Advertisement
ಸ್ಥಳೀಯ ನಾಯಕತ್ವದ ಪ್ರಶ್ನೆ ಹಾಗೂ ಅಂಬರೀಶ್ ಕುಟುಂಬದ ವಿರುದ್ಧ ಜೆಡಿಎಸ್ ನಾಯಕರು ಆಡಿರುವ ದುಡುಕು ಮಾತುಗಳಿಂದ ಜಿಲ್ಲೆಯಲ್ಲಿ ಜೆಡಿಎಸ್‌ಗೆ ವ್ಯತಿರಿಕ್ತವಾದ ವಾತಾವರಣ ಸೃಷ್ಟಿಯಾಗುತ್ತಿದ್ದು, ಇಂತಹ ಸನ್ನಿವೇಶದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಪಕ್ಷದ ವರಿಷ್ಠರು ಹಿಂದೇಟು ಹಾಕುವಂತಾಗಿದೆ.
Related Articles
Advertisement
ನಿಖಿಲ್ ಕಾಣಿಸುತ್ತಿಲ್ಲ: ಕಳೆದ ಸಂಕ್ರಾಂತಿ ಹಬ್ಬದದಂದು ಸರ್ಕಾರಿ ಕಾರ್ಯಕ್ರಮವಾದ ಭತ್ತ ಖರೀದಿ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಿಖಿಲ್, ಇಲ್ಲಿಯವರೆಗೂ ಮಂಡ್ಯ ಜಿಲ್ಲೆಯ ಕಡೆ ತಲೆ ಹಾಕಿಲ್ಲ. ಸೀತಾರಾಮ ಕಲ್ಯಾಣ ಸಿನಿಮಾದ ಪ್ರಮೋಷನ್‌ಗೂ ಜಿಲ್ಲೆಯತ್ತ ಮುಖ ಮಾಡಲಿಲ್ಲ. ಸಿನಿಮಾಕ್ಕೆ ಜೆಡಿಎಸ್ ಶಾಸಕರು ಗ್ರಾಮೀಣ ಜನರಿಗೆ ಉಚಿತ ಪ್ರದರ್ಶನ ಏರ್ಪಡಿಸಿರುವುದು ಬಹಿರಂಗಗೊಳ್ಳುತ್ತಿದ್ದಂತೆ ನಿಖೀಲ್, ಸಿನಿಮಾ ಪ್ರಚಾರಕ್ಕಾಗಿ ಮಂಡ್ಯಕ್ಕೆ ಆಗಮಿಸಲೇ ಇಲ್ಲ. ಅದಕ್ಕೂ ಮುನ್ನ ಪದೇ ಪದೇ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ನಾನೇ ಎಂದು ಬಿಂಬಿಸಿಕೊಂಡಿದ್ದರು.
ಲಕ್ಷ್ಮೀ ಅಶ್ವಿನ್ ಹೆಸರು ಚಾಲ್ತಿಗೆ
ನಿಖಿಲ್ ಸ್ಪರ್ಧೆಗೆ ಹಿಂದೇಟು ಹಾಕುತ್ತಿರುವ ಬೆನ್ನ ಹಿಂದೆಯೇ ಲಕ್ಷ್ಮೀ ಅಶ್ವಿನ್‌ಗೌಡ ಹೆಸರನ್ನು ಮಂಡ್ಯ ಕ್ಷೇತ್ರದಲ್ಲಿ ಹರಿಯ ಬಿಡುವ ಮೂಲಕ ಸ್ಥಳೀಯ ನಾಯಕತ್ವಕ್ಕೆ ಮನ್ನಣೆ ನೀಡಿರುವುದನ್ನು ಬಿಂಬಿಸಿಕೊಳ್ಳುವ ಪ್ರಯತ್ನಕ್ಕೆ ಜೆಡಿಎಸ್ ವರಿಷ್ಠರು ಮುಂದಾಗಿದ್ದಾರೆ. ಲಕ್ಷ್ಮೀ ಅಶ್ವಿನ್‌ಗೌಡ ಹಾಗೂ ಸುಮಲತಾ ಅವರ ಫೋಟೋ ಹರಿಯ ಬಿಟ್ಟು, ‘ಮಂಡ್ಯದ ಮಗಳು ಯಾರು?’ ಎಂಬ ಪ್ರಶ್ನೆ ಹಾಕಿದ್ದಾರೆ. ಕೊನೆಯ ಹಂತದವರೆಗೆ ನಿಖೀಲ್ ಸ್ಪರ್ಧೆಯನ್ನು ಮೊದಲ ಆದ್ಯತೆಯಾಗಿಸಿಕೊಂಡು ಅದು ಸಾಧ್ಯವಾಗದಿದ್ದರೆ ಲಕ್ಷ್ಮೀ ಅಶ್ವಿನ್‌ಗೌಡ ಅವರನ್ನು ಕಣಕ್ಕಿಳಿಸುವ ಆಲೋಚನೆಯೂ ಜೆಡಿಎಸ್ ವರಿಷ್ಠರ ರಾಜಕೀಯ ತಂತ್ರಗಾರಿಕೆಯ ಒಂದು ಭಾಗವಾಗಿದೆ ಎಂದು ಹೇಳಲಾಗುತ್ತಿದೆ.
ಮಂಡ್ಯ ಮಂಜುನಾಥ್