Advertisement

ನನಗೆ ನೇರ ಎದುರಾಳಿ ಬಿಜೆಪಿ

12:05 PM Oct 14, 2020 | Suhan S |

ಬೆಂಗಳೂರು : ರಾಜರಾಜೇಶ್ವರಿನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ನನಗೆ ನೇರ ಎದುರಾಳಿ ಬಿಜೆಪಿ. ಈ ಬಾರಿ ಜೆಡಿಎಸ್‌-ಬಿಜೆಪಿ ನಡುವೆ ಹೋರಾಟ ನಡೆಯಲಿದೆ’ ಇದು ರಾಜರಾಜೇಶ್ವರಿ ನಗರ ಜೆಡಿಎಸ್‌ ಅಭ್ಯರ್ಥಿ ಜ್ಞಾನಭಾರತಿ ಕೃಷ್ಣ ಮೂರ್ತಿ ಅವರ ಮಾತುಗಳು.

Advertisement

­ನಿಮಗೆ ಟಿಕೆಟ್‌ ಸಿಗುವ ನಿರೀಕ್ಷೆ ಇತ್ತಾ? : ಖಂಡಿತವಾಗಿಯೂ ಇತ್ತು. ಕ್ಷೇತ್ರದ ಜನತೆ ಜತೆ ನಿರಂತರ ಹಾಗೂ ನಿಕಟ ಸಂಪರ್ಕ ಹೊಂದಿದ್ದೆ. ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಣ್ಣ ಅವರ ಮೇಲೆ ಭರವಸೆ ಇತ್ತು. ಸಾಮಾನ್ಯ ಕಾರ್ಯಕರ್ತನಾದ ನನಗೆ ಟಿಕೆಟ್‌ ನೀಡಿದ್ದಾರೆ. ನಾನು ಕ್ಷೇತ್ರದ ಮನೆ ಮಗ.25 ವರ್ಷಗಳಿಂದ ನಮ್ಮ ಕುಟುಂಬ ಪಕ್ಷದ ನಿಷ್ಠಾವಂತರಾಗಿ ಸೇವೆ ಸಲ್ಲಿಸಿದ್ದೇವೆ.

­ಈ ಚುನಾವಣೆಯಲ್ಲಿ ನಿಮಗೆಯಾರು ನೇರ ಎದುರಾಳಿ? :  ನನಗೆ ನೇರ ಎದುರಾಳಿ ಬಿಜೆಪಿ. ಬಿಜೆಪಿ, ಜೆಡಿಎಸ್‌ ನಡುವೆಯೇ ಇಲ್ಲಿ ಹೋರಾಟ. ಕಾಂಗ್ರೆಸ್‌ ಅಭ್ಯರ್ಥಿ ಕ್ಷೇತ್ರಕ್ಕೆ ಹೊಸಬರು. ಅವರಿಗೆ ಕ್ಷೇತ್ರ ಪರಿಚಯವೇ ಇಲ್ಲ.

 ಕಾಂಗ್ರೆಸ್‌ ಅಭ್ಯರ್ಥಿ ತಂದೆ ನಿಮ್ಮದೇ ಪಕ್ಷದ ನಾಯಕರಲ್ಲವೇ? :

ಒಂದು ಕಾಲದಲ್ಲಿ ಈಗಲ್ಲ. ಅವರು ಇಲ್ಲಿದ್ದು ಕಾಂಗ್ರೆಸ್‌ಗೆ ಹೋಗಿ ಮತ್ತೆ ಜೆಡಿಎಸ್‌ಗೆ ಬಂದು. ಕಳೆದ ಚುನಾವಣೆಯಲ್ಲಿ ರಾಮಚಂದ್ರ ಅವರನ್ನು ಕರೆತಂದು ನಿಲ್ಲಿಸಿ ಮತ್ತೆ ಈಗ ಕೈ ಕೊಟ್ಟು ಹೋಗಿದ್ದಾರೆ. ಅವರಿಗೆ ವಿಶ್ವಾಸವಿದ್ದರೆ ಕಾಂಗ್ರೆಸ್‌ನಿಂದ ಅವರೇ ನಿಲ್ಲಬಹುದಿತ್ತು. ತನ್ನ ತಪ್ಪುಗಳಿಂದ ಭಯಬಿದ್ದು ಮಗಳನ್ನು ನಿಲ್ಲಿಸಿದ್ದಾರೆ.

Advertisement

ಬಿಜೆಪಿ ನಿಮ್ಮ ಎದುರಾಳಿಯಾ? ಅಭ್ಯರ್ಥಿ ಮುನಿರತ್ನ ಅವರಾ? :  ಬಿಜೆಪಿಯೇ. ಯಾಕೆಂದರೆ, ಮುನಿರತ್ನ ಅವರು ಅಧರ್ಮದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಿದ್ದಾರೆ. ಜನತೆ ಐದು ವರ್ಷಕ್ಕೆ ಆಶೀರ್ವಾದ ಮಾಡಿದ್ದರೂ ಅಧಿಕಾರ ಆಸೆಗೆ ರಾಜೀನಾಮೆ ನೀಡಿದ್ದಾರೆ.15 ತಿಂಗಳುಕ್ಷೇತ್ರದಲ್ಲಿ ಶಾಸಕರೇ ಇರಲಿಲ್ಲ.

 ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ-ಜೆಡಿಎಸ್‌ ನಡುವೆ ಒಳಒಪ್ಪಂದ, ಡಮ್ಮಿ ಕ್ಯಾಂಡೇಟ್‌ ಎಂಬ ಮಾತುಗಳು ಕೇಳಿ ಬರುತ್ತಿವೆಯಲ್ಲಾ? :

ಖಂಡಿತ ಇಲ್ಲ. ಅದೆಲ್ಲಾ ಸುಳ್ಳು. ಎಚ್‌ಡಿಕೆಯವರನ್ನು ನೋಡಿದರೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಭಯ. ಹೀಗಾಗಿ, ಅಪಪ್ರಚಾರ ಮಾಡಿ ಗೆಲ್ಲುವ ಹುನ್ನಾರ.ಇಂತಹ ತಂತ್ರಕ್ಕೆ ಕಾರ್ಯಕರ್ತರು, ಕ್ಷೇತ್ರದ ಮತದಾರರು ಕಿವಿಗೊಡುವುದಿಲ್ಲ. ಕುಮಾರಣ್ಣ ಅವರು ಆ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಗೊಂದಲಕ್ಕೆ ಅವಕಾಶವಿಲ್ಲ.

ಯಾವ ವಿಚಾರ ಮುಂದಿಟ್ಟು ಪ್ರಚಾರ ಮಾಡುವಿರಿ? : ರಾಜರಾಜೇಶ್ವರಿ ನಗರದ ಅಭಿವೃದ್ಧಿಗೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ 352 ಕೋಟಿ ರೂ. ಅನುದಾನ ಕೊಟ್ಟಿದ್ದರು. ಆದರೆ,ಕ್ಷೇತ್ರದಲ್ಲಿ ಸಮರ್ಪಕ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಹೀಗಾಗಿ, ಎಷ್ಟು ಅನುದಾನ ಬಿಡುಗಡೆಯಾಗಿತ್ತು? ಎಷ್ಟು ಅಭಿ ವೃದ್ಧಿಯಾಗಿದೆ ಎಂಬ ಅಂಕಿ-ಅಂಶ ಜನರ ಮುಂದಿಡುತ್ತೇನೆ. ಕುಮಾರಸ್ವಾಮಿಯವರು 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದು ಸೇರಿ ಪಕ್ಷದ ‌ ಅಭಿವೃದ್ಧಿ ಕಾರ್ಯಕ್ರಮಗಳನ್ನು ತಿಳಿಸಿ ಮತಯಾಚಿಸುತ್ತೇನೆ.

­ನೀವು ಆಯ್ಕೆಯಾದರೆ ಕ್ಷೇತ್ರದದ ಅಭಿವೃದ್ಧಿಗೆ ನಿಮ್ಮ ಯೋಜನೆ ಏನು? :  ಮತದಾರರು ಆಶೀರ್ವಾದ ಮಾಡಿದರೆ ಕ್ಷೇತ್ರದ ವಿದ್ಯಾರ್ಥಿಗಳಿಗೆ ದೆಹಲಿ ಮಾದರಿಯಲ್ಲಿ ಶಿಕ್ಷಣ, ಆರೋಗ್ಯ ಸೇವೆ ಹೈಟೆಕ್‌ ಆಸ್ಪತ್ರೆ ನಿರ್ಮಾಣ ಮೊದಲ ಆದ್ಯತೆ. ಏಕೆಂದರೆ ಕೋವಿಡ್‌ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಜನ ತೊಂದರೆಪಟ್ಟಿದ್ದಾರೆ. ಹೀಗಾಗಿ, ಬೆಂಗಳೂರಲ್ಲೇ ಮಾದರಿ ಕ್ಷೇತ್ರ ಮಾಡುವಕನಸು ನನ್ನದು.

 

ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next