ಸಾಗರ : ಕೆಲವು ರಾಜಕೀಯ ಶಕ್ತಿಗಳು ಶ್ರೀಪಾದ ಹೆಗಡೆ ನಿಸ್ರಾಣಿ ಅವರ ಬೆನ್ನಿಗೆ ನಿಂತು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಆಡಳಿತ ವ್ಯವಸ್ಥೆಯನ್ನು ಹದಗೆಡಿಸುವ ಪ್ರಯತ್ನ ನಡೆಸುತ್ತಿವೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಆರ್.ಜಯಂತ್ ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಡಿಎಫ್ ಹಿಂದಿನ ಉಪಾಧ್ಯಕ್ಷ ಶ್ರೀಪಾದ ಹೆಗಡೆ ನಿಸ್ರಾಣಿ ಕಾಲಿಟ್ಟ ಕ್ಷೇತ್ರಗಳೆಲ್ಲಾ ಮುಚ್ಚಿ ಹೋಗಿದೆ. ಈಗ ಎಂಡಿಎಫ್ ಮುಗಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದರು.
ಎಂಡಿಎಫ್ ಅಡಿ ಅನೇಕ ವಿದ್ಯಾಸಂಸ್ಥೆಗಳು ಕೆಲಸ ಮಾಡುತ್ತಿದೆ. ಕಳೆದ ಮಾರ್ಚ್‌ನಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಅತ್ಯಂತ ಪ್ರಾಮಾಣಿಕರಾಗಿರುವ ಎಂ.ಹರನಾಥ್‌ರಾವ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸಂಸ್ಥೆಯನ್ನು ಉತ್ತಮವಾಗಿ ನಡೆಸಿಕೊಂಡು ಹೋಗಲು ಆಡಳಿತ ಸಮಿತಿಯನ್ನು ಸಹ ರಚಿಸಲಾಗಿದೆ. ಆದರೆ ಹಿಂದಿನ ಉಪಾಧ್ಯಕ್ಷ ಶ್ರೀಪಾದ ಹೆಗಡೆ ಮತ್ತಿತರರು ಒಂದಷ್ಟು ದಾಖಲೆಗಳನ್ನು ಹೊಸ ಆಡಳಿತ ಸಮಿತಿಗೆ ಹಸ್ತಾಂತರ ಮಾಡದೆ ಇರುವುದರಿಂದ ಸುಲಲಿತವಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಸೂಕ್ತ ದಾಖಲೆ ನೀಡದೆ ಜಿಲ್ಲಾ ನೋಂದಾಣಾಧಿಕಾರಿಗಳು ಪರವಾನಿಗೆಯನ್ನು ಪುನರ್ನವೀಕರಣ ಮಾಡಿಕೊಡುತ್ತಿಲ್ಲ. ಶ್ರೀಪಾದ ಹೆಗಡೆ ಅವರ ಈ ನಡೆ ಸ್ಥಳೀಯ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಆಪಾದಿಸಿದರು.
ಮಲೆನಾಡಿನ ಪ್ರತಿಷ್ಟಿತ ಶೈಕ್ಷಣಿಕ ಸಂಸ್ಥೆಯಾಗಿರುವ ಎಂಡಿಎಫ್ ಹಿತದೃಷ್ಟಿಯಿಂದ ಶ್ರೀಪಾದ ಹೆಗಡೆ ಅವರನ್ನು ಬೆಂಬಲಿಸುತ್ತಿರುವ ರಾಜಕೀಯ ಶಕ್ತಿಗಳು ಹಿಂದೆ ಸರಿಯಬೇಕು. ಶ್ರೀಪಾದ ಹೆಗಡೆ ಎಷ್ಟು ಸಂಸ್ಥೆಗಳನ್ನು ಹಾಳು ಮಾಡಿದ್ದಾರೆ ಎನ್ನುವ ದಾಖಲೆಗಳು ನಮ್ಮ ಬಳಿ ಇದೆ. ಶೈಕ್ಷಣಿಕ ಸಂಸ್ಥೆ ಬೆಳವಣಿಗೆಗೆ ಅಡ್ಡಿಪಡಿಸುತ್ತಿರುವ ಶ್ರೀಪಾದ ಹೆಗಡೆ ಮತ್ತವರ ತಂಡದ ನಡೆಯನ್ನು ಖಂಡಿಸುತ್ತಿದ್ದೇನೆ. ಕಳೆದ ತಿಂಗಳು ಕಾಲೇಜಿಗೆ ಅನಾಮತ್ತಾಗಿ ಪ್ರವೇಶ ಮಾಡಿ ಪ್ರಾಚಾರ್ಯರ ಕುರ್ಚಿಯಲ್ಲಿ ಕುಳಿತು ಅಸಭ್ಯವಾಗಿ ವರ್ತಿಸಿದ್ದಾರೆ. ಶ್ರೀಪಾದ ಹೆಗಡೆ ನೇತೃತ್ವದಲ್ಲಿ ಕಟ್ಟಲಾದ ಬಿಎಡ್ ಕಾಲೇಜಿನ ನೂತನ ಕಟ್ಟಡ ಕಾಮಗಾರಿ ಸರ್ಕಾರಿ ಕಟ್ಟಡಗಳ ಕಾಮಗಾರಿಗಳಿಗಿಂತ ಕಳಪೆಯಾಗಿದೆ. ಹಿಂದಿನ ಸಮಿತಿ ಮೇಲೆ ಸಾಕಷ್ಟು ಭ್ರಷ್ಟಾಚಾರದ ಆರೋಪವಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.
ಸಂಸ್ಥೆಯ ಖಜಾಂಚಿ ಕವಲಕೋಡು ವೆಂಕಟೇಶ್ ಮಾತನಾಡಿ, ಎಂಡಿಎಫ್‌ಗೆ ಹರನಾಥ್‌ರಾವ್ ನೇತೃತ್ವದ ಹೊಸ ಸಮಿತಿ ಬಂದ ಮೇಲೆ ಒಂದಷ್ಟು ಸುಧಾರಣಾ ಕ್ರಮ ತರಲಾಗಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಶ್ರೀಪಾದ ಹೆಗಡೆ ಮತ್ತವರ ತಂಡ ಅನಗತ್ಯವಾಗಿ ಕಿರುಕುಳ ನೀಡುತ್ತಿದೆ. ಈ ಕಿರುಕುಳವನ್ನು ಖಂಡಿಸಿ ಜು. 14ರಂದು ಮಧ್ಯಾಹ್ನ 12ಕ್ಕೆ ಗಾಂಧಿ ಮೈದಾನದಿಂದ ಡಿವೈಎಸ್‌ಪಿ ಕಚೇರಿಯವರೆಗೆ ಎಲ್‌ಬಿ ಕಾಲೇಜು ಬೆಳಸಿ, ಸಹಕಾರಿ ಕ್ಷೇತ್ರ ಉಳಿಸಿ ಮತ್ತು ಶ್ರೀಪಾದ ಹೆಗಡೆ ನಿಸ್ರಾಣಿ ಅವರನ್ನು ಬಂಧಿಸಿ ಎಂಬ ಘೋಷವಾಕ್ಯದಡಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಗೋಷ್ಠಿಯಲ್ಲಿ ಎಚ್.ಎಂ.ರವಿಕುಮಾರ್, ಎಸ್.ಬಿ.ಮಹಾದೇವ್, ಶರಾವತಿ ಸಿ. ರಾವ್, ನಂದ ಗೊಜನೂರು, ಅಶ್ವಿನಿ ಕುಮಾರ್, ಶೈಲೇಂದ್ರ ಬಂದಗದ್ದೆ, ಬಸವರಾಜ ಗೌಡ, ಸತ್ಯನಾರಾಯಣ ಮಂಚಾಲೆ, ವೆಂಕಟಗಿರಿ, ರಾಜೇಶ್ ಕೆ.ಕೆ., ಕಲಸೆ ಚಂದ್ರಪ್ಪ ಇತರರು ಉಪಸ್ಥಿತರಿದ್ದರು.