Advertisement

ಮಸ್ಕಿ ಉಪಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿ ಹುಡುಕಾಟ

05:44 PM Feb 19, 2021 | Team Udayavani |

ಮಸ್ಕಿ: ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷ ಪ್ರಬಲ ಇಲ್ಲದಿದ್ದರೂ ಮತ್ತೂಬ್ಬರ ಗೆಲುವು-ಸೋಲಿನ ಮೇಲೆ ಪರಿಣಾಮ ಬೀರಲಿದೆ. ಇದೇ ಕಾರಣಕ್ಕೆ ಉಪಚುನಾವಣೆಯಲ್ಲಿ
ಅಭ್ಯರ್ಥಿ ಹಾಕಲು ಹಿಂದೇಟು ಹಾಕಿದ್ದ ಜೆಡಿಎಸ್‌ ಈಗ ಸ್ಪರ್ಧೆಯ ಉತ್ಸುಕದಿಂದ ಸೂಕ್ತ ಅಭ್ಯರ್ಥಿಯ ಹುಡುಕಾಟ ನಡೆಸಿದೆ.

Advertisement

ಕಳೆದ ಒಂದು ವಾರದಿಂದ ಸ್ವತಃ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಈ ಪ್ರಯತ್ನದಲ್ಲಿದ್ದು, ಇದಕ್ಕಾಗಿ ಮಸ್ಕಿ ಮಾತ್ರವಲ್ಲದೇ ಮಾನ್ವಿ ಮತ್ತು ಲಿಂಗಸುಗೂರು ಮೂಲದ ವ್ಯಕ್ತಿಗಳ ಜತೆ ಮಾತುಕತೆ ನಡೆಸುವ ಮೂಲಕ ಮಸ್ಕಿ ಉಪಚುನಾವಣೆ ಅಖಾಡಕ್ಕೆ ಧುಮುಕುವಂತೆ ಸಂದೇಶ ಸಾರುತ್ತಿದ್ದಾರೆ. ಆದರೆ ಹೈಕಮಾಂಡ್‌ ಈ ಬಗ್ಗೆ ಒಲವು ಇದ್ದರೂ ಇಲ್ಲಿನ ಆಕಾಂಕ್ಷಿಗಳು ಮಾತ್ರ ಬೈ ಎಲೆಕ್ಷನ್‌ಗೆ ಸ್ಪರ್ಧೆಯೇ ಬೇಡ ಎನ್ನುವ ನಿರ್ಣಯವನ್ನು ನಯವಾಗಿ
ತಿರಸ್ಕರಿಸುತ್ತಿದ್ದಾರೆ.

ಏನಿದೆ ಪರಿಸ್ಥಿತಿ?: ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ರಾಜೀನಾಮೆ ಸಲ್ಲಿಸಿ ತೆರವಾದ ಇಲ್ಲಿನ ವಿಧಾನಸಭೆ ಕ್ಷೇತ್ರಕ್ಕೆ ಇದುವರೆಗೂ ಚುನಾವಣೆ ನಡೆದಿಲ್ಲ. ಕಾನೂನು ತೊಡಕು, ಎಲೆಕ್ಷನ್‌ ಘೋಷಣೆ ವಿಳಂಬದ ಫಲವಾಗಿ ಇದುವರೆಗೆ ಮಸ್ಕಿ ಚುನಾವಣೆ ಮುಹೂರ್ತವೇ ಕೂಡಿ ಬರುತ್ತಿಲ್ಲ. ಆದರೆ ಈಗ ಯಾವುದೇ ಕ್ಷಣದಲ್ಲಿ ಮಸ್ಕಿ ಉಪಚುನಾವಣೆ ದಿನಾಂಕ ಘೋಷಣೆಯ ನಿರೀಕ್ಷೆ ಇದೆ. ಇದಕ್ಕಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡು ಪಕ್ಷಗಳು ಎಲ್ಲ ಸಿದ್ಧತೆಯಲ್ಲಿವೆ.

ಬಿಜೆಪಿಯಿಂದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಇತ್ತ ಕಾಂಗ್ರೆಸ್‌ನಲ್ಲೂ ಆರ್‌. ಬಸನಗೌಡ ತುರುವಿಹಾಳ ಚುನಾವಣೆ ಅಭ್ಯರ್ಥಿ ಎಂದು ಘೋಷಿತವಾಗಿದೆ. ಎರಡೂ ಪಕ್ಷದಿಂದಲೂ ಬಿರುಸಿನ ಪ್ರಚಾರ ಕ್ಷೇತ್ರದಲ್ಲಿ ಈಗಾಗಲೇ ನಡೆದಿದೆ. ಆದರೆ ಜೆಡಿಎಸ್‌ನಿಂದ ಕಣಕ್ಕೆ ಇಳಿಯಲು ಅಭ್ಯರ್ಥಿಗಳ ಹೆಸರು ಇನ್ನು ಬಹಿರಂಗವಾಗಿಲ್ಲ. ಆದರೆ ಈಗ ಪಕ್ಷದ ಅಸ್ತಿತ್ವ, ಮತ್ತೂಬ್ಬರು, ಸೋಲು-ಗೆಲುವಿನ ನಿರ್ಣಯಕ್ಕಾಗಿಯೇ ಸ್ಪರ್ಧೆ ಮಾಡಬೇಕು ಎನ್ನುವ ನಿಲುವು ವ್ಯಕ್ತವಾಗಿದ್ದು ಇದಕ್ಕಾಗಿ ಈಗ ಸಿದ್ಧತೆಗಳೂ ನಡೆದಿವೆ.

ನಿರಾಸಕ್ತಿ: ಈ ಹಿಂದೆ 2018ರ ಸಾರ್ವತ್ರಿಕ ಚುನಾವಣೆ ವೇಳೆ ಜೆಡಿಎಸ್‌ನಿಂದ ಲಿಂಗಸುಗೂರು ಮೂಲದ ರಾಜಾ ಸೋಮನಾಥ ನಾಯಕ ಸ್ಪರ್ಧೆ ಮಾಡಿದ್ದರು.
ಆದರೆ ಇವರ ನಿರೀಕ್ಷಿತ ಮತಗಳಿಕೆಗಿಂತ ಆಗಿನ ಬಿಜೆಪಿ ಅಭ್ಯರ್ಥಿ ಆಗಿದ್ದ ಆರ್‌.ಬಸನಗೌಡ ತುರುವಿಹಾಳ ಅವರ ಸೋಲಿಗೆ ಪರೋಕ್ಷ ಪರಿಣಾಮ ಬೀರಿದ್ದರು.

Advertisement

10 ಸಾವಿರ ಮತಗಳನ್ನು ಜೆಡಿಎಸ್‌ ಅಭ್ಯರ್ಥಿ ಸೋಮನಾಥ ನಾಯಕ ಪಡೆದಿದ್ದರಿಂದ ಇಲ್ಲಿನ ಬಿಜೆಪಿ ಅಭ್ಯರ್ಥಿ 213 ಮತಗಳಿಂದ ಹಿಂದೆ ಬಿದ್ದು ಆಗಿನ
ಕಾಂಗ್ರೆಸ್‌ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ ಗೆಲುವು ದಾಖಲಿಸಿದ್ದರು. ಈಗ ಇಂತಹದ್ದೇ ರಾಜಕೀಯ ಲೆಕ್ಕಾಚಾರದ ಮೇಲೆ ಜೆಡಿಎಸ್‌ ಅಖಾಡಕ್ಕೆ ಇಳಿಯಲು
ತಯಾರಿ ನಡೆಸಿದೆ. ಈ ಹಿಂದೆ ಅಭ್ಯರ್ಥಿ ಆಗಿದ್ದ ರಾಜಾ ಸೋಮನಾಥ ನಾಯಕರನ್ನೇ ಕಣಕ್ಕೆ ಇಳಿಯಲು ಒತ್ತಡ ಹೇರುತ್ತಿದ್ದು, ಅವರು ನಿರಾಸಕ್ತಿ ತೋರಿದ ಪರಿಣಾಮ ಮಾನ್ವಿ ಮೂಲದ ಹಾಲಿ ಶಾಸಕ ರಾಜಾವೆಂಕಟಪ್ಪ ನಾಯಕ ಅವರ ಸಹೋದರ ರಾಮಚಂದ್ರ ನಾಯಕ ಅವರನ್ನು ಕಣಕ್ಕೆ ಇಳಿಸಲು ಜೆಡಿಎಸ್‌ ಚಿಂತನೆ ನಡೆಸಿದೆ.

ಇದಕ್ಕಾಗಿ ಕಳೆದ ಭಾನುವಾರ ಬೆಂಗಳೂರಿನಲ್ಲಿ ನಡೆದ ಜೆಡಿಎಸ್‌ ಮುಖಂಡರ ಕೋರ್‌ ಕಮಿಟಿಯಲ್ಲೂ ಈ ವಿಷಯ ಪ್ರಸ್ತಾಪವಾಗಿದೆ. ಈ ಬಗ್ಗೆ ಸ್ವತಃ ಮಾಜಿ
ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾನ್ವಿ ಶಾಸಕ ರಾಜಾವೆಂಕಟಪ್ಪ ನಾಯಕ ಅವರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಆದರೆ, ಈ ಬಗ್ಗೆ ತಮ್ಮ ಸಹೋದರರ ಅಭಿಪ್ರಾಯ ಪಡೆಯುವುದಾಗಿ ಮಾನ್ವಿ ಶಾಸಕರು ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಸ್ವತಃ ರಾಮಚಂದ್ರ
ನಾಯಕ ಈಗಲೇ ನಾನು ಅಭ್ಯರ್ಥಿ ಆಗಲಾರೆ. ಸ್ವಕ್ಷೇತ್ರ ಮಾನ್ವಿಯಲ್ಲೇ ಪಕ್ಷ ಸಂಘಟನೆ ಅಗತ್ಯವಿದೆ. ಎರಡು ಬಾರಿ ಸೋತಿದ್ದೇವೆ. ಈಗ ಜನರು ಆಶೀರ್ವಾದ
ಮಾಡಿದ್ದಾರೆ. ಮಾನ್ವಿಯಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು. ಮಸ್ಕಿಯಲ್ಲಿ ಸ್ಪರ್ಧೆ ಮಾಡಲಾರೆ ಎಂದು ತಮ್ಮ ಆಪ್ತರ ಮುಂದೆ ಹೇಳಿಕೊಂಡಿದ್ದಾರೆ
ಎನ್ನಲಾಗಿದೆ.

ಕುಮಾರಣ್ಣ ಮಸ್ಕಿ ಕ್ಷೇತ್ರಕ್ಕೆ ಸ್ಪರ್ಧೆ ಮಾಡಲು ಸೂಚನೆ ನೀಡಿದ್ದು ನಿಜ. ಆದರೆ ಈ ಬಗ್ಗೆ ನಮಗೆ ಈಗಲೇ ಆಸಕ್ತಿ ಇಲ್ಲ. ಮಾನ್ವಿಯಲ್ಲಿ ನಮ್ಮ ಪಕ್ಷ ಇನ್ನು ಗಟ್ಟಿಯಾಗಬೇಕಿದೆ. ಮುಂದಿನ ದಿನಗಳಲ್ಲಿ ಬೇಕಾದರೆ ಪ್ರಯತ್ನ ಮಾಡುವೆ.
ರಾಮಚಂದ್ರ ನಾಯಕ,
ಜೆಡಿಎಸ್‌ ಮುಖಂಡರು, ಮಾನ್ವಿ

*ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next