ಹೈದರಾಬಾದ್ : ಇಂದು ನಸುಕಿನ ವೇಳೆ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 150 ಪ್ರಯಾಣಿಕರಿದ್ದ ಜಜೀರಾ ಏರ್ ವೇಸ್‌ನ ವಿಮಾನ ಲ್ಯಾಂಡ್ ಆದ ಬಳಿಕ ಅದರ ಒಂದು ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡ ಘಟನೆ ವರದಿಯಾಗಿದೆ.
ಕುವೈಟ್ – ಹೈದರಾಬಾದ್ ಹಾರಾಟದ ಜೆ9-608 ಜಜೀರಾ ವಿಮಾನ ಲ್ಯಾಂಡ್ ಆದ ಬಳಿಕ ಅದರ ಒಂದು ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡದ್ದನ್ನು ಏರ್ ಟ್ರಾಫಿಕ್ ಕಂಟ್ರೋಲ್ ಮತ್ತು ಕೆಲವು ಗ್ರೌಂಡ್ ಸ್ಟಾಫ್ ಸದಸ್ಯರು ಕಂಡರು. ಒಡನೆಯೇ ಅವರು ವಿಮಾನ ಪೈಲಟ್‌ಗೆ ಈ ವಿಷಯ ತಿಳಿಸಿದರು. ಕೂಡಲೇ ಪೈಲಟ್ ವಿಮಾನ ಎರಡೂ ಇಂಜಿನ್ ಗಳನ್ನು ಬಂದ್ ಮಾಡಿದರು.
ಈ ಘಟನೆ ಇಂದು ನಸುಕಿನ 1.30ರ ವೇಳೆಗೆ ನಡೆಯಿತು. ವಿಮನದ ಬಲ ಬದಿಯ ಇಂಜಿನ್‌ನಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತು. ಸ್ವಲ್ಪ ಹೊತ್ತಿನ ಅನಂತರ ಅದು ತನ್ನಿಂತಾನೇ ನಂದಿ ಹೋಯಿತು. ಹಾಗಿದ್ದರೂ ಈ ಅನಿರೀಕ್ಷಿತ ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ವಿಮಾನ ಲ್ಯಾಂಡ್ ಆದ ಬಳಿಕ ಅದರ ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡ ಹೊರತಾಗಿಯೂ ವಿಮಾನದಲ್ಲಿದ್ದ ಎಲ್ಲ 150 ಪ್ರಯಾಣಿಕರು ಸುರಕ್ಷಿತವಾಗಿ ಇಳಿದು ಹೋದರು. ಯಾರಿಗೂ ಯಾವುದೇ ರೀತಿಯ ಗಾಯಗಳಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ವಿಮಾನವನ್ನು ಅನಂತರ ಟ್ಯಾಕ್ಸಿವೇ ಯಿಂದ ಪಾರ್ಕಿಂಗ್ ಬೇ ಕಡೆಗೆ ಎಳೆದೊಯ್ದು ಪಾರ್ಕ್ ಮಾಡಲಾಯಿತು.
ಘಟನೆ ಬಗ್ಗೆ ಪ್ರತಿಕ್ರಿಯೆಗಾಗಿ ಜಜೀರಾ ಏರ್ ಲೈನ್ ಅಧಿಕಾರಿಗಳು ಮಾಧ್ಯಮಕ್ಕೆ ತತ್‌ಕ್ಷಣಕ್ಕೆ ಲಭ್ಯರಾಗಲಿಲ್ಲ.