ಕುಷ್ಟಗಿ: ಕುಷ್ಟಗಿಯಲ್ಲಿ ಜ.30 ರಂದು ಪಂಚರತ್ನ ರಥ ಯಾತ್ರೆಯ ಸಮಾವೇಶದಲ್ಲಿ ಜನ ಸೇರಿಸುವ ಆಧಾರದ ಮೇಲೆ ಘೋಷಿತ ಅಭ್ಯರ್ಥಿಯ ಸ್ಪರ್ಧೆಯ ಭವಿಷ್ಯ ನಿರ್ಧಾರವಾಗಲಿದೆ.
ಈಗಾಗಲೇ ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ತುಕಾರಾಂ ಸೂರ್ವೆ ಎಂದು ಅಧಿಕೃತ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಈ ಸಮಾವೇಶದಲ್ಲಿ ಎಷ್ಟು ಜನ ಸೇರ್ತಾರೆ ಎನ್ನುವ ಪ್ರಶ್ನೆ ಉದ್ಭವಿಸಿದೆ. ಈ ಹಿನ್ನೆಲೆಯಲ್ಲಿ ಕನಿಷ್ಟ 10 ಸಾವಿರ ಮೇಲ್ಪಟ್ಟು ಜನ ಸೇರಿದರೆ ಜೆಡಿಎಸ್ ಅಭ್ಯರ್ಥಿ ಭವಿಷ್ಯ ಜೀವಂತವಾಗಲಿದೆ ಎನ್ನಲಾಗುತ್ತಿದೆ. ಇದಕ್ಕಿಂತ ಕನಿಷ್ಟ ಜನಸಂಖ್ಯೆ ಸೇರಿದರೆ ಅಭ್ಯರ್ಥಿಯನ್ನು ಬದಲಿಸುವ ನಿರ್ಧಾರಕ್ಕೂ ಮುಂದಾಗಬಹುದು.ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ತುಕಾರಾಂ ಸೂರ್ವೆ ಅವರು ಸೋಮವಾರದ ಸಮಾವೇಶಕ್ಕೆ ಶಕ್ತಿ ಮೀರಿ ಪ್ರಯತ್ನಶೀಲರಾಗಿರುವುದು ಕಂಡು ಬಂದಿದ್ದು ಸೋಮವಾರದ ಪಂಚರತ್ನ ಜೆಡಿಎಸ್ ಸಮಾವೇಶ ಅಭ್ಯರ್ಥಿ ತುಕಾರಾಂ ಸೂರ್ವೆ ಅವರಿಗೆ ಅಗ್ನಿ ಪರೀಕ್ಷೆಯಾಗಿದೆ.
ಭಿನ್ನಮತ ಶಮನ
ಸ್ಥಳೀಯವಾಗಿ ಜೆಡಿಎಸ್ ರಾಜ್ಯ ಜಂಟಿ ಕಾರ್ಯದರ್ಶಿ ಸಿ.ಎಂ. ಹಿರೇಮಠ, ಜೆಡಿಎಸ್ ಜಿಲ್ಲಾ ಮಾಜಿ ಅಧ್ಯಕ್ಷ ಎ.ಅಮರೇಗೌಡ ಪಾಟೀಲ, ನಿಕಟಪೂರ್ವ ತಾಲೂಕಾ ಅಧ್ಯಕ್ಷ ಬಸವರಾಜ ನಾಯಕ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಾಲೂಕಿನಲ್ಲಿ ತಾಲೂಕಾ ಮಟ್ಟದ ಪಂಚರತ್ನ ಯಾತ್ರೆಯನ್ನು ಏಕಪಕ್ಷೀಯವಾಗಿ ಮಾಡಿ ಮುಗಿಸಿದ್ದಾರೆ. ಈ ನಡುವೆ ಮಾಜಿ ಎಂಎಲ್ಸಿ ಎಚ್.ಸಿ.ನೀರಾವರಿ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಅನಗತ್ಯ ಹಸ್ತಕ್ಷೇಪ ಈ ಬೆಳವಣಿಗೆ ಹಿನ್ನೆಲೆಯಲ್ಲಿ ಈ ಮುಖಂಡರ ಭಿನ್ನಾಭಿಪ್ರಾಯದ ಮುನಿಸು ಮರೆತಿಲ್ಲ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡ ಬೆಳವಣಿಗೆಗೆ ಸಿಂಧನೂರು ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ ಮದ್ಯಸ್ಥಿವಹಿಸಬೇಕಾಯಿತು ಸದ್ಯ ಭಿನ್ನಮತ ಕೊಂಚ ಶಮನವಾಗಿದೆ. ಹೀಗಾಗಿ ಬಸವರಾಜ ನಾಯಕ ಹೊರತುಪಡಿಸಿ ಸಿ.ಎಂ.ಹಿರೇಮಠ, ಎ. ಅಮರೇಗೌಡ ಪಾಟೀಲ ಅವರು, ಎಚ್.ಡಿ.ಕುಮಾರಸ್ವಾಮಿ ಭಾಗವಹಿಸುವ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಫೇಸ್‌ಬುಕ್ ಲವ್… ಉತ್ತರ ಪ್ರದೇಶದ ಯುವಕನನ್ನ ವರಿಸಲು ಸ್ವೀಡನ್‌ನಿಂದ ಬಂದಳು!