Advertisement

ವಿಧಾನಸಭೆ ಉಪಚುನಾವಣೆಗೆ ಜೆಡಿಎಸ್‌ ಸ್ಪರ್ಧೆ

10:29 PM Feb 14, 2021 | Team Udayavani |

ಬೆಂಗಳೂರು: ಸದ್ಯದಲ್ಲೇ ಎದುರಾಗಲಿರುವ ವಿಧಾನಸಭೆ ಉಪಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬುದಾಗಿ ಪ್ರಕಟಿಸಿದ್ದ ಜೆಡಿಎಸ್‌ ಇದೀಗ ಮಸ್ಕಿ, ಸಿಂಧಗಿ ಹಾಗೂ ಬಸನ ಕಲ್ಯಾಣ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಪ್ರಕಟಿಸಿದ್ದು, ಉಪಚುನಾವಣಾ ಕಣ ರಂಗೇರುವ ಲಕ್ಷಣ ಕಾಣುತ್ತಿದೆ.

Advertisement

ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ಇದನ್ನು ಸ್ಪಷ್ಟಪಡಿಸಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಪಕ್ಷದ ವರಿಷ್ಠರ ಒಪ್ಪಿಗೆ ಪಡೆದು ಮಸ್ಕಿ, ಸಿಂಧಗಿ ಹಾಗೂ ಬಸವ ಕಲ್ಯಾಣ ಕ್ಷೇತ್ರಗಳ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಳ್ಳಲಾಗುವುದು. ಹಣವಿಲ್ಲದಿದ್ದರೆ ಸಾಲ ಮಾಡಿಯಾದರೂ ಪಕ್ಷವನ್ನು ಉಳಿಸುವ ವರಿಷ್ಠರ ನಡೆಯನ್ನೇ ಅನುಸರಿಸುತ್ತೇನೆ. ಆದರೆ ಪಕ್ಷವನ್ನು ಯಾವುದೇ ಪಕ್ಷದ ಅಡಿಯಾಳಾಗಿ ಹೋಗಲು ಅವಕಾಶ ನೀಡುವುದಿಲ್ಲ ಎಂದು ಹೇಳೀದರು.

ವರಿಷ್ಠರಾದ ಎಚ್‌.ಡಿ.ದೇವೇಗೌಡರು ಉಪಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಹೇಳಿದ್ದರು. ಪಕ್ಷ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಇದೀಗ ಅವರು ಅನುಮತಿ ನೀಡಿದರೆ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ನಮ್ಮ ಪಕ್ಷ ಹಾಗೂ ಲಕ್ಷಾಂತರ ಕಾರ್ಯಕರ್ತರ ಬೆವರಿನ ಶ್ರಮದಿಂದ ಬೆಳೆದಿದ್ದರೂ ಜೆಡಿಎಸ್‌ ಪಕ್ಷವೇ ಅಲ್ಲ ಎನ್ನುವವರಿಗೆ ನಾವು ಸ್ಪರ್ಧಿಸದಿದ್ದರೆ ಆತಂಕ ಏಕೆ. ನಿಮಗೇಕೆ ಹೊಟ್ಟೆ ನೋವು (ಸಿದ್ದರಾಮಯ್ಯ ಹೆಸರೇಳದೆ)? ಉಪ ಮುಖ್ಯಮಂತ್ರಿಯಾಗಿದ್ದವರು ವರಿಷ್ಠರಾದ ದೇವೇಗೌಡರಿಗೆ ದ್ರೋಹ ಬಗೆದು ಹೋಗದು. ಹುಬ್ಬಳ್ಳಿಯಲ್ಲಿ “ಅಹಿಂದ ಸಮಾವೇಶ’ ನಡೆಸಿ ಜೆಡಿಎಸ್‌ ಪಕ್ಷವನ್ನು ಮುಗಿಸುವ ಹುನ್ನಾರ ನಡೆಸಿದರು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದರು

ತಾಕತ್ತಿದ್ದರೆ ಸ್ವತಂತ್ರ ಪಕ್ಷ ಕಟ್ಟಿ ತೋರಿಸಿ ಎಂದು ಸವಾಲು ಹಾಕಿದ್ದೆ. ಆದರೆ ಅವರು ಸ್ವತಂತ್ರ ಪಕ್ಷ ಕಟ್ಟಲಿಲ್ಲ. ಬದಲಿಗೆ ಕಾಂಗ್ರೆಸ್‌ಗೆ ಹೋದರು. ಆದರೆ ದೇವೇಗೌಡರು ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೆ ಹೋಗಲಿಲ್ಲ. ಕಾಂಗ್ರೆಸ್‌ನವರು ಗತಿಯಿಲ್ಲದೆ ಕೈಕಾಲು ಕಟ್ಟಿ ದೇವೇಗೌಡರನ್ನು ಪ್ರಧಾನಿ ಮಾಡಿಕೊಂಡರು. ಆ 10 ತಿಂಗಳ ಅವಧಿಯಲ್ಲಿ ಪರಿಶುದ್ಧ ಆಡಳಿತ ನೀಡಿದ ದೇವೇಗೌಡರು ದೇಶ, ರಾಜ್ಯಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

Advertisement

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ ಎಂದು ಸಿದ್ದರಾಮಯ್ಯ ಸದನದಲ್ಲಿ ಹೇಳಿದ್ದರು. ಆಗ ಯಡಿಯೂರಪ್ಪ ಅವರು ಬಿಡಿಎನಲ್ಲಿ ನಡೆದ “ರೀ ಡು’ ಪ್ರಸ್ತಾಪಿಸುತ್ತಿದ್ದಂತೆ ಸಿದ್ದರಾಮಯ್ಯನವರು ಉಸಿರೇ ಬಿಡಲಿಲ್ಲ ಎಂದು ಕುಟುಕಿದರು.

ಬಿಜೆಪಿ ಬಗ್ಗೆ ಮೃದು ಧೋರಣೆ ಇಲ್ಲ : 

ಬಿಜೆಪಿ ಬಗ್ಗೆ ಮೃದು ಧೋರಣೆ ಇಲ್ಲ. ಯಾವುದೇ ಕಾರಣಕ್ಕೂ ಯಾವುದೇ ಪಕ್ಷದ ಬಗ್ಗೆ ಮೃದು ಧೋರಣೆ, ರಾಜಿ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ಯಡಿಯೂರಪ್ಪನವರ ವಿರುದ್ಧ ವೈಯಕ್ತಿಕ ದ್ವೇಷವಿಲ್ಲ. ಆದರೆ 2008-13ರವರೆಗಿನ ಅವಧಿಯಲ್ಲಿ ನಡೆದ ಅಕ್ರಮ, ಭ್ರಷ್ಟಾಚಾರ, ಸಂಪತ್ತಿನ ಲೂಟಿ ವಿರುದ್ಧ ಹೋರಾಟ ನಡೆಸಿದೆ. ಅದಕ್ಕೆ ಪ್ರತಿಯಾಗಿ ನನ್ನ ವಿರುದ್ದವೂ ನಾಲ್ಕು ಪ್ರಕರಣ ದಾಖಲಿಸಿದ್ದು, ಇಂದಿಗೂ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next