Advertisement

ಮೇರು ಗಾಯಕ; ಕಿರಾಣಾ ಘರಾಣಾ ಶೈಲಿಯ ಕೊಂಡಿ ಜಯತೀರ್ಥ ಮೇವುಂಡಿ

08:40 PM Mar 30, 2023 | Team Udayavani |

ಧಾರವಾಡದ ಮಣ್ಣಿನಲ್ಲಿ ಸ್ವರವಿದೆ, ಇಂಪಿದೆ, ಸಂಗೀತ ಲೋಕದ ದಿಗ್ಗಜರ ಗುಂಪೇ ಇದೆ. ಕಿರಾಣಾ ಘರಾಣಾ ಶೈಲಿಯ ಪ್ರಖ್ಯಾತ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಮೇರು ಗಾಯಕರ ಸಾಲಿಗೆ ಸೇರಿರುವ ಪಟ್ಟಿಯಲ್ಲಿಒಬ್ಬರು ಪಂಡಿತ್ ಜಯತೀರ್ಥ ಮೇವುಂಡಿ. ಜಯತೀರ್ಥ ಅವರು ಹುಟ್ಟಿದ್ದು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ 1972 ರಲ್ಲಿ. ಸಂಗೀತ ಪರಿಸರದಲ್ಲೇ ಬೆಳೆದ ಇವರು ಸಣ್ಣ ವಯಸ್ಸಿನಲ್ಲೇ ಪುರಂದರ ದಾಸ ಕೃತಿಗಳನ್ನು ಹಾಡುತ್ತಿದ್ದು ತಾಯಿ ಸುಧಾಬಾಯಿ ಪ್ರೋತ್ಸಾಹ ನೀಡಿ ಸಂಗೀತ ಲೋಕದ ಬಲು ದೊಡ್ಡ ವೃಕ್ಷವಾಗಿ ಬೆಳೆಯಲು ಕಾರಣರಾದರು.

Advertisement

ಮೊದಲಿನ ಹತ್ತು ವರ್ಷಗಳ ಶಿಕ್ಷಣ ಗ್ವಾಲಿಯರ ಘರಾಣಾದ ಸಂಗೀತ ವಿದ್ವಾಂಸರಾದ ಸಂಗೀತರತ್ನ ಪಂಡಿತ ಅರ್ಜುನಸಾ ನಾಕೋಡರಲ್ಲಿ ಪಡೆದು ನಂತರ ಭಾರತ ರತ್ನ ಪಂಡಿತ್ ಭೀಮಸೇನ ಜೋಶಿ ಅವರ ಶಿಷ್ಯರಾದ ಶ್ರೀಪತಿ ಪಾಡಿಗಾರ ಅವರಿಂದ ಕಿರಾಣಾ ಘರಾಣಾ ಸಂಗೀತ ಅಭ್ಯಾಸ ಮಾಡಿದ ಕಂಚಿನ ಕಂಠದ ಕೋಗಿಲೆ ಜಯತೀರ್ಥ ಅವರ ಸಾಧನೆಯ ಬಲುದೊಡ್ಡ ಕೀರ್ತಿ ಪ್ರಶಸ್ತಿ ಎಂಬಂತೆ ಪದ್ಮಭೂಷಣ ಸಂಗೀತ ರತ್ನ ಭೀಮಸೇನ ಜೋಶಿ ಅವರೇ ಗೋವಾ ಆಕಾಶವಾಣಿ ನಿಲಯದ ಕಲಾವಿದರಾಗಿದ್ದ ಇವರ ಸ್ವರದ ಇಂಪಿಗೆ ಮಾರು ಹೋಗಿ 1995 ರಲ್ಲಿ ದೂರವಾಣಿ ಕರೆ ಮಾಡಿ ಪುಣೆಯ ಸವಾಯಿ ಗಂಧರ್ವ ಸಂಗೀತ ಮಹೋತ್ಸವದಲ್ಲಿ ಹಾಡಲು ಬಲು ದೊಡ್ಡ ಅವಕಾಶ ಮಾಡಿಕೊಟ್ಟಿದ್ದರು.

20 ಸಾವಿರ ಅಪ್ಪಟ ಸಂಗೀತ ಪ್ರೇಮಿಗಳ, ವಿಧ್ವಾಂಸರು ಮತ್ತು ಸಂಗೀತ ದಿಗ್ಗಜರ ಮುಂದೆ 21 ರ ಹರೆಯದಲ್ಲೇ ಹಾಡಿ ಚಪ್ಪಾಳೆ ಗಿಟ್ಟಿಸಿಕೊಂಡ ಇವರು ಸಂಗೀತ ಲೋಕದಲ್ಲಿ ಹಿಂತಿರುಗಿ ನೋಡಲೇ ಇಲ್ಲ.ಆಲ್ ಇಂಡಿಯಾ ರೇಡಿಯೊದಲ್ಲಿ ‘ಎ’ ಶ್ರೇಣಿಯ ಕಲಾವಿದರಾಗಿದ್ದಾರೆ.ಕನ್ನಡ ಮಾತ್ರವಲ್ಲದೆ, ಮರಾಠಿ ಹಿಂದಿ ಸೇರಿ ಇತರ ಭಾಷೆಗಳಲ್ಲೂ ತಮ್ಮ ಕಂಠ ಸಿರಿಯನ್ನು ಸುಸ್ಪಷ್ಟವಾಗಿ ಶೋತೃಗಳ ಕರ್ಣಗಳಿಗೆ ತಲುಪಿಸಿದ ಕೀರ್ತಿ ಇವರದ್ದು. ದೇಶದ ಮಹೋನ್ನತ ಸಂಗೀತ ವೇದಿಕೆಗಳಲ್ಲೆಲ್ಲ ಇವರು ಸಂಗೀತ ಸುಧೆಯನ್ನು ಪ್ರಸ್ತುತ ಪಡಿಸಿದ್ದಾರೆ. ಸಾವಿರಾರು ಸನ್ಮಾನ, ಗಣ್ಯಾತಿ ಗಣ್ಯರಿಂದ ಸಾಧನೆಗೆ ತಕ್ಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಕೇಳುಗರ ಮೈಯಲ್ಲಿ ವಿದ್ಯುತ್ ಸಂಚಾರ ಮಾಡುವ ಶಕ್ತಿ, ಒತ್ತಡ , ನೋವು ಆಯಾಸ ಕಳೆಯುವ ಶಕ್ತಿ ಇವರ ಸ್ವರ ಮಾಧುರ್ಯ ದಲ್ಲಿ ಅಡಕವಾಗಿದೆ. ಪುತ್ರ ಲಲಿತ್ ಅವರನ್ನೂ ಸಂಗೀತ ಲೋಕಕ್ಕೆ ಕರೆದುಕೊಂಡು ಬಂದಿದ್ದಾರೆ.

ಬಿಲಾಸ್ ಖಾನಿ ತೋಡಿ, ಕಾನಡ, ಬಸಂತ್, ಯಮನ್, ಮಾರ್ವಾ ಮೊದಲಾದ ರಾಗಗಳ ಮೂಲಕ ಕೋಟ್ಯಂತರ ಸಂಗೀತ ಅಭಿಮಾನಿಗಳ ಮನದಾಳದಲ್ಲಿ ನೆಲೆಸಿದ್ದಾರೆ.

Advertisement

‘ಕಲ್ಲರಳಿ ಹೂವಾಗಿ’ ಕನ್ನಡ ಸಿನಿಮಾದಲ್ಲೂ ಒಂದು ಹಾಡನ್ನು ಹಾಡಿರುವ ಮೇವುಂಡಿ ಅವರ ರಂಗ ಬಾರೋ ಪಾಂಡುರಂಗ ಬಾರೊ, ದಾಸರ ಪದಗಳಾದ ನಾರಾಯಣ ತೆ ನಮೋ ನಮೋ, ಭಾಜೇ ಮುರಳಿಯಾ, ಜೋ ಭಜೇ ಹರಿ ಕೋ ಸದಾ ಸೇರಿದಂತೆ ನೂರಾರು ಹಾಡುಗಳು ಸರ್ವತ್ರ ಮೆಚ್ಚುಗೆಗೆ ಪಾತ್ರವಾಗಿವೆ.

ಕರ್ನಾಟಕ ಶೈಲಿಯ ಪ್ರಭಾವ
ಹಿಂದೂಸ್ಥಾನಿ ಘರಾನಾದಲ್ಲಿ ಕರ್ನಾಟಕ ಶೈಲಿಯ ಹೆಚ್ಚುವರಿ ಆಯಾಮದ ಬಗ್ಗೆ ಮೇವುಂಡಿ ಅವರು ವೇದಿಕೆಯೊಂದರಲ್ಲಿಅಭಿಪ್ರಾಯ ವ್ಯಕ್ತಪಡಿಸಿ, ಖ್ಯಾತ ಗಾಯಕ ಕರೀಂ ಖಾನ್ ಸಾಬ್ ಅವರ ಗಾಯನವನ್ನು ಕೇಳಿದವರು ಅವರ ಆರಂಭಿಕ ದಿನಗಳಲ್ಲಿ ಅವರ ಶೈಲಿಯು ಇಂದು ತಿಳಿದಿರುವುದಕ್ಕಿಂತ ಭಿನ್ನವಾಗಿತ್ತು. ಬರೋಡಾದ (ಈಗಿನ ವಡೋದರಾ) ರಾಜಪ್ರಭುತ್ವದ ರಾಜ್ಯದಲ್ಲಿ ವಾಸಿಸುತ್ತಿದ್ದಾಗ ಅವರಿಗೆ ಕರ್ನಾಟಕ ಸಂಗೀತ ಶೈಲಿಯ ಪರಿಚಯವಾಯಿತು.ಆ ದಿನಗಳಲ್ಲಿ ಅನೇಕ ಕರ್ನಾಟಕ ಸಂಗೀತಗಾರರು ರಾಜನ ಆಸ್ಥಾನದಲ್ಲಿ ಪ್ರದರ್ಶನ ನೀಡಲು ಬರುತ್ತಿದ್ದರು.ಖಾನ್ ಸಾಬ್ ಆ ಸಂಗೀತದಿಂದ ಆಳವಾಗಿ ಪ್ರಭಾವಿತರಾದರು, ನಂತರ ಅವರು ಮೈಸೂರಿಗೆ ಬಂದು ಅದನ್ನು ಕಲಿತು, ಅವರ ಸಂಗೀತವನ್ನು ಕೇಳಿದಾಗ ಅವರ ಬಹುತೇಕ ನಿರೂಪಣೆಗಳಲ್ಲಿ ಕರ್ನಾಟಕ ಶೈಲಿಯ ಪ್ರಭಾವವನ್ನು ನೀವು ಕಾಣಬಹುದು”ಅನ್ನುತ್ತಾರೆ.

ಮೇವುಂಡಿ ಅವರು ಮೇರುಖಂಡ ತಾನ್‌ನ ಆಳವಾದ ಅಧ್ಯಯನವನ್ನು ಮಾಡಿದ್ದಾರೆ. ಇದನ್ನು ಮೂರು ಅಷ್ಟಪದಗಳಲ್ಲಿ ಹಾಡಲಾಗುತ್ತದೆ. ಖರಾಜ್ (ಕೆಳಗಿನ), ಮಧ್ಯ (ಮಧ್ಯ) ಮತ್ತು ತಾರ್ (ಉನ್ನತ). ಇದು ವಿವಿಧ ಮಾದರಿಗಳಲ್ಲಿ, ಹೀಗೆ ತನ್ನ ಗಾಯನ ಸೌಂದರ್ಯವನ್ನು ಮತ್ತಷ್ಟು ತೋರಿಸುತ್ತಿದೆ.

ಮೇವುಂಡಿ ಅವರು ಶಾಸ್ತ್ರೀಯ ಸಂಗೀತದ ಹೊರತಾಗಿ, ಪ್ರಖ್ಯಾತ ಹಿನ್ನೆಲೆ ಗಾಯಕರಾದ ಲತಾ ಮಂಗೇಶ್ಕರ್, ಮೊಹಮ್ಮದ್ ರಫಿ, ಆಶಾ ಭೋಂಸ್ಲೆ, ಕಿಶೋರ್ ಕುಮಾರ್ ಮತ್ತು ಕನ್ನಡದ ಪಿಬಿ ಶ್ರೀನಿವಾಸ್, ವಾಣಿ ಜಯರಾಮ್ ಮತ್ತು ಎಸ್ ಜಾನಕಿ ಅವರ ದೊಡ್ಡ ಅಭಿಮಾನಿ. ರಫಿ ಸಾಬ್, ಲತಾ ಜಿ ನಿಜ ಜೀವನದ ಗಂಧರ್ವರು, ಲತಾ ಜೀ ಸರಸ್ವತಿ ದೇವಿಯ ಪುನರ್ಜನ್ಮ. ಅವರ ಹಳೆಯ ಹಾಡುಗಳಲ್ಲಿ ಹೆಚ್ಚಿನವು ಶಾಸ್ತ್ರೀಯ ಸ್ಪರ್ಶವನ್ನು ಹೊಂದಿವೆ ಮತ್ತು ಸಾಕಷ್ಟು ಭಾವನೆಗಳನ್ನು ಹೊಂದಿವೆ. ನಾವು ರೇಡಿಯೋದಲ್ಲಿ ಅವರ ಹಾಡುಗಳನ್ನು ಕೇಳುತ್ತಾ ಬೆಳೆದಿದ್ದೇವೆ”ಎಂದು ಹೇಳುತ್ತಾರೆ.

ಗಾಯಕನಾಗಿ ವೇದಿಕೆಗೆ ಬಂದ ಸಮಯದಿಂದ ಇಂದಿನವರೆಗೆ ಮೇವುಂಡಿ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next