್ನಾಟಕ ಸಂಪತ್ಭರಿತ ರಾಜ್ಯ. ಆದರೆ ಈ ಸರ್ಕಾರ ಜನರ ಹಣವನ್ನು ಪೋಲು ಮಾಡುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಜನರ ನೆಮ್ಮದಿ ಬದುಕಿಗಾಗಿ ನನಗೆ ಅವಕಾಶ ನೀಡುತ್ತಾರೆ ಎನ್ನೋದು ತಪ್ಪಾ? ನನ್ನ ಮಾತಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನನ್ನ ತೀರ್ಮಾನದಲ್ಲೂ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next