Advertisement

ಜೆಡಿಎಸ್‌ ಅಭ್ಯರ್ಥಿ ಘೋಷಣೆ ಬೆನ್ನೆಲ್ಲೇ ಅಸಮಾಧಾನ

03:30 PM Feb 20, 2018 | |

ಯಾದಗಿರಿ: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕು ಮತಕ್ಷೇತ್ರಗಳ ಜಾತ್ಯಾತೀತ ಜನತಾದಳದ ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಬೆನ್ನಲ್ಲೆ ಯಾದಗಿರಿ ಮತಕ್ಷೇತ್ರದ ಜೆಡಿಎಸ್‌ ಪಕ್ಷದಲ್ಲಿ ಅಸಮಾಧಾನ ಉಂಟಾಗಿದೆ.

Advertisement

ಯಾದಗಿರಿ ವಿಧಾನಸಭಾ ಕ್ಷೇತ್ರದಿಂದ ಎ.ಸಿ. ಕಾಡ್ಲೂರ, ಗುರುಮಠಕಲ್‌ ಕ್ಷೇತ್ರದಿಂದ ನಾಗನಗೌಡ ಕಂದಕೂರ, ಶಹಾಪುರ ಕ್ಷೇತ್ರದಿಂದ ಅಮೀನರೆಡ್ಡಿ ಯಾಳಗಿ ಮತ್ತು ಸುರಪುರ ಕ್ಷೇತ್ರದಿಂದ ರಾಜಾ ಕೃಷ್ಣಪ್ಪ ನಾಯಕ ಅಭ್ಯರ್ಥಿಗಳೆಂದು ಘೋಷಿಸುತ್ತಿದ್ದಂತೆ ಟಿಕೆಟ್‌ ಆಕಾಂಕ್ಷಿಗಳ ಬೆಂಬಲಿಗರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಗುರುಮಠಕಲ್‌ ಮತಕ್ಷೇತ್ರದಿಂದ ಜೆಡಿಎಸ್‌ ಜಿಲ್ಲಾಧ್ಯಕ್ಷ ನಾಗನಗೌಡ ಕಂದಕೂರ, ಶಹಾಪುರ ಮತಕ್ಷೇತ್ರದಿಂದ ಅಮೀನರೆಡ್ಡಿ ಯಾಳಗಿ ಅವರು ಮಾತ್ರ ಏಕೈಕ ಟಿಕೆಟ್‌ ಆಕಾಂಕ್ಷಿಯಾಗಿದ್ದರಿಂದ ಯಾವುದೇ ವಿರೋಧವಿಲ್ಲದೆ ಅವರಿಗೆ ಟಿಕೆಟ್‌ ದೊರೆತಿದೆ. ಈ ಎರಡು ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆ ವಿರುದ್ಧ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ.
 
ಆದರೆ ಯಾದಗಿರಿ, ಸುರಪುರ ಮತಕ್ಷೇತ್ರದಲ್ಲಿ ಜೆಡಿಎಸ್‌ ಟಿಕೆಟ್‌ಗಾಗಿ ಪೈಪೋಟಿ ಇತ್ತು. ಅದರಲ್ಲಿ ಯಾದಗಿರಿ ಮತಕ್ಷೇತ್ರದಿಂದ ಎ.ಸಿ. ಕಾಡ್ಲೂರ, ಹನುಮೇಗೌಡ ಬಿರನಕಲ್‌ ಹಾಗೂ ಸುರಪುರ ಮತಕ್ಷೇತ್ರದಿಂದ ರಾಜಾ ಕೃಷ್ಣಪ್ಪ ನಾಯಕ, ರಾಜಾ ಹರ್ಷವರ್ಧನ್‌, ರಾಜನಕೊಳ್ಳೂರಿನ ಯಮುನಪ್ಪ ದೊರೆ ಆಕಾಂಕ್ಷಿಗಳಾಗಿದ್ದರು. ಆದರೆ ಯಾದಗಿರಿ ಮತ ಕ್ಷೇತ್ರದಿಂದ ಎ.ಸಿ. ಕಾಡ್ಲೂರ, ಸುರಪುರ ಮತಕ್ಷೇತ್ರದಿಂದ ರಾಜಾ ಕೃಷ್ಣಪ್ಪ ನಾಯಕ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಯಾದಗಿರಿ ಮತಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ ಕೈ ತಪ್ಪಿದ್ದರಿಂದ ಜೆಡಿಎಸ್‌ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿರುವ ಹನುಮೇಗೌಡ ಬಿರನಕಲ್‌ ಅವರ ಬೆಂಬಲಿಗರು ನಗರದಲ್ಲಿ ಟೈರ್‌ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದಡೆ ಸುರಪುರ ಮತ ಕ್ಷೇತ್ರದಲ್ಲಿ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ರಾಜನಕೊಳ್ಳೂರಿನ ಯಮುನಪ್ಪ ದೊರೆ ಟಿಕೆಟ್‌ ದೊರೆಯುವ ಬಗ್ಗೆ ಅನುಮಾನದಿಂದಲೇ ನಮ್ಮ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮೊದಲ ಬಾರಿಗೆ ಟಿಕೆಟ್‌ ಆಕಾಂಕ್ಷಿಯಾಗಿದ್ದ ರಾಜಾ ಹರ್ಷವರ್ಧನ ಅವರಿಗೆ ಟಿಕೆಟ್‌ ದೊರೆಯದೆ ನಿರಾಸೆ ಹೊಂದಿದ್ದಾರೆ. ಜೆಡಿಎಸ್‌ ಪಕ್ಷದಲ್ಲಿನ ಅಸಮಾನಧಾನ ಬಗೆಹರಿಸಿ ಕೊಂಡು ಮುಂಬರುವ ಚುನಾವಣೆಯನ್ನು ಹೇಗೆ ಎದುರಿಸುತ್ತದೆ ಎಂಬುದು ಕಾಯ್ದು ನೋಡಬೇಕಿದೆ.

ಟಿಕೆಟ್‌ ಸಿಗುವ ವಿಶ್ವಾಸವಿದೆ ಕೇವಲ ಅಭ್ಯರ್ಥಿಗಳ ಘೋಷಣೆ ಮಾಡಿದ್ದಾರೆ. ಹೊರತು ಬಿ ಫಾರಂ ಕೊಟ್ಟಿಲ್ಲ. ಜೆಡಿಎಸ್‌
ರಾಜ್ಯಾಧ್ಯಕ್ಷ ಹೆಚ್‌.ಡಿ. ಕುಮಾರಸ್ವಾಮಿ ಅವರ ಮೇಲೆ ಭರವಸೆ ಇದ್ದು, ನನಗೆ ಟಿಕೆಟ್‌ ನೀಡುತ್ತಾರೆ ಎಂಬ ವಿಶ್ವಾಸವಿದೆ. ಟಿಕೆಟ್‌ ನೀಡಿದ್ದರೆ, ಪಕ್ಷೇತರ ಅಥವಾ ಬೇರೆ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಕಣದಲ್ಲಿ ನಿಲ್ಲುವುದು ನಿಜ.
ಹನುಮೇಗೌಡ ಬಿರನಕಲ್‌, ಟಿಕೆಟ್‌ ವಂಚಿತ ಜೆಡಿಎಸ್‌ ಮುಖಂಡ

Advertisement

„ರಾಜೇಶ ಪಾಟೀಲ್‌ ಯಡ್ಡಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next