Advertisement
ಒಂದರ್ಥದಲ್ಲಿ ಹೇಳುವುದಾದರೆ ಜೆಡಿಎಸ್ ನಿರೀಕ್ಷಿಸದಂತಹ ಫಲಿತಾಂಶ ಆ ಪಕ್ಷವನ್ನು ಕಾರ್ಮೋ ಡದ ಸ್ಥಿತಿಗೆ ತಳ್ಳಿದೆ. ಆದರೂ ನಿರೀಕ್ಷೆ ಮೀರಿದ ಸೋಲಿನಿಂದ ಹೊರಬಂದು ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಹಾಗೂ ಕಾರ್ಯ ಕರ್ತ ಸಮೂಹದಲ್ಲಿ ವಿಶ್ವಾಸ ಮತ್ತು ಧೈರ್ಯ ತುಂಬುವ ಕಸರತ್ತು ಆರಂಭಿಸಿದೆ. ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳ ಸಹವಾಸದಲ್ಲಿ ಸಮ್ಮಿಶ್ರ ಸರಕಾರ ನಡೆಸಿದ್ದರೂ ಅದಕ್ಕೆ ಹೆಚ್ಚು ಕಹಿ ಅನುಭವ ಆಗಿರುವುದು ಕಾಂಗ್ರೆಸ್‌ನಿಂದಲೇ. ಹೀಗಾಗಿ ಕುಮಾರಸ್ವಾಮಿ ಅವರಿಗೆ ಬಿಜೆಪಿಗಿಂತಲೂ ಹೆಚ್ಚು ಸಿಟ್ಟು-ಆಕ್ರೋಶ ಕಾಂಗ್ರೆಸ್ ಅದರಲ್ಲೂ ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿದೆ. ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರದ ಪತನ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ನೇತೃತದಲ್ಲಿ ಐದೂವರೆ ವರ್ಷ ಗಳ ಹಿಂದೆ ಜೆಡಿಎಸ್ ಹೋಳಾಗಿದ್ದಕ್ಕೆ ಸಿದ್ದರಾಮಯ್ಯ ಅವರೇ ಸೂತ್ರಧಾರಿ ಎಂಬುದೇ ಕುಮಾರಸ್ವಾಮಿ ಸಿಟ್ಟಿಗೆ ಕಾರಣ.
2018ರ ರಾಜ್ಯ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟಬಹುಮತ ಬಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಹೋಗಿ ಜೆಡಿಎಸ್‌ಗೆ ಅಧಿಕಾರ ಕೊಟ್ಟರು. ಆದರೆ ಅದು ಲೋಕಸಭಾ ಚುನಾವಣೆ ಅನಂತರ ಉಳಿಯಲಿಲ್ಲ. ಆದರೆ ಇಲ್ಲಿ ಈಗ ಒಂದಂತೂ ಮೆಲುಕು ಹಾಕಬೇಕಿದೆ. ಕುಮಾರಸ್ವಾಮಿಗೆ ಆಗ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಪಟ್ಟಾಭಿಷೇಕ ಮಾಡಲು ದಿಲ್ಲಿಯಿಂದ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ವಿರೋಧಿ ಬಣದ ವಿವಿಧ ಪಕ್ಷಗಳ ರಾಷ್ಟ್ರೀಯ ನಾಯಕರು ಮೋದಿ ವಿರುದ್ಧ ವ್ಯೂಹ’ ರಚಿಸಲು ಇಂದು ಬೆಂಗಳೂರಿಗೆ ಬಂದಿಳಿಯುತ್ತಿರುವಾಗ ಆಗ ಕೇಂದ್ರ ಬಿಂದುವಾಗಿದ್ದ ಕುಮಾರಸ್ವಾಮಿ ಯುಪಿಎ ಬಣದಿಂದ ಎನ್‌ಡಿಎ ಬಣಕ್ಕೆ ಜಿಗಿಯಲು ಈಗ ದಿಲ್ಲಿಗೆ ಹಾರಲು ಸಜ್ಜಾಗಿದ್ದಾರೆ. ಪಕ್ಷದ ಉಳಿವಿಗಾಗಿ ಯಾವುದೇ ಕಾರ ಣಕ್ಕೂ ಸಿದ್ದರಾಮಯ್ಯ ಕಾಂಗ್ರೆಸ್ ಸಖ್ಯ ಬೇಡ ಎಂಬ ನಿರ್ಧಾರಕ್ಕೆ ಬಂದಿರುವ ಜೆಡಿಎಸ್ ನಾಯಕರು ಈಗ ಮುಂಬ ರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸರಿಯಾದ ಪಾಠ ಕಲಿಸಬೇ ಕಾದರೆ ಬಿಜೆಪಿ ಜತೆ ಮೈತ್ರಿ ಅನಿವಾರ್ಯ ಎಂಬ ಸ್ಥಿತಿಗೆ ಬಂದಿದ್ದಾರೆ. ಕುಮಾರ ಸ್ವಾಮಿ ಅವರು ಸದನದ ಒಳಗೆ ಹಾಗೂ ಹೊರಗೆ ನಡೆದುಕೊಂಡ ರೀತಿ ಅವಲೋಕಿಸಿದರೆ ಬಿಜೆಪಿ ಹೆಗಲ ಮೇಲೆ ಕೈಹಾಕಿದ್ದಾರೆ. ಸೀಟಿನ ಲೆಕ್ಕಾಚಾರದ ಮಾತಿನ ಚೌಕಾಶಿ ಹಂತಕ್ಕೆ ಹೋಗದೇ ಇದ್ದರೂ ಮೈತ್ರಿಗೆ ಬಹುತೇಕ ಉಭಯ ಪಕ್ಷಗಳು ಸಮ್ಮತಿಸಿವೆ. ಬಿಜೆಪಿಗೆ ಜೆಡಿಎಸ್ ಅನಿವಾರ್ಯವೋ ಅಥವಾ ಜೆಡಿಎಸ್‌ಗೆ ಬಿಜೆಪಿ ಅನಿವಾರ್ಯವೋ ಎಂಬುದು ಮಾತ್ರ ಇಲ್ಲಿ ಚರ್ಚಿತ ವಿಷಯ.
Related Articles
ಬಿಜೆಪಿ -ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟರೆ ಸ್ಥಳೀಯವಾಗಿ ಮುಖಂಡರು, ಕಾರ್ಯಕರ್ತರ ನಡುವೆ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ ಕಾಂಗ್ರೆಸ್- ಜೆಡಿಎಸ್ ಮೈತ್ರಿಯಲ್ಲಿ ಸ್ಥಳೀಯವಾಗಿ ಒಗ್ಗಟ್ಟು-ಹೊಂದಾಣಿಕೆ ಅಸಾಧ್ಯ ಜತೆಗೆ ಮತಗಳು ಶಿಫ್ಟ್ ಆಗಲಿಲ್ಲ ಎಂಬುದು ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಅಂದರೆ ಬಿಜೆಪಿ-ಜೆಡಿಎಸ್ ಕೆಮಿಸ್ಟ್ರಿ ವರ್ಕ್‌ಔಟ್ ಆಗುತ್ತದೆ ಎಂಬ ಆಶಾಭಾವನೆ ಮೂಡಿದೆ. ಜೆಡಿಎಸ್ ಇದುವರೆಗೂ ನಂಬಿ ಕೊಂಡಿದ್ದ ವೋಟ್‌ಬ್ಯಾಂಕ್‌ನಲ್ಲಿ ಮುಸ್ಲಿಂ ಮತಗಳು ಪ್ರಮುಖವಾಗಿದ್ದವು. ಇನ್ನು ಮುಂದೆ ಮುಸ್ಲಿಂ ಒಲೈಕೆ ಕೈಬಿಟ್ಟು ಕಾಂಗ್ರೆಸ್ ಸೋಲಿಸುವ ಶಕ್ತಿಗಳ ಜತೆ ಕೈಜೋಡಿಸುವುದು ಅನಿವಾರ್ಯ ಎಂಬ ಸ್ಥಿತಿಗೆ ಜೆಡಿಎಸ್ ಬಂದು ನಿಂತಿದೆ.
Advertisement
ಎಚ್. ಡಿ.ದೇವೇಗೌಡರನ್ನು ಏಕಾಏಕಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದ್ದು ಹಾಗೂ ತಮ್ಮನ್ನು ಸಿಎಂ ಹುದ್ದೆಗೆ ಕೂರಿಸಿ ಕೆಳಗಿಳಿಸಿರುವ ಕಾಂಗ್ರೆಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಇದು ಸಕಾಲ. ಬಿಜೆಪಿ ಜತೆ ಜೆಡಿಎಸ್ ವಿಲೀನಕ್ಕೆ ದಿಲ್ಲಿ ವರಿಷ್ಠರಿಂದ ಆಫರ್ ಬಂದಿದೆ ಎಂದು ಹೇಳಲಾಗುತ್ತಿದ್ದರೂ ಅದು ಸ್ಪಷ್ಟ ವಾಗಿಲ್ಲ. ಚೌಕಾಶಿ’ ಗೆ ಹೆಚ್ಚು ಅವಕಾಶ-ಅಧಿಕಾರ ಇರುವ ಸೂತ್ರವೆಂದರೆ ವಿಲೀನಕ್ಕಿಂತ ಮೈತ್ರಿಯೇ ಬೆಸ್ಟ್. ಈ ಎಲ್ಲವುಗಳ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮೈತ್ರಿಗೆ ಮುಂದಾಗಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ವಿಪಕ್ಷದ ಸ್ಥಾನ ಇಲ್ಲದೇ ಇದ್ದರೂ ದೇಶವ್ಯಾಪಿ ಅದರ ಅಸ್ತಿತ್ವವಿದೆ. ಅದೇ ರೀತಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಗೆಲ್ಲುವ ಶಕ್ತಿ ಇಲ್ಲದೇ ಇದ್ದರೂ ಸೋಲಿಸುವ ಶಕ್ತಿ ಇದೆ, ಅದನ್ನು ಈ ಸಲ ಸಾಬೀತು ಮಾಡಬೇಕು ಎಂಬ ಸಂಕಲ್ಪ ಜೆಡಿಎಸ್‌ನದ್ದು.
2019ರಲ್ಲಿ ಏನಾಯಿತು?ಕುಮಾ ರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಇದ್ದ ಕಾರಣ 2019ರ ಲೋಕಸಭಾ ಚುನಾವಣೆಯಲ್ಲಿ ನಡುವೆ ಸೀಟು ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ 21 ಕಡೆ, ಜೆಡಿಎಸ್ 7 ಸ್ಪರ್ಧಿಸಿತ್ತು. ಹಾಸನ, ಮಂಡ್ಯ, ತುಮಕೂರು, ಉಡುಪಿ-ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ವಿಜಯಪುರ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿತ್ತು. ಆದರೆ ಜೆಡಿಎಸ್ ಹಾಸನ (ಪ್ರಜ್ವಲ್ ರೇವಣ್ಣ) ಬಿಟ್ಟು ಉಳಿದೆಲ್ಲೂ ಗೆಲ್ಲಲಿಲ್ಲ. ತಮ್ಮ ಸಾಂಪ್ರದಾಯಿಕ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟು ಹಾಸನದಿಂದ ತುಮಕೂರಿಗೆ ಬಂದು ಸ್ಪರ್ಧಿಸಿದ ಎಚ್.ಡಿ.ದೇವೇಗೌಡರು ಹಾಗೂ ಮಂಡ್ಯದಿಂದ ಸ್ಪರ್ಧಿಸಿದ್ದ ಕುಮಾರಸ್ವಾಮಿ ಪುತ್ರ ನಿಖೀಲ್ ಕುಮಾರಸ್ವಾಮಿ ಹೀಗೆ ತಾತ-ಮೊಮ್ಮಗ ಇಬ್ಬರೂ ಸೋತರು. ತಾವು ಮುಖ್ಯಮಂತ್ರಿಯಾಗಿದ್ದಾಗಲೇ ಅನುಭವಿ ಸಿದ ತಂದೆ ಹಾಗೂ ಮಗನ ಸೋಲು ಇಂದಿಗೂ ಕುಮಾರ ಸ್ವಾಮಿ ಅವರನ್ನು ಕಾಡುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ 25 ಕಡೆ ಗೆದ್ದರೆ, ಕಾಂಗ್ರೆಸ್‌ನಿಂದ ಗೆದ್ದಿದ್ದು ಬೆಂ.ಗ್ರಾ.ದಿಂದ ಡಿ.ಕೆ.ಸುರೇಶ್ ಮಾತ್ರ. ಈ ಚುನಾವಣೆಯಲ್ಲಿ ಮಿತ್ರಪಕ್ಷಗಳಿಗೆ ದಕ್ಕಿದ್ದು ತಲಾ ಒಂದೊಂದು ಸ್ಥಾನ. ಶೇಕಡವಾರು ಮತಗಳಿಕೆಯಲ್ಲಿ ಕಾಂಗ್ರೆಸ್‌ನದು ಶೇ.31.88, ಜೆಡಿಎಸ್‌ನದು ಶೇ.9.67. ಹಾಗೂ ಬಿಜೆಪಿಯದು ಶೇ.51.38. ದೇವೇಗೌಡರಿಗೋಸ್ಕರ ಕಾಂಗ್ರೆಸ್ ತನ್ನ ಹಾಲಿ ಸದಸ್ಯ ಎಸ್.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್ ನಿರಾಕರಿ ಸಲಾಯಿತು. ಅನಂತರ ಅವರು ವಿಧಾನಸಭಾ ಚುನಾವಣೆಯಲ್ಲಿ ಕಮಲದ ತೆಕ್ಕೆಗೆ ಜಾರಿದರು. ಶಿವಮೊಗ್ಗದಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಧು ಬಂಗಾರಪ್ಪ ಇಂದು ಸಿದ್ದರಾಮಯ್ಯ ಸಂಪುಟದಲ್ಲಿ ಶಿಕ್ಷಣ ಸಚಿವರು. ಹೀಗೆ ಕಾಲಘಟ್ಟದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ.ವಿಜಯಪುರ, ಉತ್ತರ ಕನ್ನಡ ಹೊರತುಪಡಿಸಿ ಉಳಿದ 5 ಕ್ಷೇತ್ರಗಳಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ವೋಟ್ ಕೂಡ ಇತ್ತು. ಆದರೆ ಎಲ್ಲಿಯೂ ಸಹಾಯ ಆಗಲಿಲ್ಲ. ಶಿವಮೊಗ್ಗ, ಚಿಕ್ಕಮಗಳೂರು-ಉಡುಪಿಯಲ್ಲಿ ಜೆಡಿಎಸ್ ನೆಲೆ ಇಲ್ಲ. ಹಾಸನ, ಮಂಡ್ಯದಲ್ಲಿ ಜೆಡಿಎಸ್ ಗಟ್ಟಿಯಾಗಿದ್ದರೆ ಬಿಜೆಪಿಗೆ ಹೇಳಿಕೊಳ್ಳುವ ನೆಲೆ ಇಲ್ಲ. ತುಮಕೂರಿನಲ್ಲಿ ಬಿಜೆಪಿ- ಜೆಡಿಎಸ್ ಎರಡಕ್ಕೂ ನೆಲೆ ಇದೆ. ಹಾಸನದಲ್ಲಿ ಜೆಡಿಎಸ್- ಕಾಂಗ್ರೆಸ್ ವೋಟ್‌ಬ್ಯಾಂಕ್ ಇದೆ. ಅಲ್ಲಿ ಕಾಂಗ್ರೆಸ್ ನೆಲೆ ಇದೆ. ಹೀಗಾಗಿ ಜೆಡಿಎಸ್‌ಗೆ ಬಿಟ್ಟುಕೊಟ್ಟ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಲಾಭ ಆಗಬಹುದು ಎಂಬ ಲೆಕ್ಕಾಚಾರಗಳಿವೆ. ಹಾಗಾದರೆ ಕುಮಾರಸ್ವಾಮಿ ಯಾವುದೇ ರೀತಿಯ ಲಾಭದ ಲೆಕ್ಕಾಚಾ ರಗಳಿಲ್ಲದೆ ಕಮಲದ ಕಡೆ ಹೊರಟರೇ? ಮೈತ್ರಿಗೆ ಶಾಸಕರ ಅಪಸ್ವರ
ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳು ವುದಕ್ಕೆ ಜೆಡಿಎಸ್ ಶಾಸಕರಲ್ಲಿ ಇನ್ನು ಒಮ್ಮತದ ಅಭಿಪ್ರಾಯ ಮೂಡಿಲ್ಲ. ಲೋಕಸಭಾ ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಇರುವುದರಿಂದ ಈಗಲೇ ಯಾವುದೇ ರೀತಿಯ ಆತುರದ ತೀರ್ಮಾನ ಬೇಡ ಎಂಬ ಸಲಹೆಗಳು ಪಕ್ಷದ ಶಾಸಕರಿಂದ ವ್ಯಕ್ತವಾಗಿವೆ. ಇನ್ನು ಬೆಂಗಳೂರಿನಲ್ಲಿ ನಡೆಯುವ ಮೋದಿ ವಿರೋಧಿ ಬಣದ ವಿಪಕ್ಷಗಳ ಸಭೆಗೆ ಜೆಡಿಎಸ್ ಗೈರು ಹಾಜರಾಗಲು ತೀರ್ಮಾನಿಸಿದ್ದರೆ ಇನ್ನು ದಿಲ್ಲಿಯಲ್ಲಿ ನಡೆಯುವ ಎನ್‌ಡಿಎ ಸಭೆಗೂ ಜೆಡಿಎಸ್‌ಗೆ ಆಹ್ವಾನ ಬಂದಿಲ್ಲ. ಈ ರೀತಿಯ ಸಂದಿಗ್ಧ ಸ್ಥಿತಿಯಲ್ಲಿದೆ ಜೆಡಿಎಸ್. ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಆ ಪಕ್ಷದ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೌನ ಸಾಕಷ್ಟು ವ್ಯಾಖ್ಯಾನಗಳಿಗೆ ಅವಕಾಶ ನೀಡಿದೆ. ಬಿಜೆಪಿ ಯನ್ನು ಗೌಡರು ಎಷ್ಟೇ ಬೈದರೂ ಮೋದಿ-ದೇವೇಗೌಡರು ಅತ್ಯಂತ ಆತ್ಮೀಯರು. ಸದ್ಯದ ಪರಿಸ್ಥಿತಿಯಲ್ಲಿ ದೇವೇಗೌಡರಿಗೆ ಬಿಜೆಪಿಗಿಂತಲೂ ಕಾಂಗ್ರೆಸ್ ಮೇಲೆ ಹೆಚ್ಚು ಸಿಟ್ಟಿದೆ. ಹೀಗಾಗಿ ಕಾಂಗ್ರೆಸ್ ಮಣಿಸಲು ಮುಂದೆ ಏನು ಬೇಕಾದರೂ ಆಗಬಹುದು. ಒಟ್ಟಾರೆ ಲೋಕಸಭಾ ಚುನಾವಣೆ ಹೆಸರಿನಲ್ಲಿ ಕರ್ನಾಟಕ ರಾಜಕೀಯ ಧ್ರುವೀಕರಣಕ್ಕೆ ಸಾಕ್ಷಿಯಾಗುವುದಂತು ಖಚಿತ.
- ಎಂ.ಎನ್.ಗುರುಮೂರ್ತಿ