Advertisement

ಜೆಡಿಎಸ್‌ 25 ಸ್ಥಾನ ಗೆಲ್ಲೋದೇ ಹೆಚ್ಚು

06:50 AM Apr 03, 2018 | |

ಮೈಸೂರು: ಜೆಡಿಎಸ್‌ ಪಕ್ಷದವರು 25 ಸ್ಥಾನ ಗೆಲ್ಲುವುದೇ ಹೆಚ್ಚು. ಆದರೂ ಕುಮಾರಸ್ವಾಮಿ, ಯಡಿಯೂರಪ್ಪ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.

Advertisement

ಚಾಮುಂಡೇಶ್ವರಿ ಕ್ಷೇತ್ರದ ಜಯಪುರ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಸೋಮವಾರ ರೋಡ್‌ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದ ಅವರು, ಗ್ರಾಮಗಳಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು. ಅವರಪ್ಪನ ಆಣೆ ಕುಮಾರಸ್ವಾಮಿ, ಯಡಿಯೂರಪ್ಪ ಮುಖ್ಯಮಂತ್ರಿ ಆಗಲ್ಲ. ನಾನೇ ಮತ್ತೆ ಮುಖ್ಯಮಂತ್ರಿ ಆಗೋದು ಎಂದು ಹೇಳಿದರು.

ಚುನಾವಣೆಯಲ್ಲಿ ಮತ ಕೇಳಲು ನಾನು ಇನ್ನೊಮ್ಮೆ ಕ್ಷೇತ್ರಕ್ಕೆ ಬರಲಾಗದಿದ್ದರೂ ಗ್ರಾಮಗಳಲ್ಲಿ ನೀವೇ ಸಿದ್ದರಾಮಯ್ಯ ಎಂದು ತಿಳಿದುಕೊಂಡು ನನ್ನ ಪರ ಮತ ಹಾಕಿಸಿ ಗೆಲ್ಲಿಸಿ.ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಇನ್ನೊಂದು ಸುತ್ತಿನ ರಾಜ್ಯ ಪ್ರವಾಸ ಮಾಡಬೇಕಿದೆ. ಹೀಗಾಗಿ ಮತ್ತೂಮ್ಮೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮತಯಾಚನೆಗೆ ಬರುವುದು ಕಷ್ಟವಾಗಬಹುದು. ನನ್ನ ಪರವಾಗಿ ನೀವೇ ನಿಂತು ಕೆಲಸ ಮಾಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ನಾಲ್ಕನೇ ದಿನವೂ ಮತಬೇಟೆ: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ನಾಲ್ಕನೇ ದಿನವೂ ಮತಬೇಟೆಗಾಗಿ ಭರ್ಜರಿ ರೋಡ್‌ ಶೋ ನಡೆಸಿದರು.

ಜಯಪುರ ಹೋಬಳಿಯ ಕೆಲ್ಲಹಳ್ಳಿಯಿಂದ ಮತಬೇಟೆ ಆರಂಭಿಸಿದ ಅವರು, ದಾರಿಪುರ, ಬರಡನಪುರ, ಮಾವಿನಹಳ್ಳಿ, ಜಯಪುರ, ಹಾರೋಹಳ್ಳಿ (ಜಯಪುರ), ಸೋಲಿಗರ ಕಾಲೋನಿ, ಗುಮಚನಹಳ್ಳಿ, ಎಸ್‌.ಕಲ್ಲಹಳ್ಳಿ, ಚುಂಚರಾಯನ ಹುಂಡಿ, ಮದ್ದೂರು, ಮದ್ದೂರು ಹುಂಡಿ, ಮಂಡನಹಳ್ಳಿ, ಗುಜ್ಜೆàಗೌಡನಪುರ, ಅರಸನಕೆರೆ, ಮಾರ್ಬಳ್ಳಿ ಹುಂಡಿ, ಮಾರ್ಬಳ್ಳಿ ಹಾಗೂ ಟಿ.ಕಾಟೂರು ಗ್ರಾಮಗಳಲ್ಲಿ ಸ್ಥಳೀಯ ಮುಖಂಡರೊಂದಿಗೆ ರೋಡ್‌ ಶೋ ನಡೆಸಿ ಮತಯಾಚನೆ ಮಾಡಿದರು.

Advertisement

ಮುಜುಗರ: ಸೋಮವಾರ ಬೆಳಗ್ಗೆ ಮೈಸೂರಿನ ಟಿ.ಕೆ.ಲೇಔಟ್‌ ಬಡಾವಣೆಯ ಮನೆಯಿಂದ ಹೊರಟ ಮುಖ್ಯಮಂತ್ರಿ, ನೇರವಾಗಿ ಎಚ್‌.ಡಿ.ಕೋಟೆ ರಸ್ತೆಯಲ್ಲಿ ಬರುವ ಕೆಲ್ಲಹಳ್ಳಿಗೆ ಭೇಟಿ ನೀಡಿ, ರೋಡ್‌ ಶೋ ನಡೆಸಿ ಮತಯಾಚಿಸಿದರು. ಈ ವೇಳೆ ಗ್ರಾಮದ ಕೆಲ ಯುವಕರು ಎಚ್‌.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್‌ಗೆ ಜೈಕಾರ ಕೂಗಿದ್ದರಿಂದ ಮುಜುಗರ ಅನುಭವಿಸಬೇಕಾಯಿತು.

23ಕ್ಕೆ ನಾಮಪತ್ರ ಸಲ್ಲಿಕೆ
ಮೈಸೂರು
: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಏ.23ರಂದು ನಾಮಪತ್ರ ಸಲ್ಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹಾರೋಹಳ್ಳಿ(ಜಯಪುರ)ದಲ್ಲಿ ರೋಡ್‌ ಶೋ ನಡೆಸಿ ಮಾತನಾಡಿದ ಅವರು, ಈ ಕ್ಷೇತ್ರದಿಂದ ಏಳು ಬಾರಿ ಚುನಾವಣೆಗೆ ಸ್ಪರ್ಧಿಸಿ, ಐದು ಬಾರಿ ಗೆಲುವು ಸಾಧಿಸಿದ್ದೇನೆ. ಮುಖ್ಯಮಂತ್ರಿಯಾಗಿ ಈ ಕ್ಷೇತ್ರದಿಂದ ಈ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿದ್ದು, ಕ್ಷೇತ್ರದ ಮತದಾರರು ಆಶೀರ್ವದಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸುವುದಿಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆಲ್ಲ ಕಿವಿಗೊಡಬೇಡಿ. ನಾನು ರಾಜಕೀಯ ಆರಂಭಿಸಿದ ಕ್ಷೇತ್ರದಿಂದಲೇ ಕೊನೆಯ ಚುನಾವಣೆಯನ್ನು ಎದುರಿಸಲು ತೀರ್ಮಾನಿಸಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next