Advertisement

ಸ್ತ್ರೀಯನ್ನು ಎದುರಿಸಲಾಗದ ಜೆಡಿಎಸ್‌ನವರೇ ಶಿಖಂಡಿಗಳು

12:04 PM May 12, 2019 | Suhan S |

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಓರ್ವ ಸ್ತ್ರೀಯನ್ನು ಎದುರಿಸಲಾಗದ ಜೆಡಿಎಸ್‌ನವರು ಶಿಖಂಡಿಗಳು ಎಂದು ನಾಗಮಂಗಲ ಬ್ಲಾಕ್‌ ಕಾಂಗ್ರೆಸ್‌ ಉಚ್ಛಾಟಿತ ಅಧ್ಯಕ್ಷ ಪ್ರಸನ್ನ ಕಿಡಿಕಾರಿದರು.

Advertisement

ಜಿಲ್ಲೆಯ ಇತಿಹಾಸದಲ್ಲಿ ಅನೇಕ ಮಹಾ ನಾಯಕರು ಲೋಕಸಭೆ ಪ್ರವೇಶಿಸಿದ್ದಾರೆ. ಈ ನೆಲದ ನಾಯಕರೊಬ್ಬರನ್ನು ಅಭ್ಯರ್ಥಿಯನ್ನಾಗಿ ಮಾಡುವ ಯೋಗ್ಯತೆ ಇಲ್ಲದೆ, ಮುಖ್ಯಮಂತ್ರಿ ಪುತ್ರ ನಿಖೀಲ್ ಕಣಕ್ಕಿಳಿಯುವುದನ್ನು ಪ್ರಶ್ನಿಸದ ಸ್ಥಳೀಯ ಜೆಡಿಎಸ್‌ ಶಾಸಕರು ಶಿಖಂಡಿತನದ ರಾಜಕಾರಣ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂಷಿಸಿದರು.

ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್‌ ಶಾಸಕರು, ಸಚಿವರಿದ್ದರೂ ಒಂದು ಹೆಣ್ಣನ್ನು ಎದುರಿಸುವುದಕ್ಕೆ ಸಾಧ್ಯವಾಗಲಿಲ್ಲ. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಎಲ್ಲರೂ ಬರಬೇಕಾಯಿತು. ಇದು ನಾಚಿಕೆಗೇಡಿನ ಸಂಗತಿಯಲ್ಲವೇ ಎಂದು ಪ್ರಶ್ನಿಸಿದರು.

ನೇರವಾಗಿ ಎದುರಿಸೋ ತಾಕತ್ತಿರಲಿಲ್ಲವೇ? ಸುಮಲತಾ ಸ್ಪರ್ಧಿಸಿದ್ದಾರೆಂಬ ಕಾರಣಕ್ಕೆ ಅದೇ ಹೆಸರಿನ ಮೂವರನ್ನು ಅಖಾಡಕ್ಕಿಳಿಸಿ ಕುತಂತ್ರ ರಾಜಕಾರಣ ಮಾಡಿದಿರಲ್ಲ, ಇದು ಶಿಖಂಡಿತನದ ರಾಜಕಾರಣ ವಲ್ಲವೇ? ನೇರವಾಗಿಯೇ ಒಬ್ಬ ಸುಮಲತಾರನ್ನು ಎದುರಿಸುವ ಗಂಡಸ್ತನ ನಿಮಗಿರ ಲಿಲ್ಲವೇ. ಇದನ್ನು ನೋಡಿದಾಗ ಶಿಖಂಡಿತನದ ರಾಜಕಾರಣ ಮಾಡಿದವರು ಯಾರು ಎನ್ನುವುದು ಅರ್ಥವಾಗುತ್ತದೆ ಎಂದು ಜರಿದರು.

ನಮ್ಮ ಪಾಡಿಗೆ ನಮ್ಮನ್ನು ಬಿಡಿ: ಗಂಡಸ್ತನದ ಬಗ್ಗೆ ಮಾತನಾಡುವ ನೀವು ಚಲುವರಾಯಸ್ವಾಮಿ ಸೇರಿದಂತೆ ಕಾಂಗ್ರೆಸ್‌ನವರೆಲ್ಲರೂ ಸೋತಿರುವವರು. ಅವರ ಉಸಾಬರಿ ನಿಮಗ್ಯಾಕೆ ಸ್ವಾಮಿ. ಅವರು ಎಲ್ಲಾದರೂ ಇರಲಿ, ಏನು ಬೇಕಾದರೂ ಮಾಡಿಕೊಳ್ಳಲಿ. ಚುನಾವಣೆ ಮುಗಿದ ನಂತರದಲ್ಲಿ ಅವರನ್ನು ಟಾರ್ಗೆಟ್ ಮಾಡಿಕೊಂಡಿರುವುದೇಕೆ. ನಿಮ್ಮ ತಾಕತ್ತನ್ನು ನೀವು ತೋರಿಸಿ. ಗೆಲ್ಲುವ ವಿಶ್ವಾಸ, ಭರವಸೆ ನಿಮಗಿದ್ದ ಮೇಲೆ ನಮ್ಮ ಬಗ್ಗೆ ನಿಮಗ್ಯಾಕೆ ಚಿಂತೆ. ನಮ್ಮ ಪಾಡಿಗೆ ನಾವಿರಲು ಬಿಡಿ ಎಂದರು.

Advertisement

ನಿಮ್ಮ ನಿಲುಗಳೇನು: ಚುನಾವಣಾ ಸಮಯದಲ್ಲಿ ಚಲುವರಾಯಸ್ವಾಮಿ ತಪ್ಪಾಗಿ ನಡೆದುಕೊಂಡಿದ್ದರೆ ಅದನ್ನು ಪ್ರಶ್ನಿಸಲು ಕಾಂಗ್ರೆಸ್‌ ಪಕ್ಷದ ನಾಯಕರಿದ್ದಾರೆ. ಅವರೇ ಸರ್ಟಿಫಿಕೇಟ್ ಕೊಟ್ಟ ಮೇಲೆ ನಿಮ್ಮ ಸರ್ಟಿಫಿಕೇಟ್ ನಮಗ್ಯಾಕೆ ಬೇಕು. ನಾವೇನಾದರೂ ನಿಮ್ಮ ಬಗ್ಗೆ ಮಾತನಾಡುತ್ತಿದ್ದೇವಾ, ಟೀಕೆ ಮಾಡುತ್ತಿದ್ದೇವಾ, ಅಂದ ಮೇಲೆ ನಮ್ಮನ್ನು ಏಕೆ ಟೀಕೆ ಮಾಡುತ್ತೀರಿ. ಜಿಲ್ಲಾ ಉಸ್ತುವಾರಿ ಸಚಿವರು ಒಮ್ಮೆ ಚಲುವರಾಯಸ್ವಾಮಿ ಅವರನ್ನ ಡೆಡ್‌ಹಾರ್ಸ್‌ ಅಂತಾರೆ. ಇನ್ನೊಮ್ಮೆ ಅದಕ್ಕೆ ಕ್ಷಮೆ ಕೇಳ್ತಾರೆ. ಜೆಡಿಎಸ್‌ನವರ ನಿಲುವುಗಳೇ ನಮಗೆ ಅರ್ಥವಾಗುತ್ತಿಲ್ಲ ಎಂದು ಛೇಡಿಸಿದರು.

ಜೆಡಿಎಸ್‌ನವರು ಚಾಕೋಲೇಟ್ ಪಡೆದಿದ್ದರಾ? ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದಾರೆ ಎಂದು ಹೇಳ್ತೀರಿ. ಫಾರೂಕ್‌, ಶರವಣ ಇವರೆಲ್ಲಾ ವಿಧಾನಪರಿಷತ್‌ಗೆ ಸ್ಪರ್ಧಿಸಿದ್ದಾಗ ಶಾಸಕರೆಲ್ಲಾ ಚಾಕೋಲೇಟ್ ಈಸ್ಕೊಂಡು ಓಟ್ ಹಾಕಿದ್ದರಾ. ಅಪ್ಪಾಜಿಗೌಡ ಸ್ಪರ್ಧೆ ವೇಳೆ 50 ಲಕ್ಷ ರೂ. ಕೊಟ್ಟಿರುವುದಾಗಿ ಬಹಿರಂಗವಾಗಿಯೇ ಹೇಳಿದ್ದರು. ನಿಮ್ಮಿಂದ ರಾಜಕೀಯದ ನೀತಿ ಪಾಠ ಕಲಿಯಬೇಕಿಲ್ಲ ಎಂದು ಟೀಕಿಸಿದರು.

ಸಾಮಾನ್ಯ ಜ್ಞಾನವೇ ಇಲ್ಲವೇ? ಲೋಕಸಭಾ ಉಪ ಚುನಾವಣೆಯಲ್ಲಿ ಸೋಲುವುದಕ್ಕೆ ಚಲುವರಾಯ ಸ್ವಾಮಿ ಕಾರಣರಲ್ಲ. ಅಭ್ಯರ್ಥಿಯಾಗಿದ್ದ ಪುಟ್ಟರಾಜು ಗುಂಪುಗಾರಿಕೆ ಮಾಡಿಕೊಂಡಿದ್ದರ ಫ‌ಲವಾಗಿ ಸೋಲನುಭವಿಸಬೇಕಾಯಿತು.

ಅಂದು ನಾವೆಲ್ಲರೂ ಪುಟ್ಟರಾಜು ಪರವಾಗಿಯೇ ಪ್ರಚಾರ ನಡೆಸಿದ್ದೆವು. ನಾಲ್ಕೂವರೆ ತಿಂಗಳ ಅವಧಿಗೆ ಯಾರಾದ್ರೂ ದುಡ್ಡು ಕೊಟ್ಟು ಚುನಾವಣೆ ಮಾಡ್ತಾರಾ. ಸ್ವಲ್ಪವಾದರೂ ಸಾಮಾನ್ಯ ಜ್ಞಾನವಿಲ್ಲದೆ ಮಾತನಾಡಿದರೆ ಏನು ಹೇಳಲು ಸಾಧ್ಯ ಎಂದು ಶಾಸಕ ಸುರೇಶ್‌ಗೌಡರಿಗೆ ಕುಟುಕಿದರು. ಎರಡನೇ ಬಾರಿ ಪುಟ್ಟರಾಜು ಅಭ್ಯರ್ಥಿಯಾದಾಗ ಗುಂಪುಗಾರಿಕೆ ಬಿಟ್ಟು ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆದರು. ಇದಕ್ಕೆ ಚಲುವರಾಯಸ್ವಾಮಿ ಅವರೂ ಕೈಜೋಡಿಸಿ ಅಖಾಡಕ್ಕಿಳಿದಿದ್ದರಿಂದ ಪುಟ್ಟರಾಜು ಅವರಿಗೆ ಗೆಲುವು ಸಾಧ್ಯವಾಯಿತು ಎಂದರು.

ಗೋಷ್ಠಿಯಲ್ಲಿ ಕೃಷ್ಣೇಗೌಡ, ನರಸಿಂಹಮೂರ್ತಿ, ರಾಜೇಶ್‌, ವಸಂತ್‌, ರವಿಕಾಂತ್‌, ರಾಜೇಶ್‌, ಸುಭಾಷ್‌ಚಂದ್ರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next