ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ 2 ಹಂತದಲ್ಲಿ ಚುನಾವಣೆ ಘೋಷಣೆಯಾಗಿದೆ. ಆದರೆ, ಜೆಡಿಎಸ್ ತನ್ನ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಹಿಂದೆ ಬಿದ್ದಿದ್ದು, ಇದುವರೆಗೆ ರಾಜ್ಯ ಬಿಜೆಪಿ ನಾಯಕರೊಂದಿಗೆ ಜೆಡಿಎಸ್ ನಾಯಕರ ಸಭೆಯೂ ಆಗಿಲ್ಲ. ಸ್ಪಷ್ಟತೆ ಇಲ್ಲದೆ ಕಾರ್ಯಕರ್ತರನ್ನು ಗೊಂದಲಕ್ಕೆ ದೂಡಿದೆ.
ಜನವರಿ ತಿಂಗಳಿಂದ ಇಂದು-ನಾಳೆ ಎನ್ನುತ್ತಿದ್ದ ಜೆಡಿಎಸ್ ನಾಯಕರಿಗೆ ತಮ್ಮ ಪಾಲಿನ ಕ್ಷೇತ್ರಗಳನ್ನು ನಿಕ್ಕಿ ಮಾಡಿಕೊಳ್ಳಲಾಗುತ್ತಿಲ್ಲ. ಸಂಕ್ರಾಂತಿ ಹಬ್ಬದ ವೇಳೆಗೇ ಮೈತ್ರಿ ಅಭ್ಯರ್ಥಿಗಳನ್ನು ಪ್ರಕಟಿಸುವುದಾಗಿ ಹೇಳಿಕೊಂಡಿದ್ದ ಜೆಡಿಎಸ್, ಲೋಕಸಭೆ ಚುನಾವಣೆ ಘೋಷಣೆಯಾದರೂ ದಳಪತಿಗಳ ಆಯ್ಕೆಯಲ್ಲಿ ಹಿಂದೆ ಬಿದ್ದಿದೆ.
ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ, ಕ್ಷೇತ್ರಗಳ ಹಂಚಿಕೆ ಮಾತುಕತೆಗೂ ಮುನ್ನವೇ 20 ಅಭ್ಯರ್ಥಿಗಳ ಹೆಸರನ್ನು ಘೋಷಿಸಿ, ಇನ್ನೂ 8 ಕ್ಷೇತ್ರಗಳನ್ನು ತನ್ನ ತೆಕ್ಕೆಯಲ್ಲಿಯೇ ಇಟ್ಟುಕೊಂಡಿದೆ. ಅದರಲ್ಲಿ ತನಗೆಷ್ಟು, ಜೆಡಿಎಸ್‌ಗೆ ಎಷ್ಟು ಎಂಬುದಿನ್ನೂ ಸ್ಪಷ್ಟವಾಗಿಲ್ಲ. ತಾನು ಆಯ್ಕೆ ಮಾಡಿಕೊಂಡು ಬಿಟ್ಟಿರುವ ಇನ್ನುಳಿದ 8 ಕ್ಷೇತ್ರಗಳಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೇ ಎಂಬ ಪ್ರಶ್ನೆ ಕಾರ್ಯಕರ್ತರನ್ನು ಕಾಡಲಾರಂಭಿಸಿದೆ.
ಏತನ್ಮಧ್ಯೆ, ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳಲ್ಲಿ ದಳಪತಿಗಳು ಕಣಕ್ಕಿಳಿಯಲಿದ್ದಾರೆ ಎನ್ನುವ ಸೂಕ್ಷ್ಮ ಸುಳಿವನ್ನು ಕುಮಾರಸ್ವಾಮಿ ನೀಡಿದ್ದಾರಾದರೂ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರ ನಿಲುವಿನ ಬಗ್ಗೆ ಗೊಂದಲಗಳು ಮುಂದುವರಿದಿವೆ. ಕೋಲಾರದ ಹಾಲಿ ಬಿಜೆಪಿ ಸಂಸದ ಮುನಿಸ್ವಾಮಿ ಅವರ ನಡೆಯೇನು ಎಂಬ ಪ್ರಶ್ನೆ ಉದ್ಭವವಾಗಿದೆ. ಚಿಕ್ಕಬಳ್ಳಾಪುರದಿಂದ ಕುಮಾರಸ್ವಾಮಿ ಅಥವಾ ನಿಖೀಲ್ ಕುಮಾರಸ್ವಾಮಿ ಸ್ಪರ್ಧಿಸುವ ಚರ್ಚೆಗಳೂ ಇವೆ. ಹೀಗಾಗಿ ಮೈತ್ರಿ ಧರ್ಮದ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಪ್ರಶ್ನಿಸಲಾರಂಭಿಸಿದ್ದು, ಯಾರ ಪರವಾಗಿ ಕೆಲಸ ಮಾಡಬೇಕು ಎಂಬ ಗಲಿಬಿಲಿ ಶುರುವಾಗಿದೆ.