ದೇವನಹಳ್ಳಿ: ಬಹುಜನ ಸಮಾಜ ಪಾರ್ಟಿ ಮತ್ತು ಜೆಡಿಎಸ್ ಮೈತ್ರಿಯಿಂದ ಚುನಾವಣೆ ಎದುರಿಸಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಎನ್. ಮಹೇಶ್ ಗೆಲುವು ಸಾಧಿಸಿರುವುದರಿಂದ ಬಿಎಸ್‌ಪಿ ಕಾರ್ಯಕರ್ತರಲ್ಲಿ ಸಂತಸ ಉಂಟಾಗಿದೆ ಎಂದು ರಾಜ್ಯ ಬಹುಜನ ಸಮಾಜ ಪಾರ್ಟಿ ಕಾರ್ಯದರ್ಶಿ ನಂದಿಗುಂದ ಪಿ.ವೆಂಕಟೇಶ್ ಹರ್ಷ ವ್ಯಕ್ತಪಡಿಸಿದರು.
ನಗರದ ಟಿಪ್ಪು ಸುಲ್ತಾನ್ ರಸ್ತೆಯಲ್ಲಿರುವ ಬಿಎಸ್‌ಪಿ ಕಚೇರಿಯಲ್ಲಿ ತಾಲೂಕು ಬಹುಜನ ಸಮಾಜ ಪಾರ್ಟಿ ವತಿಯಿಂದ ನೂತನ ಶಾಸಕ ನಿಸರ್ಗ ಎಲ್.ಎನ್.ನಾರಾಯಣಸ್ವಾಮಿ ಅವರನ್ನು ಅಭಿನಂದಿಸಿ ಮಾತನಾಡಿದರು.
ಬಿಎಸ್‌ಪಿ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ ರಾಷ್ಟ್ರೀಯಾಧ್ಯಕ್ಷೆ ಮಾಯಾವತಿಯವರ ಆದೇಶದಂತೆ ದೇವನಹಳ್ಳಿ ತಾಲೂಕಿನಲ್ಲಿ ಜೆಡಿಎಸ್‌ನ್ನು ಬೆಂಬಲಿಸುವಂತೆ ಸೂಚಿಸಿದ್ದರು. ಅದರಂತೆ ಕಾರ್ಯಕರ್ತರು ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಪ್ರಚಾರ ಮಾಡಿದ್ದರು. ಜೆಡಿಎಸ್ ಅಭ್ಯರ್ಥಿ ನಿಸರ್ಗ ಎಲ್.ಎನ್.ನಾರಾಯಣ ಸ್ವಾಮಿ ಗೆದ್ದಿರುವುದರಿಂದ ಜೆಡಿಎಸ್ ಸಹಕಾರ ಅಗತ್ಯವಿರುತ್ತದೆ. ಮುಂದಿನ ದಿನಗಳಲ್ಲೂ ಮೈತ್ರಿ ಮುಂದುವರಿಸಿ ಗೆಲುವು ಸಾಧಿಸಲಾಗುವುದು ಎಂದರು.
ಟೊಂಕಕಟ್ಟಿ ಮತಯಾಚನೆ: ನೂತನ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಬಿಎಸ್‌ಪಿ ಸಹೋದರರು ನಮ್ಮ ಕಾರ್ಯಕರ್ತರ ಜೊತೆಗೂಡಿ ನಮ್ಮ ಗೆಲುವಿಗೆ ಶ್ರಮಿಸಿದ್ದಾರೆ. ನನ್ನ ಗೆಲುವಿಗೆ ಪಕ್ಷಾತೀತವಾಗಿ ಕಾರ್ಯಕರ್ತರು ಮತ್ತು ಮುಖಂಡರು ಶ್ರಮಿಸಿದ್ದಾರೆ. ಪ್ರತಿಯೊಂದು ಘಟಕದ ಪದಾಧಿಕಾರಿಗಳು ಗೆಲುವಿಗಾಗಿ ಹಗಲಿರುಳು ಟೊಂಕಕಟ್ಟಿ ಮತಯಾಚನೆ ಮಾಡಿದ್ದಾರೆ ಎಂದು ಹೇಳಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲಿ ಫಲಿತಾಂಶ ಏನೇ ಇರಲೀ ನಿರಂತರ ಎರಡನೇ ಬಾರಿಗೆ ಜೆಡಿಎಸ್ ಗೆಲುವು ಸಾಧಿಸಲು ಕಾರ್ಯಕರ್ತರು ಕಾರಣ ಎಂಬುವುದನ್ನು ಮರೆಯುವಂತಿಲ್ಲ. ಕಳೆದ ಬಾರಿಗಿಂತ ಈ ಬಾರಿ ಅತೀ ಹೆಚ್ಚು ಅಂತರದಲ್ಲಿ ಗೆಲುವು ಸಾಧಿಸಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಬಿಎಸ್‌ಪಿ ಅಧ್ಯಕ್ಷ ಮುನಿಕೃಷ್ಣ, ತಾಲೂಕು ಬಿಎಸ್‌ಪಿ ಅಧ್ಯಕ್ಷ ನರಸಿಂಹಮೂರ್ತಿ, ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಪುರಸಭಾ ಸದಸ್ಯ ಬೇಕರಿ ಮಂಜುನಾಥ್, ಜಿಲ್ಲಾ ಬಿಎಸ್‌ಪಿ ಉಪಾಧ್ಯಕ್ಷ ಸಿ.ಮುನಿಯಪ್ಪ, ಬಂಗಾರಪ್ಪ, ವೆಂಕಟೇಶ್, ವೆಂಕಟಸ್ವಾಮಿ, ನರಸಿಂಹರಾಜು, ಜಿಲ್ಲಾ ಸಂಯೋಜಕ ತಿಮ್ಮರಾಯಪ್ಪ, ಜಿಲ್ಲಾ ಖಜಾಂಚಿ ನರಸಿಂಹ ಮೂರ್ತಿ, ತಾಲೂಕು ಉಪಾಧ್ಯಕ್ಷ ಮುನಿರಾಜು, ರಾಮಾಂಜಿನಪ್ಪ, ಬಿ.ವಿ. ಮಂಜುನಾಥ್, ಮುಖಂಡ ಡಿ.ಸಿ.ನಾರಾಯಣಸ್ವಾಮಿ, ಶಿವಪ್ಪ, ನಾರಾಯಣಪ್ಪ, ಎಚ್.ಮಂಜುನಾಥ್, ಮುನಿರಾಜ್ ಮತ್ತಿತರರು ಇದ್ದರು.