Advertisement

ಇನ್ನೂ ಪ್ರಕಟವಾಗದ ಜೆಡಿಎಸ್‌ 3ನೇ ಪಟ್ಟಿ

06:40 AM Apr 24, 2018 | Team Udayavani |

ಬೆಂಗಳೂರು: ನಾಮಪತ್ರ ಸಲ್ಲಿಸಲು ಇನ್ನು ಒಂದೇ ದಿನ ಬಾಕಿ ಇದ್ದರೂ ಜೆಡಿಎಸ್‌ ಇನ್ನೂ 24 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸದೇ ಇರುವುದು ಆ ಕ್ಷೇತ್ರದ ಆಕಾಂಕ್ಷಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ.

Advertisement

ಎಲ್ಲಾ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದ ಜೆಡಿಎಸ್‌ ನಂತರ ಬಿಎಸ್‌ಪಿ ಜತೆ ಹೊಂದಾಣಿಕೆ ಮಾಡಿಕೊಂಡು 20 ಕ್ಷೇತ್ರಗಳನ್ನು ಆ ಪಕ್ಷಕ್ಕೆ ಬಿಟ್ಟುಕೊಟ್ಟಿತ್ತು. ಪ್ರಸ್ತುತ 2 ಹಂತಗಳಲ್ಲಿ 180 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಜೆಡಿಎಸ್‌ ಇನ್ನೂ 24 ಕ್ಷೇತ್ರಗಳ ಪಟ್ಟಿ ಪ್ರಕಟಿಸಬೇಕಿದೆ. ಈ ಪೈಕಿ ಬೊಮ್ಮನಹಳ್ಳಿಯಿಂದ ನಿರ್ಮಾಪಕ ಕೆ.ಮಂಜು ಮಂಗಳವಾರ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ 23 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಬಾಕಿ ಉಳಿದಿದೆ.

ಈ ಪೈಕಿ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿ ಘೋಷಣೆಯಾಗದೇ ಇದ್ದರೂ ಕೆಲವರಿಗೆ ನಾಮಪತ್ರ ಸಲ್ಲಿಸಲು ಸೂಚಿಸಲಾಗಿದೆ. ನಾಮಪತ್ರ ಸಲ್ಲಿಸಲು ಮಂಗಳವಾರ ಮಧ್ಯಾಹ್ನದವರೆಗೆ ಕಾಲಾವಕಾಶವಿದ್ದು, ಬುಧವಾರ ಮಧ್ಯಾಹ್ನದೊಳಗೆ ಬಿ ಫಾರಂ ಸಲ್ಲಿಸಿದರೆ ಸಾಕು. ಅಷ್ಟರೊಳಗೆ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿ ಬಿ ಫಾರಂ ವಿತರಿಸಲು ಅವಕಾಶ ಇದೆ. ಆದರೂ ಕೆಲವೆಡೆ ಅಭ್ಯರ್ಥಿಗಳನ್ನು ಹಾಕುವುದು ಅನುಮಾನ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಬಿಎಸ್‌ಪಿಗೆ 19 ಕ್ಷೇತ್ರ: ಒಪ್ಪಂದದಂತೆ ಬಿಎಸ್‌ಪಿಗೆ 20 ಕ್ಷೇತ್ರ ಬಿಟ್ಟುಕೊಟ್ಟಿದ್ದ ಜೆಡಿಎಸ್‌ ಅದರಲ್ಲಿ 1 ಕ್ಷೇತ್ರವನ್ನು ವಾಪಸ್‌ ಪಡೆದಿದೆ. ಕಲಬುರಗಿ ಗ್ರಾಮಾಂತರದಲ್ಲಿ ಬಿಜೆಪಿ ಟಿಕೆಟ್‌ ಸಿಗದೆ ಜೆಡಿಎಸ್‌ ಸೇರಿದ ಮಾಜಿ ಸಚಿವ ರೇವೂ ನಾಯಕ್‌ ಬೆಳಮಗಿ ಅವರನ್ನು ಕಣಕ್ಕಿಳಿಸಲಾಗುತ್ತಿದೆ. ಅಲ್ಲಿ ಈಗಾಗಲೇ ಘೋಷಣೆಯಾಗಿರುವ ಬಿಎಸ್‌ಪಿ ಅಭ್ಯರ್ಥಿ ಸೂರ್ಯಕಾಂತ ನಿಂಬಾಳ್ಕರ್‌ ಕಣದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next