ಬೆಂಗಳೂರು: ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ಬೆಂಬಲಿತ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಅವರಿಗೆ ಜೆಡಿಎಸ್ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅತಿಥಿ ಕೋಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದ ಮೀರಾಕುಮಾರ್ ಅವರಿಗೆ, ಕರ್ನಾಟಕ ಹಾಗೂ ಕೇರಳದಲ್ಲಿರುವ ನಮ್ಮ ಪಕ್ಷದ ಶಾಸಕರು, ಸಂಸದರ ಸಂಪೂರ್ಣ ಬೆಂಬಲ ದೊರೆಯಲಿದೆ ಎಂದು ಆಶ್ವಾಸನೆ ನೀಡಿದರು.
ನಂತರ ಮಾತನಾಡಿದ ಎಚ್.ಡಿ.ದೇವೇಗೌಡರು, ಸಮಾನ ಮನಸ್ಕ ಜಾತ್ಯತೀತ ಪಕ್ಷಗಳ ಅಭ್ಯರ್ಥಿಯಾಗಿರುವ ಮೀರಾ ಕುಮಾರ್ ಅವರಿಗೆ ನಮ್ಮೆಲ್ಲರ ಬೆಂಬಲ ಇದೆ. ಅವರನ್ನು ಗೆಲ್ಲಿಸಿಕೊಳ್ಳಲಿದ್ದೇವೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಕೆ.ಎಚ್.ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮೀರಾಕುಮಾರ್ ಅವರು ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಬೆಂಬಲ ಕೋರುವ ಕಾರ್ಯಕ್ರಮವಿತ್ತು. ಆದರೆ, ದಾವಣಗೆರೆಯಲ್ಲಿ ಸಮಾವೇಶ ಇದ್ದ ಕಾರಣ ಜತೆಗೆ ದೇವೇಗೌಡರು ಶುಕ್ರವಾರ ಮಧ್ಯರಾತ್ರಿ ಸಂಸತ್ ಭವನದಲ್ಲಿ ನಡೆದ ಜಿಎಸ್‌ಟಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಶನಿವಾರ ಮುಂಜಾನೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲೇ ಭೇಟಿ ನಿಗದಿಯಾಯಿತು ಎಂದು ಹೇಳಲಾಗಿದೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಮೀರಾ ಕುಮಾರ್ ಅವರಿಗೆ ಮತ ಚಲಾವಣೆ ಕುರಿತಂತೆ ಜೆಡಿಎಸ್‌ನ ಶಾಸಕರು ಹಾಗೂ ಸಂಸದರಿಗೆ ದೇವೇಗೌಡರೇ ಖುದ್ದಾಗಿ ಪತ್ರದ ಮುಖೇನ ಸೂಚನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.