Advertisement
ಇದರೊಂದಿಗೆ ಇತರೆ ಇಬ್ಬರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಎರಡು ದಿನ ಪೊಲೀಸ್ ವಶದಲ್ಲಿ ಇಡಲಾಗಿತ್ತು. ಅಲ್ಲದೆ, ಜೂನ್ 2 ರಂದು ಮೂವರು ಆರೋಪಿಗಳಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿತ್ತು. ಶುಕ್ರವಾರ ವರದಿ ಬಂದಿದ್ದು, ಡೆಲಿವರಿ ಬಾಯ್‌ಗೆ ಸೋಂಕು ದೃಢಪಟ್ಟಿದೆ. ಇಬ್ಬರಿಗೆ ನೆಗೆಟಿವ್ ಬಂದಿದೆ ಎಂಬುದು ಗೊತ್ತಾಗಿದೆ ಎಂದು ಠಾಣೆಯ ಮೂಲಗಳು ತಿಳಿಸಿವೆ.
Related Articles
Advertisement
ನಾಲ್ವರಿಗೆ ಸ್ಥಳೀಯ ಸೋಂಕಿತ ಸಂಪರ್ಕದಿಂದ ಸೋಂಕು ತಗುಲಿದೆ. ಈ ಎಲ್ಲಾ ಸೋಂಕಿತರನ್ನು ಕೋವಿಡ್ 19 ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನು ಬಿಬಿಎಂಪಿ ವ್ಯಾಪ್ತಿಯ ಪೂರ್ವ, ದಕ್ಷಿಣ, ಪಶ್ಚಿಮ ವಲಯದಲ್ಲಿ ದಿನ ಎಲ್ಲಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಹೊರರಾಜ್ಯದಿಂದ ಬಂದು ಸೋಂಕಿತರಾದ 5 ಮಂದಿಯಲ್ಲಿ ಮೂವರು ದೆಹಲಿಯಿಂದ, ತಮಿಳುನಾಡು ಮತ್ತು ಮಹಾರಾಷ್ಟ್ರದಿಂದ ತಲಾ ಒಬ್ಬರು ಆಗಮಿಸಿದ್ದರು. ಇದರಲ್ಲಿ ಮಹಾರಾಷ್ಟ್ರದಿಂದ ಬಂದವರು ಮಾತ್ರ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದು, ಬೇರೆ ರಾಜ್ಯದಿಂದ ಬಂದವರು ಹೋಂ ಕ್ವಾರಂಟೈನ್‌ನಲ್ಲಿದ್ದರು. ಇಂಡೋನೇಷಿಯಾದಿಂದ ಬಂದು ಕ್ವಾರಂಟೈನ್‌ನಲ್ಲಿದ್ದ ಒಬ್ಬರಿಗೆ ಸೋಂಕು ತಗುಲಿದೆ.
ಮತ್ತೆರಡು ವಾರ್ಡ್ ಕಂಟೈನ್ಮೆಂಟ್?: ನಗರದಲ್ಲಿ ಶುಕ್ರವಾರ ಹತ್ತು ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಹೊಸದಾಗಿ ರಾಜಮಹಲ್ ಗುಟ್ಟಹಳ್ಳಿ ಹಾಗೂ ಚಲವಾದಿಪಾಳ್ಯಕ್ಕೂ ಸೋಂಕು ವಿಸ್ತರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಆ ಎರಡೂ ವಾರ್ಡ್‌ಗಳು ನಿರ್ಬಂಧಿತ ವಲಯ (ಕಂಟೈನ್ಮೆಂಟ್ ಝೋನ್) ವ್ಯಾಪ್ತಿಗೆ ಒಳಪಡುವ ಸಾಧ್ಯತೆ ಇದೆ. ಚಲವಾದಿಪಾಳ್ಯದಲ್ಲಿ ಖಾಸಗಿ ಆಸ್ಪತ್ರೆಯ ನರ್ಸ್ ಹಾಗೂ ಖಾಸಗಿ ಕಂಪನಿ ಮಹಿಳಾ ಉದ್ಯೋಗಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ.
ಅದೇ ರೀತಿ, ರಾಜಮಹಲ್ ಗುಟ್ಟಹಳ್ಳಿಯ ನಿವಾಸಿಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಒಂದುವೇಳೆ ಕಂಟೈನ್ಮೆಂಟ್ ವಲಯಗಳಿಗೆ ಇವೆರಡೂ ಸೇರ್ಪಡೆಗೊಂಡರೆ, ಕಂಟೈನ್ಮೆಂಟ್ ವಲಯಗಳ ಸಂಖ್ಯೆ 42ಕ್ಕೆ ಏರಿಕೆ ಆಗಲಿದೆ. ಇನ್ನು ಉಳಿದಂತೆ ಅಂಜನಪ್ಪ ಗಾರ್ಡನ್ ಹಾಗೂ ಅಗ್ರಹಾರ ದಾಸರಹಳ್ಳಿಯಲ್ಲಿ ತಲಾ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ಈ ಮಧ್ಯೆ 60 ದಿನಗಳ ನಂತರ ಪಾದರಾಯನಪುರ 11ನೇ ಕ್ರಾಸ್‌ನಲ್ಲಿದ್ದ ಸೀಲ್ ಡೌನ್ ತೆರವುಗೊಳಿಸಲಾಗಿದೆ.
ಅತಿ ಹೆಚ್ಚು ಸೋಂಕಿತರು ಇದ್ದ ರಸ್ತೆ ಇದಾಗಿತ್ತು. ಸೋಂಕಿತರೆಲ್ಲರೂ ಗುಣಮುಖರಾಗಿದ್ದಾರೆ. ಅಲ್ಲದೆ ಈ ರಸ್ತೆಯಲ್ಲಿ ಕಳೆದ 28 ದಿನದಿಂದ ಹೊಸ ಪ್ರಕರಣ ಪತ್ತೆ ಆಗಿಲ್ಲ ಎಂಬ ಕಾರಣಕ್ಕೆ ಮುಕ್ತಗೊಳಿಸಲಾಗಿದೆ ಎನ್ನಲಾಗಿದೆ. ಆದರೆ, ಇದನ್ನು ಅಧಿಕಾರಿಗಳು ತಳ್ಳಿಹಾಕಿದ್ದು, ಸೀಲ್‌ಡೌನ್ ವೇಳೆ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಹಿಂದಕ್ಕೆ ಹಾಕಲಾಗಿದೆ. ಇದರಿಂದ ಎರಡು ರಸ್ತೆಗಳು ತೆರವಾಗಿವೆ ಅಷ್ಟೇ ಹೊರತು, ಇಡೀ ಕ್ರಾಸ್ ಮುಕ್ತವಾಗಿಲ್ಲ ಎಂದು ಸ್ಪಷ್ಟಪಡಿಸಿದರು.