Advertisement
ಜೆಡಿಎಸ್ ನಾಯಕರ ಸೂಚನೆಯಂತೆ ಒಕ್ಕಲಿಗ ಸಮುದಾಯದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ಸೇರಿದಂತೆ ಪ್ರಮುಖ ನಾಯಕರು ಈಗಾಗಲೇ ಬಿಜೆಪಿಯ ಒಕ್ಕಲಿಗ ಶಾಸಕರನ್ನು ಸಂಪರ್ಕಿಸಿದ್ದಾರೆ. ಸರ್ಕಾರ ಉರುಳಿಸುವ ಪ್ರಯತ್ನಕ್ಕೆ ಕೈಜೋಡಿಸದಂತೆ ಸಲಹೆ ಮಾಡುವುದರ ಜತೆಗೆ, ಸರ್ಕಾರ ಉರುಳಿದರೆ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ತಿಳಿದುಬಂದಿದೆ.
Related Articles
ಈ ಮಧ್ಯೆ ಸಮ್ಮಿಶ್ರ ಸರ್ಕಾರ ಉರುಳಿಸಿದರೆ ಬಿಜೆಪಿಗೆ ಒಕ್ಕಲಿಗ ವಿರೋಧಿ ಎಂಬ ಹಣೆಪಟ್ಟಿ ಬರಲಿದೆ ಎಂಬ ಎಚ್ಚರಿಕೆಯನ್ನೂ ಆ ಪಕ್ಷದ ಶಾಸಕರಿಗೆ ಪರೋಕ್ಷವಾಗಿ ನೀಡಲಾಗುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದವರೇ ಹೆಚ್ಚಾಗಿದ್ದು, ಈ ಭಾಗದಲ್ಲಿ ತನ್ನ ಬಲ ವೃದ್ಧಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಹಿಡಿತದಲ್ಲೇ ಇದ್ದ ಮತ್ತು ಕಾಂಗ್ರೆಸ್ ಸ್ವಲ್ಪ ಮಟ್ಟಿಗೆ ಶಕ್ತಿ ಹೊಂದಿದ್ದ ಹಾಸನ ಜಿಲ್ಲೆಯಲ್ಲಿ ಬಿಜೆಪಿಯಿಂದ ಒಕ್ಕಲಿಗ ಸಮುದಾಯದ ಶಾಸಕ ಗೆದ್ದು ಬಂದಿರುವುದು ಇದಕ್ಕೆ ಉದಾಹರಣೆ. ಇದಲ್ಲದೆ, ಒಕ್ಕಲಿಗ ಸಮುದಾಯ ಹೆಚ್ಚಾಗಿರುವ ಮೈಸೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ತುಮಕೂರು ಜಿಲ್ಲೆಗಳಲ್ಲೂ ಬಿಜೆಪಿ ತನ್ನ ಶಕ್ತಿ ಹೆಚ್ಚಿಸಿಕೊಳ್ಳುತ್ತಿದೆ.
Advertisement
ಒಂದೊಮ್ಮೆ ಜೆಡಿಎಸ್ ಸರ್ಕಾರ ಉರುಳಿಸಿದರೆ ಈ ಎಲ್ಲಾ ಭಾಗದಲ್ಲಿ ಒಕ್ಕಲಿಗ ಸಮುದಾಯದವರು ಬಿಜೆಪಿ ವಿರುದ್ಧ ತಿರುಗಿಬೀಳಬಹುದು. ಹಾಗೇನಾದರೂ ಆದರೆ ಮುಂದಿನ ದಿನಗಳಲ್ಲಿ ನಿಮ್ಮ ರಾಜಕೀಯ ಬೆಳವಣಿಗೆಗೆ ಅಡ್ಡಿಯಾಗಬಹುದು. ಆದ್ದರಿಂದ ಸಮ್ಮಿಶ್ರ ಸರ್ಕಾರಕ್ಕೆ ಅಪಾಯ ಎದುರಾದರೆ ರಕ್ಷಣೆಗೆ ಬನ್ನಿ ಎಂಬ ಸಂದೇಶವನ್ನು ಈಗಾಗಲೇ ಒಕ್ಕಲಿಗ ಸಮುದಾಯದ ಬಿಜೆಪಿ ಶಾಸಕರಿಗೆ ರವಾನಿಸಲಾಗಿದೆ.
ಸಂಪರ್ಕಿಸಿದ್ದು ನಿಜಈ ಕುರಿತಂತೆ ಪ್ರತಿಕ್ರಿಯಿಸಿರುವ ಬೆಂಗಳೂರಿನ ಬಿಜೆಪಿ ಶಾಸಕರೊಬ್ಬರು, ಸಮಾಜದ ಗಣ್ಯರೊಬ್ಬರು ತಮ್ಮನ್ನು ಸಂಪರ್ಕಿಸಿದ್ದು ನಿಜ. ಸರ್ಕಾರ ಉರುಳಿಸುವ ಪ್ರಯತ್ನಕ್ಕೆ ಕೈಜೋಡಿಸದಂತೆ ಮತ್ತು ಸರ್ಕಾರ ಅಸ್ಥಿರಗೊಂಡರೆ ಬೆಂಬಲಕ್ಕೆ ನಿಲ್ಲುವಂತೆ ಸಲಹೆ ನೀಡಿದ್ದರು. ಆದರೆ, ಮುಳುಗುವ ದೋಣಿಯಲ್ಲಿ ಆಶ್ರಯ ಪಡೆಯಲು ಯಾರು ತಾನೇ ಮುಂದಾಗುತ್ತಾರೆ? ಹೀಗಾಗಿ ನಾವೇನೂ ಸರ್ಕಾರ ಉರುಳಿಸುವ ಪ್ರಯತ್ನ ಮಾಡುವುದಿಲ್ಲ. ಅದಾಗಿಯೇ ಉರುಳಿದರೆ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದ್ದಾರೆ. – ಪ್ರದೀಪ್‌ಕುಮಾರ್ ಎಂ.