Advertisement

ಶಂಕರಮೂರ್ತಿ ಬೆಂಬಲಿಸಲು ಜೆಡಿಎಸ್‌ ತೀರ್ಮಾನ

03:45 AM Jun 15, 2017 | Team Udayavani |

ಬೆಂಗಳೂರು:  ವಿಧಾನ ಪರಿಷತ್‌ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ವಿಚಾರ ಈಗ ಅಂತಿಮ ಘಟ್ಟ ತಲುಪಿದ್ದು, ಬಿಜೆಪಿ ಜತೆ ನಿಲ್ಲುವುದಾಗಿ ಜೆಡಿಎಸ್‌ ಹೇಳಿದೆ.

Advertisement

ಹೀಗಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಬಲಾಬಲ ತಲಾ 36 ಆಗಿದ್ದು, ಪಕ್ಷೇತರರ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಜೆಡಿಎಸ್‌ನ ಈ ನಿಲುವಿನ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸಹ ತನ್ನದೇ ಆದ ಕಾರ್ಯತಂತ್ರ ರೂಪಿಸುತ್ತಿದ್ದು, ಪಕ್ಷೇತರ ಸದಸ್ಯರು ಗೈರು ಹಾಜರಾಗುವಂತೆ ನೋಡಿಕೊಳ್ಳುವ ಲೆಕ್ಕಾಚಾರ ಹಾಕಿಕೊಂಡಿದೆ.

ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಗುರುವಾರವೇ ಸದನದಲ್ಲಿ ಚರ್ಚೆಗೆ ಬಂದು ಮತದಾನವೂ ನಡೆಯುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್‌,ಬಿಜೆಪಿ ಹಾಗೂ ಜೆಡಿಎಸ್‌ ತಮ್ಮ ಸದಸ್ಯರಿಗೆ ವಿಪ್‌ ಜಾರಿ ಮಾಡಿವೆ. ವಿಧಾನಪರಿಷತ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದು, ಅಂತಿಮ ಜಯ ಯಾರಿಗೆ ಎಂಬುದು ಕುತೂಹಲ ಮೂಡಿಸಿದೆ.

ಶಂಕರಮೂರ್ತಿಗೇ ಬೆಂಬಲ: ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಹಿನ್ನೆಲೆಯಲ್ಲಿ ಬುಧವಾರವೂ ಸಭೆ ನಡೆಸಿದ
ಜೆಡಿಎಸ್‌, ಡಿ.ಎಚ್‌.ಶಂಕರಮೂರ್ತಿ ಅವರಿಗೆ ಬೆಂಬಲ ನೀಡಲು ತೀರ್ಮಾನಿಸಿತು. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಅವರು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ
ಮನವಿ ಮಾಡಿದರೂ, ಯಾವುದೇ ಫ‌ಲಪ್ರದವಾಗಿಲ್ಲ. ಅಲ್ಲದೆ, ಗುರುವಾರ ಎಲ್ಲರೂ ಸದನದಲ್ಲಿ ಕಡ್ಡಾಯವಾಗಿ
ಹಾಜರಿರಬೇಕು ಎಂದು 13 ಸದಸ್ಯರಿಗೂ ವಿಪ್‌ ಜಾರಿಗೊಳಿಸಿದೆ.

ಸಭೆಯಲ್ಲಿ ಶಂಕರಮೂರ್ತಿ ಬೆಂಬಲಕ್ಕೆ ನಿಲ್ಲುವ ವಿಚಾರದಲ್ಲಿ ಪರ-ವಿರೋಧ ವ್ಯಕ್ತವಾಯಿತು. ಬಿಜೆಪಿ ಜತೆ ಹೋಗುವುದು ಬೇಡ, ಕಾಂಗ್ರೆಸ್‌ಗೆ ಬೆಂಬಲಿಸೋಣ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ, ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ನೀಡಲು ಕಾಂಗ್ರೆಸ್‌ ಒಪ್ಪುತ್ತಿಲ್ಲ. ಕಾಂಗ್ರೆಸ್‌ ಜತೆ ಹೋದರೂ ಉಪ ಸಭಾಪತಿ, ಬಿಜೆಪಿ ಜತೆಗಿದ್ದರೂ ಉಪ ಸಭಾಪತಿ ಸ್ಥಾನ ಮಾತ್ರ ಜೆಡಿಎಸ್‌ ಗೆ ಸಿಗಲಿದೆ. ಹೀಗಾಗಿ, ಯಥಾಸ್ಥಿತಿ ಕಾಯ್ದುಕೊಳ್ಳುವುದು ಉತ್ತಮ ಎಂದು ಕುಮಾರಸ್ವಾಮಿ ತಿಳಿಸಿದರು ಎನ್ನಲಾಗಿದೆ.

Advertisement

ಸಭೆಯ ನಂತರ ಮಾತನಾಡಿದ ಎಚ್‌ .ಡಿ.ಕುಮಾರಸ್ವಾಮಿ, ಸಭಾಪತಿ ಸ್ಥಾನದ ವಿಚಾರದಲ್ಲಿ ಶಂಕರಮೂರ್ತಿಯನ್ನು
ಬೆಂಬಲಿಸಲು ಜೆಡಿಎಸ್‌ ನಿರ್ಧರಿಸಿದೆ.

ಪರಿಷತ್‌ನಲ್ಲಿ ಗುರುವಾರ ನಿರ್ಣಯದ ಬಗ್ಗೆ ಚರ್ಚೆ ನಡೆದು ಮತದಾನ ನಡೆಯುವ ಸಾಧ್ಯತೆಯಿದೆ. ಯಾರಿಗೆ ಮತ ನೀಡಬೇಕು ಎಂಬ ಬಗ್ಗೆ ನಮ್ಮ ಎಲ್ಲಾ 13 ಸದಸ್ಯರಿಗೆ ವಿಪ್‌ ನೀಡಿದ್ದೇವೆ ಎಂದು ಹೇಳಿದರು.

ಈ ಮಧ್ಯೆ, ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರ ನೇಮಿಸಲು ಕಾಂಗ್ರೆಸ್‌ ಒಲವು ತೋರಿದರೆ ಕೊನೆ ಕ್ಷಣದಲ್ಲಿ ಜೆಡಿಎಸ್‌ ತೀರ್ಮಾನ ಬದಲಾಗುವ ಸಾಧ್ಯತೆಯೂ ಇದೆ ಎಂದು
ಮೂಲಗಳು ತಿಳಿಸಿವೆ.

ಮೇಲ್ಮನೆ ಸಂಖ್ಯಾಬಲ
75 ಸದಸ್ಯ ಬಲದ ಪರಿಷತ್‌ನಲ್ಲಿ ವಿಮಲಾಗೌಡರ ನಿಧನದಿಂದ ಒಂದು ಸ್ಥಾನ ತೆರವಾಗಿದ್ದು ಸಭಾಪತಿ ಸೇರಿ 74 ಸದಸ್ಯರಿದ್ದಾರೆ.ಆ ಪೈಕಿ ಕಾಂಗ್ರೆಸ್‌ -33, ಬಿಜೆಪಿ-23 ಹಾಗೂ ಜೆಡಿಎಸ್‌ -13 ಸದಸ್ಯರನ್ನು ಹೊಂದಿದ್ದು, ಐವರು ಪಕ್ಷೇತರ ಸದಸ್ಯರಿದ್ದಾರೆ. ಕಾಂಗ್ರೆಸ್‌ ಪ್ರಕಾರ, 33 ಸಂಖ್ಯಾ ಬಲದ ಜತೆಗೆ ಮೂವರು ಪಕ್ಷೇತರರಾದ ಎಂ.ಡಿ.ಲಕ್ಷ್ಮಿನಾರಾಯಣ್‌, ಭೈರತಿ ಸುರೇಶ್‌, ವಿವೇಕರಾವ್‌ ಅವರ ಬೆಂಬಲಿ ತಮಗಿದೆ ಎಂದು ಹೇಳಿಕೊಂಡಿದ್ದು ಒಟ್ಟು ಸಂಖ್ಯಾಬಲ 36 ಕ್ಕೆ ಏರಲಿದೆ. ಇತ್ತ, ಬಿಜೆಪಿ 23 ಹಾಗೂ ಜೆಡಿಎಸ್‌ 13 ಸೇರಿದಂತೆ 36 ಸಂಖ್ಯಾಬಲ ಆಗಲಿದ್ದು, ಪಕ್ಷೇತರರಾದ ಮಲ್ಲಿಕಾರ್ಜುನ ಹಾಗೂ ಬಸವರಾಜ ಯತ್ನಾಳ್‌ ಅವರ ಬೆಂಬಲ ತಮಗಿದೆ ಎಂದು ಬಿಜೆಪಿ ಹೇಳಿಕೊಂಡಿದ್ದು, ಅವರ ಬೆಂಬಲ ದೊರೆತರೆ 38ಕ್ಕೆ ಏರಲಿದೆ.

ಹೀಗಾಗಿ, ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಂಡು ಪಕ್ಷೇತರರ ಬೆಂಬಲ ದೊರೆತರೆ ಸಭಾಪತಿ ಅವರನ್ನು ಕೆಳಗಿಳಿಸುವ ಕಾಂಗ್ರೆಸ್‌ ಯತ್ನ ಫ‌ಲಿಸುವುದು ಅನುಮಾನ. ಇಷ್ಟಾದ ನಂತರವೂ ಕಾಂಗ್ರೆಸ್‌ ಕೊನೆ ಹಂತದ ಪ್ರಯತ್ನ ನಡೆಸುತ್ತಿದ್ದು, ಪಕ್ಷೇತರರನ್ನು ಗೈರು ಹಾಜರು ಮಾಡಿಸುವ ತಂತ್ರಗಾರಿಕೆ ರೂಪಿಸಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next