ಅಹಮದಾಬಾದ್ : ಜೆಡಿಎಸ್ ಅಳಿವಿನಂಚಿನಲ್ಲಿರುವ ಪಕ್ಷವಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯ ನಂತರ ಕರ್ನಾಟಕದಲ್ಲಿ ಅಸ್ಥಿತ್ವ ಕಳೆದುಕೊಳ್ಳಲಿದೆ ಪಕ್ಷ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸೋಮವಾರ ಹೇಳಿದ್ದಾರೆ.
“ಸುಶಾಸನ್ ” ಅಥವಾ ಉತ್ತಮ ಆಡಳಿತ ಯಾತ್ರೆಯ ಭಾಗವಾಗಿ ಅಹಮದಾಬಾದ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬೆಂಗಳೂರು ದಕ್ಷಿಣ ಸಂಸದ ಸೂರ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನಾಜಿ ಪ್ರಚಾರಕ ಜೋಸೆಫ್ ಗೊಬೆಲ್ಸ್ ಅವರ ಪುನರ್ಜನ್ಮ ಎಂದು ಕರೆದಿದ್ದಕ್ಕಾಗಿ ಜೆಡಿಎಸ್ ನಾಯಕ ಹೆಚ್. ಡಿ. ಕುಮಾರಸ್ವಾಮಿ ಅವರನ್ನು ಟೀಕಿಸಿ, ಅವರ ಮಾತುಗಳು ರಾಜಕೀಯ ಹತಾಶೆಯನ್ನು ಪ್ರತಿಬಿಂಬಿಸುತ್ತವೆ ಎಂದರು.
ಕುಮಾರಸ್ವಾಮಿ ಅವರು ಬಳಸಿರುವ ಅಸಂಸದೀಯ ಪದಗಳು ಅವರ ರಾಜಕೀಯ ಹತಾಶೆಯನ್ನು ಬಿಂಬಿಸುತ್ತವೆ. ಜೆಡಿಎಸ್ ಅಳಿವಿನಂಚಿನಲ್ಲಿರುವ ಪಕ್ಷವಾಗಿದ್ದು ಮುಂಬರುವ ವಿಧಾನಸಭಾ ಚುನಾವಣೆಯ ನಂತರ ಕರ್ನಾಟಕದಲ್ಲಿ ಅಸ್ಥಿತ್ವ ಕಳೆದುಕೊಳ್ಳಲಿದೆ.. ಅದಕ್ಕಾಗಿಯೇ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.
“ಕಳೆದ 10-15 ದಿನಗಳಿಂದ ಕರ್ನಾಟಕದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ನೀಡುತ್ತಿರುವ ಹೇಳಿಕೆಗಳ ಪ್ರಕಾರ ಮುಂಬರುವ ಚುನಾವಣೆಯ ಫಲಿತಾಂಶಗಳು ಅವರಿಗೆ ತಿಳಿದಿದೆ. ಗುಜರಾತ್‌ನಂತೆ ಕರ್ನಾಟಕದಲ್ಲಿಯೂ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಸೂರ್ಯ ಹೇಳಿದರು.
ಕುಮಾರಸ್ವಾಮಿ ಅವರು ಬಿಜೆಪಿಯನ್ನು ಬೂಟಾಟಿಕೆಗಳು ಮತ್ತು ಸುಳ್ಳುಗಳಿಂದ ಪಕ್ಷ ಎಂದಿದ್ದರು. ಅಮಿತ್ ಶಾ ರಾಜಕೀಯ ಗೋಸುಂಬೆ ಮತ್ತು ನಾಜಿ ಪ್ರಚಾರಕ ಜೋಸೆಫ್ ಗೊಬೆಲ್ಸ್ ಅವರ ಪುನರ್ಜನ್ಮ ಎಂದು ಶನಿವಾರ ಕರೆದಿದ್ದರು.