Advertisement

ಜಯಂತಿ ಹೆಸರಲ್ಲಿ ಕಚ್ಚಾಟ ಸಲ್ಲದು

11:55 AM Nov 12, 2018 | Team Udayavani |

ಬೆಂಗಳೂರು: ಮಹನೀಯರ ಜಯಂತಿಗಳ ಆಚರಣೆಯ ಹೆಸರಲ್ಲಿ ಹುಚ್ಚಾಟ-ಹುಡುಗಾಟ ನಡೆಸಿ ಸಮಾಜದಲ್ಲಿ ಬೀದಿ ಜಗಳಕ್ಕೆ ಅವಕಾಶ ಮಾಡಿಕೊಡುವುದನ್ನು ಸರ್ಕಾರಗಳು ನಿಲ್ಲಿಸಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಹೇಳಿದರು.

Advertisement

ದಿಶಾ ಚಾರಿಟೇಬಲ್‌ ಟ್ರಸ್ಟ್‌ ಹಾಗೂ ನವ್ಯ ನಾಟ್ಯ ಸಂಗಮ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಜಂಟಿಯಾಗಿ ಆಯೋಜಿಸಿದ್ದ “ಕನ್ನಡ ನುಡಿ ಹಬ್ಬ’ ಹಾಗೂ “ಟಿಪ್ಪು ಸುಲ್ತಾನ್‌ ಪ್ರಶಸ್ತಿ ಪ್ರದಾನ’ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬೇಡ ವಿಷಯಗಳಿಗೆ ಸರ್ಕಾರಗಳು ಜನರ ಬಾಯಿಗೆ ಬೀಳಬಾರದು ಎಂದು ತಿಳಿಸಿದರು.

ಏಕ ಅಥವಾ ಸಮ್ಮಿಶ್ರ ಯಾವುದೇ ಸರ್ಕಾರ ಆಗಿರಲಿ. ಜಯಂತಿಗಳ ಆಚರಣೆ ವಿಚಾರದಲ್ಲಿ ಒಂದು ತೀರ್ಮಾನ ತೆಗೆದುಕೊಂಡರೆ ಅದಕ್ಕೆ ಬದ್ಧರಾಗಬೇಕು. ಎಲ್ಲ ಮಂತ್ರಿ, ಶಾಸಕರು ಒಟ್ಟಾಗಿ ಮಾರ್ಯದೆ, ಘನತೆಯಿಂದ ನಡೆದುಕೊಳ್ಳಬೇಕು. ಯಾರೇ ವಿರೋಧ ಮಾಡಿದರೂ ಟಿಪ್ಪು ಜಯಂತಿ ಆಚರಿಸಿಯೇ ಸಿದ್ಧ ಎಂದು ಸರ್ಕಾರ ಹೇಳಿತ್ತು.

ಆದರೆ, ಕಾರ್ಯಕ್ರಮದಲ್ಲಿ ಅವರು ಬಂದರೆ, ಇವರು ಬಂದಿಲ್ಲ, ಇವರು ಹೋದರೆ, ಅವರು ವಿರೋಧ ಮಾಡಿದರು. ಈ ನಡವಳಿಕೆ ಜಯಂತಿ ಆಚರಿಸಿದ ಮಹನೀಯರಿಗೆ ಅಪಚಾರ ಮಾಡಿದಂತೆ. ಯಾರ ಪ್ರತಿಷ್ಠೆಗೆ ಈ ರೀತಿ ಮಾಡಿದರು ಗೊತ್ತಿಲ್ಲ. ಟಿಪ್ಪು ಜಯಂತಿಗೆ ವಿರೋಧ ಮಾಡಿದ ಬಿಜೆಪಿ, ಅಂತರ ಕಾಯ್ದುಕೊಂಡ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳ ವಿರುದ್ಧ ಹರಿಹಾಯ್ದರು.

ಮೇಯರ್‌ ಗಂಗಾಂಬಿಕಾ ಮಲ್ಲಿಕಾರ್ಜುನ್‌, ವಿಧಾನಪರಿಷತ್‌ ಸದಸ್ಯ ಎಂ.ಸಿ. ವೇಣುಗೋಪಾಲ್‌, ಶಾಸಕಿ ಸೌಮ್ಯ ರೆಡ್ಡಿ, ಮಾಜಿ ಸಂಸದ ಸಿ. ನಾರಾಯಣಸ್ವಾಮಿ, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ವೈ. ಸಯೀದ್‌ ಅಹ್ಮದ್‌, ದಿಶಾ ಚಾರಿಟಟಬಲ್‌ ಟ್ರಸ್ಟ್‌ ಅಧ್ಯಕ್ಷ ಇರ್ಷಾದ್‌ ಅಹ್ಮದ್‌ ಶೇಕ್‌, ನವ ನಾಟ್ಯ ಸಂಗಮದ ಡಿ. ಶ್ರೀನಾಥ್‌ ಮತ್ತಿತರರು ಇದ್ದರು. 

Advertisement

ಟಿಪ್ಪು ಉತ್ತಮ ಆಡಳಿತಗಾರ: “ಟಿಪ್ಪು ದೇಶಭಕ್ತ, ಉತ್ತಮ ಆಡಳಿತಗಾರ. ಅಧಿಕಾರದಲ್ಲಿದ್ದಾಗ ಬೇಕಾಗಿದ್ದ ಟಿಪ್ಪು ಈಗ ಬಿಜೆಪಿಗೆ ಬೇಡವಾಗಿದ್ದಾನೆ. ಅವರದು ಎರಡು ನಾಲಿಗೆ. ಕುರಾನ್‌ ದೇಶನಿಷ್ಠೆ ಹೇಳಿಕೊಡುತ್ತದೆ. ಈ ದೇಶ ನಮ್ಮದು ಎಂಬ ಭಾವನೆ ಮುಸ್ಲಿಮರಲ್ಲಿ ಬರಬೇಕು.

ಮಸೀದಿಗಳಲ್ಲೇ ಕಾಲ ಕಳೆದರೆ ಆಗದು, ಸಮಾಜದ ಮುಖ್ಯವಾಹಿನಿಗೆ ಬರಬೇಕು. ಹಿಂದುತ್ವದ ಬಗ್ಗೆ ಮಾತನಾಡುವವರು ಹಿಡಿಯಷ್ಟು ಜನ. ಉಳಿದವರೆಲ್ಲ ಬಹುಸಂಖ್ಯಾತರು ನಿಮ್ಮೊಂದಿಗೆ ಇದ್ದಾರೆ. ನಿಮಗೆ ಕೊಲ್ಲಬೇಕಾದರೆ ಮೊದಲು ನಮ್ಮನ್ನು ಕೊಲ್ಲಬೇಕು, ನಮ್ಮ ರಕ್ತ ದಾಟಿ ನಿಮ್ಮ ಬಳಿ ಬರಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next