ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಜೆಡಿಎಸ್ ಕೋರ್ ಕಮಿಟಿ ಸಭೆ ನಡೆದಿದ್ದು, ಚುನಾವಣ ತಯಾರಿ, ಪಕ್ಷ ಸಂಘಟನೆ ಸೇರಿ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ.
ಪಕ್ಷದ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚಿಸಿ, ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಪ್ರಮುಖವಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಗೆ ಮೈತ್ರಿ ಧರ್ಮ ಪಾಲಿಸುವುದು, ಪಕ್ಷದ ಅಸ್ತಿತ್ವ ಗಟ್ಟಿಗೊಳಿಸುವುದರ ಜತೆಗೆ ಪಕ್ಷದ ಸಂಘಟನೆಯನ್ನು ಬಲಪಡಿಸಬೇಕು. ಇದಕ್ಕಾಗಿ ಪ್ರತಿಯೊಂದು ಲೋಕಸಭಾ ಕ್ಷೇತ್ರವಾರು ಕೋರ್ ಕಮಿಟಿ ಸದಸ್ಯರು ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ಒತ್ತು ಕೊಡಬೇಕು. ಸ್ಥಳೀಯ ಮಟ್ಟದಲ್ಲಿ ಪಕ್ಷದಲ್ಲಿ ಸಮಸ್ಯೆಗಳೇನಾದರೂ ಇದ್ದರೆ ಅವುಗಳನ್ನು ಬಗೆಹರಿಸಬೇಕು. ಪ್ರತೀ ಲೋಕಸಭಾ ಕ್ಷೇತ್ರಕ್ಕೆ ಇಬ್ಬರು-ಮೂವರು ಸದಸ್ಯರ ಉಸ್ತುವಾರಿ ತಂಡಗಳನ್ನು ನೇಮಕ ಮಾಡಬೇಕು. ಉಸ್ತುವಾರಿ ತಂಡಗಳ ನೇಮಕ ಹಾಗೂ ಪ್ರವಾಸ ಕಾರ್ಯಕ್ರಮಕ್ಕೆ ಅಂತಿಮ ರೂಪ ನೀಡಲು ಫೆ. 5ರಂದು ಮತ್ತೂಂದು ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.
ಸಭೆಯಲ್ಲಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖೀಲ್ ಕುಮಾರಸ್ವಾಮಿ, ಮುಖಂಡರಾದ ವೆಂಕಟರಾವ್ ನಾಡಗೌಡ, ಎಚ್.ಕೆ. ಕುಮಾರಸ್ವಾಮಿ, ಆಲ್ಕೋಡ ಹನುಮಂತಪ್ಪ, ರಾಜೂಗೌಡ ಪಾಟೀಲ್, ಕೆ.ಎ. ತಿಪ್ಪೇಸ್ವಾಮಿ, ಎ. ಮಂಜು, ಸುರೇಶ್ ಗೌಡ, ಕೆ.ಎಂ. ಕೃಷ್ಣಾರೆಡ್ಡಿ, ರಾಜಾ ವೆಂಕಟಪ್ಪ ನಾಯಕ್, ಟಿ.ಎ. ಶರವಣ, ಬಿ.ಎಂ. ಫಾರೂಕ್, ಎಚ್.ಎಂ. ರಮೇಶ್‌ಗೌಡ ಮತ್ತಿತರರು ಇದ್ದರು.