Advertisement

ಕೇಳಿದ್ದೆಲ್ಲಾ ಕೊಟ್ಟರೂ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ ಸೇರುತ್ತಿದ್ದಾರೆ: ದತ್ತ ವಿರುದ್ಧ ಜೆಡಿಎಸ್ ಟೀಕೆ

02:37 PM Jan 08, 2023 | Team Udayavani |

ಬೆಂಗಳೂರು: ಹಲವು ದಶಕಗಳಿಂದ ದೇವೇಗೌಡರ ಜೊತೆಯಲ್ಲಿದ್ದ ಹಿರಿಯ ರಾಜಕಾರಣಿ ವೈ.ಎಸ್.ವಿ ದತ್ತಾ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಮನಸ್ಸು ಮಾಡಿದ್ದಾರೆ. ಈ ಬಗ್ಗೆ ಕೆಲವೇ ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ಅಧಿಕೃತ ಘೋಷಣೆ ಮಾಡಿದ್ದರು. ಆದರೆ ಇದೀಗ ಈ ಬಗ್ಗೆ ಜೆಡಿಎಸ್ ಟೀಕೆ ಮಾಡಿದ್ದು, ‘ಮಾನಸ ಪುತ್ರ’ ಎಲ್ಲವನ್ನೂ ಮರೆತು ಕೃತಜ್ಞತಾಹೀನರಾಗಿ ಅದೇ ಗೌಡರಿಗೆ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದಿದೆ.

Advertisement

ಈ ಬಗ್ಗೆ ಜೆಡಿಎಸ್ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಟ್ವೀಟ್ ಮಾಡಲಾಗಿದೆ.

ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರ ‘ ಮಾನಸಪುತ್ರ ‘ ಎಂದೇ ಖ್ಯಾತಿ ಆಗಿರುವ ವೈ.ಎಸ್.ವಿ ದತ್ತಾ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ, ಕೈ ಹಿಡಿಯಲು ಅವರು ದಿನವನ್ನೂ ನಿಗದಿ ಮಾಡಿಕೊಂಡಿದ್ದಾರೆ ಎನ್ನುವುದು ಸದ್ಯದ ಸುದ್ದಿ. ಬಹುತೇಕ ಕಡೆ ದೇವೇಗೌಡರ ‘ ಮಾನಸಪುತ್ರ ‘ ಜೆಡಿಎಸ್ ತೊರೆದು ಹೋಗುತ್ತಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ. ‘ ಮಾನಸಪುತ್ರ ‘ ಎನ್ನುವ ಪದವೇ ಹೆಚ್ಚು ಸದ್ದು ಮಾಡುತ್ತಿದೆ. ದತ್ತಾ ಅವರು ಗೌಡರಿಗೆ ಮಾನಸಪುತ್ರ ಪುತ್ರರಾಗಿದ್ದರೋ ಇಲ್ಲವೋ ಗೊತ್ತಿಲ್ಲ, ಆದರೆ, ದೇವೇಗೌಡರು ಮಾತ್ರ ನಿಜಕ್ಕೂ ದತ್ತಾ ಅವರನ್ನು ಹೆತ್ತ ತಂದೆಗಿಂತ ಹೆಚ್ಚು ಸಲುಹಿದ್ದರು, ಪೊರೆದಿದ್ದರು. ಅಂತಹ ದತ್ತಾ, ಮಾನಸಪುತ್ರನೆಂದು ಖ್ಯಾತಿಯ ಜತೆಗೆ ಸಕಲವನ್ನೂ ಸಂಪಾದನೆ ಮಾಡಿಕೊಂಡ ಮೇಲೆ ಸಲುಹಿದ, ಕಷ್ಟ ಬಂದಾಗ ಕಾಪಾಡಿದ, ಕಠಿಣ ಸಂದರ್ಭಗಳಲ್ಲಿ ಕಣ್ರೆಪ್ಪೆಯಂತೆ ಪೊರೆದ, ಅನೇಕ ಸಲ ಜನ್ಮಕೊಟ್ಟ ತಂದೆಗಿಂತ ಗಟ್ಟಿಯಾಗಿ ಜತೆಗೆ ನಿಂತು ಮುಳುಗೇ ಹೋಗುತ್ತಿದ್ದ ಬದುಕನ್ನು ಬದುಕಿಸಿಕೊಟ್ಟ ‘ಮಾನಸ ತಂದೆ’ ಯನ್ನು ಮರೆತು, ತೊರೆಯುತ್ತಿದ್ದರೆ ಎಂದಿದೆ.

ಇದನ್ನೂ ಓದಿ:ಸುಲ್ತಾನ್‌ಪುರಿ ಘಟನೆಯಲ್ಲಿ ಮೃತಪಟ್ಟ ಯುವತಿ ಕುಟುಂಬಕ್ಕೆ ಆರ್ಥಿಕ ಸಹಾಯ ದಾನ ನೀಡಿದ ಶಾರುಖ್‌ ಖಾನ್‌ ಎನ್‌ ಜಿಒ

ಮಾನಸ ಪುತ್ರನನ್ನು ಇನ್ನೊಬ್ಬ ಪುತ್ರನೆಂದೇ ನಂಬಿದ್ದರು ದೇವೇಗೌಡರು. ನಂಬಿ ಪಕ್ಕದಲ್ಲಿ ಇಟ್ಟುಕೊಂಡರು. ಕೇಳಿದ್ದೆಲ್ಲಾ ಕೊಟ್ಟರು, ಕೇಳದಿದ್ದರೂ ಕೊಟ್ಟರು. ಪ್ರೀತಿ, ವಿಶ್ವಾಸ, ವಾತ್ಸಲ್ಯ ಎಲ್ಲವನ್ನೂ ಧಾರೆ ಎರೆದರು. ಆದರೆ, ಇವತ್ತು ಮಾನಸಪುತ್ರ ಎಲ್ಲವನ್ನೂ ಮರೆತು ಕೃತಜ್ಞತಾಹೀನರಾಗಿ ಅದೇ ಗೌಡರಿಗೆ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ ಸೇರುತ್ತಿದ್ದಾರೆ. ಮಾನಸ ಪುತ್ರನಿಗೆ ನಂಬಿಕೆ ಎಂದರೆ ವ್ಯಾಪಾರ, ಪ್ರೀತಿ ಎಂದರೆ ಲಾಭದ ದಾರಿ, ವಿಶ್ವಾಸ ಎಂದರೆ ರಾಜಕೀಯ ಹಕೀಕತ್ತಿನ ರಾಜಮಾರ್ಗ. ಅಂಥ ಮಾನಸಪುತ್ರನ ಬಗ್ಗೆ ಗೌಡರು ಕೊರಗುವುದಿಲ್ಲ. ಏಕೆಂದರೆ, ಪಕ್ಷದ ಎಲ್ಲಾ ನಾಯಕರು, ಕಟ್ಟ ಕಡೆಯ ಕಾರ್ಯಕರ್ತನೂ ಮಾಜಿ ಪ್ರಧಾನಿಗಳ ಮಾನಸಪುತ್ರರೇ.. ಢೋಂಗಿ ಮಾನಸಪುತ್ರರನ್ನು ಮರೆ ಲೇಸು ಎಂದು ಜೆಡಿಎಸ್ ಖಾರವಾಗಿ ಟ್ವೀಟ್ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next