Advertisement

ಭೂಮಿಗಿಳಿದ ಜೆಸಿಬಿ; ಕಟ್ಟೆಯೊಡೆದ ಆಕ್ರೋಶ

12:51 PM Jun 01, 2019 | Suhan S |

ಬೆಳಗಾವಿ: ಒಳಚರಂಡಿ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಫಲವತ್ತಾದ ಭೂಮಿ ಸ್ವಾಧೀನ ಪಡಿಸಿಕೊಳ್ಳುತ್ತಿರುವುದನ್ನು ಖಂಡಿಸಿ ತಾಲೂಕಿನ ಹಲಗಾ ಗ್ರಾಮದ ಹೊಲದಲ್ಲಿ ಅಧಿಕಾರಿಗಳಿಗಾಗಿ ಹಾಕಿದ್ದ ಕುರ್ಚಿಗಳನ್ನು ಮುರಿದು ರೈತರು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಹಲಗಾ ಹೊರವಲಯದ 19.20 ಎಕರೆ ಜಮೀನಿನಲ್ಲಿ 17 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಡಳಿತ ಒಳಚರಂಡಿ ಘಟಕ ನಿರ್ಮಾಣ ಮಾಡಲು ಮುಂದಾಗಿದೆ. ಅದಕ್ಕಾಗಿ ಶುಕ್ರವಾರ ಬೆಳಗ್ಗೆ ಏಕಾಏಕಿ ಸ್ಥಳಕ್ಕೆ ಹೋದ ಅಧಿಕಾರಿಗಳು ಜೆಸಿಬಿ ಮೂಲಕ ಭೂಮಿ ಸಮತಟ್ಟು ಮಾಡಲು ಮುಂದಾಗಿದ್ದಾರೆ. ಆಗ ಇದಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದರು. ಫಲವತ್ತಾದ ಈ ಜಮೀನು ತೆಗೆದುಕೊಂಡರೆ ಮುಂದೆ ನಮ್ಮ ಬದುಕು ಹೇಗೆ ಎಂದು ಪ್ರಶ್ನಿಸಿದರು.

ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಬರುವವರೆಗೆ ಯಾವುದೇ ಕಾರಣಕ್ಕೂ ಇಲ್ಲಿ ಕೆಲಸ ಮುಂದುವರಿಸಬಾರದು ಎಂದು ರೈತರು ಪಟ್ಟು ಹಿಡಿದರು. ಹಲವು ಗಂಟೆಗಳ ಕಾಲ ಕಾಯ್ದರೂ ಯಾವ ಅಧಿಕಾರಿಯೂ ಬರಲಿಲ್ಲ. ಇದರಿಂದ ಕುಪಿತಗೊಂಡ ರೈತರು ಅಲ್ಲಿ ಇದ್ದ ಪ್ಲಾಸ್ಟಿಕ್‌ ಕುರ್ಚಿಗಳನ್ನು ಪೊಲೀಸರ ಎದುರೇ ಧ್ವಂಸ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಗ್ರಾಮೀಣ ಶಾಸಲಕಿ ಲಕ್ಷ್ಮೀ ಹೆಬ್ಟಾಳಕರ ಅವರು ರೈತರನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಹುಲುಸಾಗಿ ಬೆಳೆದ ಭೂಮಿ ಮೇಲೆ ಜೆಸಿಬಿ ಹಾಕಿ ನಮ್ಮ ಜೀವನದ ಮೇಲೆ ಬರೆ ಎಳೆಯುತ್ತಿರುವ ಜಿಲ್ಲಾಡಳಿತ ಅನ್ಯಾಯ ಮಾಡುತ್ತಿದೆ. ರೈತರ ಜಮೀನು ಕಸಿದುಕೊಂಡು ಅಭಿವೃದ್ಧಿ ಮಾಡಲು ಹೊರಟಿರುವುದು ಎಷ್ಟು ಸರಿ. ನಮ್ಮ ಜಾಗ ನಾವು ಬಿಟ್ಟು ಕೊಡುವುದಿಲ್ಲ ಎಂದು ರೈತರು ಕಣ್ಣೀರು ಹಾಕುತ್ತ ಶಾಸಕಿ ಎದುರು ಅಳಲು ತೋಡಿಕೊಂಡರು. ಮಹಿಳೆಯರು, ಮಕ್ಕಳು ಸಮೇತ ಸ್ಥಳದಲ್ಲಿ ಜಮಾಯಿಸಿದ ರೈತರ ಕುಟುಂಬದವರ ಪರವಾಗಿ ಸ್ಥಳಕ್ಕೆ ಬಂದ ಶಾಸಕಿಯ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಅಧಿಕಾರಿಗಳು ಇರಲಿಲ್ಲ. ಕೂಡಲೇ ಸಂಬಂಧಿಸಿದವರ ವಿರುದ್ಧ ಹರಿಹಾಯ್ದ ಶಾಸಕಿ ಹೆಬ್ಟಾಳಕರ, ತಾತ್ಕಾಲಿಕವಾಗಿ ಈ ಕೆಲಸ ನಿಲ್ಲಿಸಬೇಕು. ರೈತರಿಗೆ ನ್ಯಾಯ ಸಿಗುವವರೆಗೆ ಯಾವುದೇ ಕಾರಣಕ್ಕೂ ಈ ಜಮೀನು ಸ್ವಾಧೀನಪಡಿಸಿಕೊಳ್ಳಬಾರದು ಎಂದು ಹೇಳಿದರು. ಶಾಸಕಿಯಾಗಿರುವ ನನ್ನ ಗಮನಕ್ಕೂ ತರದೇ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಜಿಲ್ಲಾಡಳಿತ ಕ್ರಮ ಸರಿಯಲ್ಲ. ರೈತರ ಮನಸ್ಸು ನೋಯಿಸಿ ಅಭಿವೃದ್ಧಿ ಮಾಡುವುದರಲ್ಲಿ ಅರ್ಥ ಇಲ್ಲ. ಈ ಭಾಗದ ರೈತರ ಧ್ವನಿಯಾಗಿ ನಾನು ಕೆಲಸ ಮಾಡುತ್ತೇನೆ. ಅಭಿವೃದ್ಧಿ ಕೆಲಸಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಒಬ್ಬರಿಗೆ ಅನ್ಯಾಯ ಮಾಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ರೈತರಿಗೆ ನ್ಯಾಯ ಒದಗಿಸಿ ಕೊಡುವಲ್ಲಿ ನಾನು ಸದಾ ಮುಂಚೂಣಿಯಲ್ಲಿ ಇರುತ್ತೇನೆ ಎಂದು ಅಭಯ ನೀಡಿದರು.

ಎರಡು ದಿನಗಳ ಹಿಂದಷ್ಟೇ ಜೆಸಿಬಿ ಮೂಲಕ ರೈತರ ಹೊಲಗಳಿಗೆ ಬಂದಿದ್ದನ್ನು ಖಂಡಿಸಿ ಶಾಸಕಿ ಹೆಬ್ಟಾಳಕರ ಅವರ ಪುತ್ರ ಮೃಣಾಲ್ ಹೆಬ್ಟಾಳಕರ ಪ್ರತಿಭಟನೆ ನಡೆಸಿದ್ದರು. ಆಗ ಮೃಣಾಲ್ ಸೇರಿದಂತೆ 15ಕ್ಕೂ ಹೆಚ್ಚು ರೈತರನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ನಂತರ ಬಿಡುಗಡೆಗೊಳಿಸಿದ್ದರು.

ರೈತರ ದನಿಯಾಗಿ ಕೆಲಸ ಮಾಡುವೆ:

ಇದ್ದ ಜಮೀನು ವಶಪಡಿಸಿಕೊಂಡು ಅಭಿವೃದ್ಧಿ ಮಾಡಲು ಹೊರಟಾಗ ರೈತರು ಏನು ಮಾಡಬೇಕು. ಕಣ್ಣೀರಲ್ಲಿ ಕೈ ತೊಳೆಯುವ ಪರಿಸ್ಥಿತಿ ಬಂದೀತು ಎಚ್ಚರಿಕೆ. ಜಿಲ್ಲಾಡಳಿತ ನನ್ನ ಗಮನಕ್ಕೂ ತರದೇ ಏಕಾಏಕಿ ಜೆಸಿಬಿ ಮೂಲಕ ಫಲವತ್ತಾದ ಜಮೀನು ಸಮತಟ್ಟು ಮಾಡಿ ಸ್ವಾಧೀನಪಡಿಸಿಕೊಳ್ಳುತ್ತಿರುವುದು ಎಷ್ಟು ಸರಿ. ರೈತರ ಧ್ವನಿಯಾಗಿ ನಾನು ಕೆಲಸ ಮಾಡುತ್ತೇನೆ. ಅನ್ಯಾಯ ಆಗಲು ಬಿಡುವುದಿಲ್ಲ.
• ಲಕ್ಷ್ಮೀ ಹೆಬ್ಟಾಳಕರ, ಶಾಸಕಿ ಬೆಳಗಾವಿ ಗ್ರಾಮೀಣ
Advertisement
Advertisement

Udayavani is now on Telegram. Click here to join our channel and stay updated with the latest news.

Next