Advertisement
ಇವರ ಪರವಾಗಿ ದರ್ಶನ್, ಅಭಿಷೇಕ್ ವಿವಿಧೆಡೆ ಪ್ರಚಾರ ಕೈಗೊಂಡರೆ, ಮೈತ್ರಿ ಅಭ್ಯರ್ಥಿ ನಿಖೀಲ್‌ಗೆ ದಳಪತಿಗಳು ಬೆಂಬಲ ನೀಡಿ ಮತಯಾಚನೆ ಮಾಡಿದ್ದು ವಿಶೇಷವಾಗಿತ್ತು. ಮದ್ದೂರು, ಮಳವಳ್ಳಿ, ಮಂಡ್ಯ ವಿಧಾನ ಸಭಾಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರೋಡ್ ಶೋ ನಡೆಸುವ ಮೂಲಕ ತಮ್ಮ ಪುತ್ರನ ಪರವಾಗಿ ಮತಯಾಚನೆ ಮಾಡಿದರು.
ಡಿಗ್ರಿ ಸುಡುಬಿಸಿನಲ್ಲೂ ನಿಖೀಲ್ ಪರ ಪ್ರಚಾರ ನಡೆಸಿ ಮತಯಾಚಿಸಿದರು. ದಣಿವಾರಿಸಿಕೊಳ್ಳಲು ಮಾರ್ಗ ಮಧ್ಯೆ ಎಳನೀರು ಸೇವಿಸಿ ತೃಪ್ತಿ ಪಟ್ಟುಕೊಂಡರು. ಬಳಿಕ ಮತ್ತೆ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು. ಬೆಸಗರಹಳ್ಳಿ ಬಸ್ ನಿಲ್ದಾಣದಲ್ಲಿ ಬಿರುಸಿನ ಪ್ರಚಾರ ನಡೆಸಿದ ಸಿಎಂ ಕುಮಾರಸ್ವಾಮಿ ಅವರಿಗೆ ಭಾರೀ ಗಾತ್ರದ ಸೇಬಿನ ಹಾರವನ್ನು ಅಭಿಮಾನಿಗಳು, ಕಾರ್ಯಕರ್ತರು ಅರ್ಪಿಸಿದರು. ಆದರೆ ಕುಮಾರಸ್ವಾಮಿ ಅವರು ಸೇಬಿನ ಹಾರವನ್ನು ಸ್ವೀಕರಿಸಲು ನಿರಾಕರಿಸಿ ದೂರ ತಳ್ಳಿದ್ದು ಕಂಡುಬಂತು. ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಸಾಥ್ ನೀಡಿದರು.
Related Articles
ಗೋಪಾಲಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಮಂಡ್ಯ ಕ್ಷೇತ್ರದ ಶಾಸಕ ಎಂ. ಶ್ರೀನಿವಾಸ್, ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಎಂ.ಎಸ್. ಆತ್ಮಾನಂದ ಅವರು ನಿಖೀಲ್‌ಗೆ ಸಾಥ್ ನೀಡಿದರು. ನಿಖೀಲ್ ಭೇಟಿ ನೀಡಿದ ಕೆಲವು ಗ್ರಾಮಗಳಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಹೂಮಳೆಗರೆದರೆ, ಮತ್ತೆ ಕೆಲವೆಡೆ ಭಾರೀ ಗಾತ್ರದ ಹೂವಿನ ಹಾರ ಹಾಗೂ ಸೇಬಿನ ಹಾರ ಅರ್ಪಿಸಿದರು. ಈ ವೇಳೆ ಮತದಾರರನ್ನುದ್ದೇಶಿಸಿ ಮಾತನಾಡಿದ ನಿಖೀಲ್, ತಮ್ಮ ತಂದೆ ರಾಜ್ಯದ ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ 8 ಸಾವಿರ ಕೋಟಿಗೂ ಅ—ಕ ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ನಾನು ಆಯ್ಕೆಯಾದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡಲು ಅನುಕೂಲವಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ನನ್ನನ್ನೇ ಆಯ್ಕೆ ಮಾಡುವಂತೆ ಮನವಿ ಮಾಡಿದರು.
Advertisement
ತಾಲೂಕಿನ ಬಿ. ಗೌಡಗೆರೆಯಲ್ಲಿ ನಿಖೀಲ್ ಪ್ರಚಾರದ ವೇಳೆ ಮಹಿಳೆಯರು ಅದ್ದೂರಿಯಾಗಿ ಸ್ವಾಗತಿಸಿದರು. ಕಳಸ, ಹೊಸೆ ಹೊತ್ತ ಮಹಿಳೆಯರು ಇದ್ದರು. ಈ ವೇಳೆ ನಿಖೀಲ್‌ಗೆ ಅಭಿಮಾನಿಗಳು ಪ್ರೀತಿಯಿಂದ ಮುತ್ತಿಟ್ಟು ಆಶೀರ್ವದಿಸಿದರು. ಚಿಕ್ಕಮಂಡ್ಯದಲ್ಲಿ ಮಧ್ಯಾಹ್ನದ ಬಳಿಕ ಅಭಿಷೇಕ್ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡದಲ್ಲಿರುವ ತಮ್ಮ ತಾಯಿ ಸುಮಲತಾ ಅಂಬರೀಶ್ ಪರ ಪ್ರಚಾರ ಕೈಗೊಂಡರು.
ಅಂಬರೀಶ್ ಮೇಲಿನ ಅಭಿಮಾನ ಗೆಲ್ಲಬೇಕು. ಆ ಮೂಲಕ ಜಿಲ್ಲೆಯ ಸ್ವಾಭಿಮಾನ ಉಳಿಯಬೇಕಿದೆ. ಅದಕ್ಕಾಗಿ ನನ್ನ ತಾಯಿ ಸುಮಲತಾ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ನನ್ನ ತಾಯಿ ಸ್ವಾರ್ಥ ರಾಜಕಾರಣ ಮಾಡಲು ಬಂದಿಲ್ಲ. ಜನರ ಮಧ್ಯದಲ್ಲಿದ್ದು ರಾಜಕಾರಣ ಮಾಡಲು ಬಂದಿದ್ದಾರೆ. ಅಧಿಕಾರ, ಹಣ ಗಳಿಸುವ ಆಸೆ ನಮಗಿಲ್ಲ. ಒಳ್ಳೆಯ ರಾಜಕಾರಣ ಮಾಡಿಕೊಂಡು ನಮ್ಮ ತಂದೆಯ ಹೆಸರನ್ನು ಉಳಿಸಿ, ಶಾಶ್ವತವಾಗಿರಸಲು ಬಂದಿದ್ದೇವೆ ಎಂದು ಹೇಳಿದರು.