ಮೈಸೂರು: ನಾನು ನಿಮ್ಮ ಮನೆ ಮಗನಿದ್ದಂತೆ. ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದೇನೆ. ಕ್ಷೇತ್ರದಲ್ಲಿ ಬಾಕಿ ಉಳಿದಿರುವ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು, ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ಮತ್ತೂಮ್ಮೆ ತಮ್ಮನ್ನು ಆಯ್ಕೆ ಮಾಡುವಂತೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಮತದಾರರಿಗೆ ಮನವಿ ಮಾಡಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬೋಗಾದಿ, ಕೂರ್ಗಳ್ಳಿ, ಅನಗಳ್ಳಿ, ಗೋಪಾಲಪುರ, ಮುಳ್ಳೂರು, ದೇವಗಳ್ಳಿ, ನಗರ್ತಹಳ್ಳಿಯಲ್ಲಿ ಜಿ.ಟಿ.ದೇವೇಗೌಡ ಅವರು ಶುಕ್ರವಾರ ಚುನಾವಣಾ ಪ್ರಚಾರ ನಡೆಸಿದರು.
ಪಂಚರತ್ನ ಯೋಜನೆ ಬಗ್ಗೆ ಮಾಹಿತಿ: ಜೆಡಿಎಸ್ ಪಕ್ಷವು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ರೂಪಿಸಿರುವ ಪಂಚರತ್ನ ಯೋಜನೆಗಳನ್ನು ವಿವರಿಸಿದರು. ಕ್ಷೇತ್ರದಲ್ಲಿ ಶಾಸಕರಾಗಿ ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿ ಟ್ಟರು. ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ಕಾವೇರಿ ನದಿಯಿಂದ ಕುಡಿಯುವ ನೀರು ಪೂರೈಸುವ ಉಂಡುವಾಡಿ ಯೋಜನೆಯನ್ನು ಕ್ಷೇತ್ರದಲ್ಲಿ ಕೈಗೊಂಡಿರುವ ಕುರಿತು ವಿವರಿಸಿದರು. ಕ್ಷೇತ್ರದ ಮತ್ತಷ್ಟು ಅಭಿ ವೃದ್ಧಿ ಕಾರ್ಯಗಳಿಗಾಗಿ ಮತ ನೀಡಬೇಕು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲು ತಮ್ಮನ್ನು ಬೆಂಬಲಿಸಬೇಕು ಎಂದು ಕೋರಿದರು. ಮಂಗಳವಾದ್ಯದೊಂದಿಗೆ ಅದ್ಧೂರಿ ಸ್ವಾಗತ: ಜಿ.ಟಿ.ದೇವೇಗೌಡ ಅವರು ಗ್ರಾಮಗಳಿಗೆ ಆಗಮಿಸುತ್ತಿದ್ದಂತೆ ಮಂಗಳವಾದ್ಯದೊಂದಿಗೆ ಅವರನ್ನು ಗ್ರಾಮಸ್ಥರು ಸ್ವಾಗತಿಸಿದರು.
ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ದೇವೇಗೌಡರ ಪರವಾಗಿ ಜೈಕಾರ ಹಾಕಿದರು. ಮೈಸೂರು ಪೇಟಾ, ಶಾಲು, ಹಾರ ಹಾಕಿ ಸನ್ಮಾನಿಸಿದರು. ಬಿಸಿಲಿನ ಝಳವನ್ನೂ ಲೆಕ್ಕಿಸದೇ ಗ್ರಾಮಸ್ಥರು ಚುನಾವಣಾ ಪ್ರಚಾರ ಸಭೆಗಳಲ್ಲಿ ಕಿಕ್ಕಿರಿದು ನೆರೆದಿದ್ದರು. ರೋಡ್ ನೋಡಿ, ವೋಟು ಕೊಡಿ ಎಂದು ಗ್ರಾಮಸ್ಥರು ಘೋಷಣೆಗಳನ್ನು ಕೂಗಿದರು. ಕೆಲವು ಗ್ರಾಮಗಳಲ್ಲಿ ರೋಡ್ ಶೋ ನಡೆಸಿದರು. ಕ್ಷೇತ್ರದ ಜನರಿಗೂ ತಮಗೂ ರಾಜಕೀಯ ಸಂಬಂಧವಿಲ್ಲ. ಇದಕ್ಕೂ ಮೀರಿ ನಾವು ಒಂದೇ ಕುಟುಂಬದಂತೆ ಇದ್ದೇವೆ ಎಂದು ದೇವೇಗೌಡ ಹೇಳಿದರು.
ಉಚಿತವಾಗಿ ಅಡುಗೆ ಅನಿಲದ ಸಿಲಿಂಡರ್: ರಾಜ್ಯ ದಲ್ಲಿ ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಯಾಗಬೇಕೆಂದು ಹೆಚ್ಚಿನ ಜನರು ಒಲವು ತೋರಿದ್ದಾರೆ. ಈ ಚುನಾವಣೆ ನಂತರ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲಿದ್ದಾರೆ. ಪಂಚರತ್ನ ಯೋಜನೆ ಯಲ್ಲಿ ಬಡವರ ಪರ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಜೆಡಿಎಸ್ ಅಧಿಕಾರಕ್ಕೆ ಬಂದ ನಂತರ ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳ ಸಾಲವನ್ನು ಮನ್ನಾ ಮಾಡಲಾಗುವುದು. ಉಚಿತವಾಗಿ ಅಡುಗೆ ಅನಿಲದ ಸಿಲಿಂಡರ್‌ಗಳನ್ನು ನೀಡಲಾಗುವುದು ಎಂದು ದೇವೇಗೌಡ ವಿವರಿಸಿದರು.
ಸತ್ಯ ಯಾವತ್ತೂ ಉಳಿಯುತ್ತದೆ: ತಮ್ಮ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಅವರನ್ನು ಟೀಕಿಸಿದ ದೇವೇಗೌಡ ಅವರು ಸಿದ್ದೇಗೌಡ ಅವರನ್ನು ಎಪಿಎಂಸಿ ಹಾಗೂ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರನ್ನಾಗಿಸಲು ತಾವು ಪಟ್ಟ ಶ್ರಮವನ್ನು ವಿವರಿಸಿದರು. ಸತ್ಯ ಯಾವತ್ತೂ ಉಳಿಯುತ್ತದೆ ಎಂದರು.
ಬಿಜೆಪಿ ಅಭ್ಯರ್ಥಿ ಕವೀಶ್ ಗೌಡ ಅವರು ಯಾವತ್ತಾದರೂ ಚಾಮುಂಡೇಶ್ವರಿ ಕ್ಷೇತ್ರದ ಮತದಾರರನ್ನು ಭೇಟಿ ಮಾಡಿದ್ದರಾ? ಗ್ರಾಮಗಳಿಗೆ ಬಂದಿದ್ದರಾ? ಎಂದು ಪ್ರಶ್ನಿಸಿದರು. ಕಾಂಗ್ರೆಸ್-ಬಿಜೆಪಿ ಕ್ಷೇತ್ರದಲ್ಲಿ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಜಿ.ಟಿ.ದೇವೇಗೌಡ ಆರೋಪಿಸಿದರು.
ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಆದ್ಯತೆ: ನನ್ನ ಅಜೆಂಡಾ ಒಂದೇ- ಅದು ಅಭಿವೃದ್ಧಿ. ನಾನು ಯಾವುದೇ ಜವಾಬ್ದಾರಿಯನ್ನು ತೆಗೆದುಕೊಂಡರೂ ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ. ಕ್ಷೇತ್ರದಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ತಾವು ಶಾಸಕರಾಗುವ ಮುನ್ನ ಹಾಗೂ ಈಗ ಕ್ಷೇತ್ರದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಹೇಗಾಗಿದೆ ಎಂಬುದನ್ನು ಮತದಾರರೇ ಹೋಲಿಸಿ ನೋಡಲಿ ಎಂದು ದೇವೇಗೌಡ ಹೇಳಿದರು.