Advertisement
8 ವಿಧಾನಸಭಾ ಕ್ಷೇತ್ರಗಳಿರುವ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 4 ಸ್ಥಾನಗಳನ್ನು ಹಂಚಿಕೊಂಡಿದ್ದು, ಎರಡು ಪಕ್ಷಗಳ ನಡುವೆ ನೇರ ಪೈಪೋಟಿ ಇದೆ. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಏರ್ಪಟ್ಟಿದ್ದು, ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಕಣಕ್ಕಿಳಿದಿದ್ದರು. ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಏರ್ಪಟ್ಟಿದೆ. ಆಗಿನ ಮೈತ್ರಿ ಅಭ್ಯರ್ಥಿ ಪ್ರಮೋದ್ ಈಗ ಬಿಜೆಪಿಯಲ್ಲಿದ್ದಾರೆ. 2019ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರಮೋದ್ ಮಧ್ವರಾಜ್ ವಿರುದ್ಧ ಬಿಜೆಪಿ ಶೋಭಾ ಕರಂದ್ಲಾಜೆ 3.49 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದರು. ಬಿಜೆಪಿ ಅಭ್ಯರ್ಥಿ ಶೇ. 62.46ರಷ್ಟು ಮತ ಪಡೆದಿದ್ದರು. ಈಗ ಪ್ರಮೋದ್ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದು, ರಾಷ್ಟ್ರ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಜತೆಗೆ ಕ್ಷೇತ್ರವ್ಯಾಪಿ ಸಂಚಾರವನ್ನೂ ಆರಂಭಿಸಿದ್ದಾರೆ.
Related Articles
ಕ್ಷೇತ್ರವ್ಯಾಪಿ ಜನಮನ್ನಣೆ ಗಳಿಸಿರುವ ನಾಯಕರ ಕೊರತೆ ಕಾಂಗ್ರೆಸ್‌ಗೆ ಬಹುವಾಗಿ ಕಾಡುತ್ತಿದೆ. ಸದ್ಯ ಕೇಳಿ ಬರುತ್ತಿರುವ ಹೆಸರುಗಳಲ್ಲಿ ಯಾರೂ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಪೂರ್ಣಪ್ರಮಾಣದಲ್ಲಿ ಪರಿಚಿತರಲ್ಲ. ಈ ಮಧ್ಯೆ ಕಾಂಗ್ರೆಸ್ ವಲಯದಲ್ಲಿ ಹಿಂದೆ ಇದೇ ಕ್ಷೇತ್ರದಲ್ಲಿ ಸಂಸದರಾಗಿದ್ದ ಜಯಪ್ರಕಾಶ್ ಹೆಗ್ಡೆ ಹೆಸರು ಮುಖ್ಯವಾಗಿ ಕೇಳಿಬರುತ್ತಿದೆ. ಸದ್ಯ ಬಿಜೆಪಿಯಲ್ಲಿರುವ ಹೆಗ್ಡೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾರೆ. ಈಚೆಗಷ್ಟೇ ಅವರ ಅವಧಿ ಫೆಬ್ರವರಿಯವರೆಗೆ ವಿಸ್ತರಣೆಯಾಗಿದೆ. ಈ ಅವಧಿ ಮುಗಿದ ಕೂಡಲೇ ಅವರು ಕಾಂಗ್ರೆಸ್‌ಗೆ ಸೇರುತ್ತಾರೆ ಎಂಬ ಬಲವಾದ ವದಂತಿಯಿದೆ. ಹಾಗೆಂದು ಅವರು ಎಲ್ಲಿಯೂ ಬಿಜೆಪಿ ಬಿಡುವ ಬಗ್ಗೆಯಾಗಲೀ ಅಥವಾ ಕಾಂಗ್ರೆಸ್ ಸೇರುವ ಬಗ್ಗೆಯಾಗಲೀ ಹೇಳಿಕೊಂಡಿಲ್ಲ.
Advertisement
ಒಂದೊಮ್ಮೆ ಅವರು ಕಾಂಗ್ರೆಸ್ ಸೇರಿದರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಬಲ ಬರುವ ಸಂಭವವಿದೆ ಎನ್ನಲಾಗುತ್ತದೆ. ಕ್ಷೇತ್ರದ ಒಡನಾಟ ಹೊಂದಿರುವ ಅವರು, 2009 ರಿಂದ 3 ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. 2012ರಲ್ಲಿ ಆಗಿನ ಸಂಸದ ಡಿ.ವಿ.ಸದಾನಂದ ಗೌಡರು ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯದ ಮುಖ್ಯಮಂತ್ರಿಯಾದರು. ಆ ವೇಳೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ವಿ. ಸುನಿಲ್ ಕುಮಾರ್ ವಿರುದ್ಧ ಗೆದ್ದು ಸಂಸತ್ ಪ್ರವೇಶಿಸಿದ್ದರು. ಆದರೆ 2014ರ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಸೋಲನ್ನಪ್ಪಿದ್ದು, ಅನಂತರದ ದಿನಗಳಲ್ಲಿ ಅವರು ಬಿಜೆಪಿಯನ್ನೇ ಅಪ್ಪಿದ್ದರು.
ಆದರೆ ಕಾಲಚಕ್ರ ಮತ್ತೆ ತಿರುಗಿದ್ದು, ಹೆಗ್ಡೆ ಕಾಂಗ್ರೆಸ್ ಸೇರುತ್ತಾರೆ ಎನ್ನುವ ವದಂತಿ ನಿಜವಾದರೆ ಮತ್ತೂಂದು ರೋಚಕ ಹೋರಾಟ ಇಲ್ಲಿ ಕಾಣಿಸಲಿದೆ. ಅಲ್ಲದೆ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಡಾ| ಕೆ.ಪಿ. ಅಂಶುಮಂತ್, ಆರತಿ ಕೃಷ್ಣ ಮುಂತಾದವರ ಹೆಸರೂ ಕೇಳಿಬರುತ್ತಿದೆ.