Advertisement

ಜೆಡಿಎಸ್‌ ಕಾರ್ಯಕರ್ತರಗೂಂಡಾಗಿರಿ ಖಂಡನೀಯ

09:32 AM Feb 15, 2019 | Team Udayavani |

ಚಿತ್ರದುರ್ಗ: ಹಾಸನ ನಗರ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ಮನೆ ಮೇಲೆ ಜೆಡಿಎಸ್‌ ಕಾರ್ಯಕರ್ತರು ದಾಳಿ ಮಾಡಿ ಗೂಂಡಾಗಿರಿ ನಡೆಸಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

Advertisement

ಬಿಜೆಪಿ ವಿಭಾಗೀಯ ಸಹಪ್ರಭಾರಿ ಬಿ.ಎಂ. ಸುರೇಶ್‌ ಮಾತನಾಡಿ, ರಾಜ್ಯದಲ್ಲಿ ಗೂಂಡಾ ಸಂಸ್ಕೃತಿ ಬೆಳೆಯುತ್ತಿದೆ. ಶಾಸಕರ ಮನೆ ಮೇಲೆ ದಾಳಿ ನಡೆಯುತ್ತದೆ ಎಂದಾದರೆ ಇನ್ನು ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ 30 ಜಿಲ್ಲೆಗಳಿವೆ ಎನ್ನುವುದನ್ನು ಮರೆತಿರುವ ಮುಖ್ಯಮಂತ್ರಿಗಳು ಕೇವಲ ಮೂರು ಜಿಲ್ಲೆಗಳಿಗಷ್ಟೇ ಸೀಮಿತವಾಗಿದ್ದಾರೆ. ಸಮ್ಮಿಶ್ರ ಸರ್ಕಾರದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಕ್ಷಣೆ ಮಾಡಬೇಕಿರುವ ರಾಜ್ಯ ಸರ್ಕಾರವೇ ಗೂಂಡಾಗಿರಿ ಮಾಡುತ್ತಿರುವುದು
ನಾಚಿಕೆಗೇಡು. ಜಾತ್ಯತೀತ ಜನತಾದಳ ಎನ್ನುವ ಬದಲು ದಂಗೆಕೋರರ ಪಕ್ಷ ಎನ್ನುವುದೇ ಸೂಕ್ತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಸನದಲ್ಲಿ ಬಿಜೆಪಿ ಶಾಸಕರು ಒಬ್ಬರೇ ಇದ್ದಾರೆಂದು ತಿಳಿಯಬೇಡಿ. ದೇಶದಾದ್ಯಂತ 1500ಕ್ಕೂ ಹೆಚ್ಚು ಬಿಜೆಪಿ ಶಾಸಕರಿದ್ದಾರೆಂದು ಅಪ್ಪ-ಮಕ್ಕಳ ಸರ್ಕಾರ ಮರೆಯಬಾರದು. ಮುಖ್ಯಮಂತ್ರಿ ಕುಮಾರಸ್ವಾಮಿಯವರ ವಿರುದ್ಧ ಪ್ರಕರಣ ದಾಖಲಿಸಬೇಕು. ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಟಿ.ಜಿ. ನರೇಂದ್ರನಾಥ್‌ ಮಾತನಾಡಿ, ದೇವೇಗೌಡ ಮತ್ತು ಅವರ ಮಕ್ಕಳು ರಾಜ್ಯ ಮತ್ತು ದೇಶದಲ್ಲಿ ಸಮಾಜ ವಿರೋಧಿ  ಹಿನ್ನೆಲೆಯುಳ್ಳವರ ಜೊತೆ ಕೈಜೋಡಿಸುತ್ತಾರೆ. ಅದು ಅವರ ಹೀನ ಚಾಳಿಯಾಗಿದೆ. ಅವರ ವಿರುದ್ಧ ಯಾರೇ ಮಾತನಾಡಿದರೂ ಗೂಂಡಾಗಿರಿ, ಹಲ್ಲೆ ನಡೆಸುತ್ತಾರೆ. ಹಾಸನ ಶಾಸಕರ ಮನೆ ಮೇಲೆ ದಾಳಿ ನಡೆಸಿದ್ದರಿಂದ ಹಾಸನ ಜಿಲ್ಲೆ ಹಾಗೂ ನಾಡಿನ ಜನತೆಗೆ ಅವಮಾನ ಮಾಡಿದಂತಾಗಿದೆ ಎಂದು ಟೀಕಿಸಿದರು.

Advertisement

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮುರಳಿ, ರತ್ನಮ್ಮ, ಜಿಲ್ಲಾ ವಕ್ತಾರರಾದ ನಾಗರಾಜ್‌ ಬೇದ್ರೆ, ದಗ್ಗೆ ಶಿವಪ್ರಕಾಶ್‌, ಖಜಾಂಚಿ ನರೇಂದ್ರ, ಶಿವಣ್ಣಾಚಾರ್‌, ವೆಂಕಟೇಶ್‌ ಯಾದವ್‌, ಜಿತೇಂದ್ರ, ನಗರಾಧ್ಯಕ್ಷ ತಿಪ್ಪೇಸ್ವಾಮಿ, ರೇಖಾ, ಶ್ಯಾಮಲಾ ಶಿವಪ್ರಕಾಶ್‌, ಸಂಪತ್‌ ಕುಮಾರ್‌, ರಂಗಸ್ವಾಮಿ, ಶಂಭು, ಚಂದ್ರಿಕಾ, ನಂದಿ ನಾಗರಾಜ್‌, ಲೋಕನಾಥ್‌, ನಗರಸಭಾ ಸದಸ್ಯ ಹರೀಶ್‌, ಯಶವಂತ್‌, ಅಸ್ಲಾಂ ಪಾಷಾ, ಸಾಗರ್‌, ವಿಜಯಕುಮಾರಿ ಭಾಗವಹಿಸಿದ್ದರು ಶಾಸಕ ಪ್ರೀತಂ ಗೌಡ ಹೇಳಿಕೆ ತಪ್ಪಲ್ಲ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕಿದೆ.

ದೇವೇಗೌಡರಿಗೆ ವಯಸ್ಸಾಗಿದೆ, ಅವರ ನಂತರ ಪಕ್ಷ ಹೇಳ ಹೆಸರಿಲ್ಲದಂತಾಗುತ್ತದೆ, ಹಾಗಾಗಿ ಬಿಜೆಪಿಗೆ ಬನ್ನಿ ಎಂದು ಆಹ್ವಾನಿಸುವುದು ಸಹಜ. ಅದರಲ್ಲಿ ತಪ್ಪೇನಿದೆ ಎಂದು ಬಿಜೆಪಿ ಸ್ಲಂ ಮೋರ್ಚಾ ರಾಜ್ಯ ಉಪಾದ್ಯಕ್ಷ ಸಿದ್ದೇಶ್‌ ಯಾದವ್‌ ಪ್ರಶ್ನಿಸಿದರು. ರಾಷ್ಟ್ರೀಯ ಪಕ್ಷಕ್ಕೆ ಬನ್ನಿ ಎಂದ ಶಾಸಕ ಪ್ರೀತಂ ಗೌಡ ಆಹ್ವಾನಿಸುವುದರಲ್ಲಿ ತಪ್ಪಿಲ್ಲ. ಆದರೆ ಜೆಡಿಎಸ್‌ ಕಾರ್ಯಕರ್ತರು ಗೂಂಡಾಗಳಂತೆ ದಾಳಿ ಮಾಡಿ ಹಲ್ಲೆ ನಡೆಸಿರುವುದು ಅವರ ಘನತೆಗೆ ತಕ್ಕದ್ದಲ್ಲ. ದೇವೇಗೌಡರಿಗೆ ಮಕ್ಕಳು, ಮೊಮ್ಮಕ್ಕಳು, ಕುಟುಂಬದವರ ಮೇಲೆ ಎಲ್ಲಿಲ್ಲದ ಪ್ರೀತಿ. ಮಕ್ಕಳಾದ ಕುಮಾರಸ್ವಾಮಿ, ರೇವಣ್ಣ, ಪ್ರಜ್ವಲ್‌, ಭವಾನಿ ರೇವಣ್ಣ, ಅನಿತಾ ಕುಮಾರಸ್ವಾಮಿ ಅವರಿಗೆ ಮಾತ್ರ ಅಧಿಕಾರ ನೀಡುತ್ತಾರೆ. ಅಪ್ಪ-ಮಕ್ಕಳ ಸರ್ಕಾರ ತೊಲಗಿದರೆ ಸಾಕು ಎಂದು ರಾಜ್ಯದ ಜನತೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next