ಬೆಂಗಳೂರು: ಮುರಿದು ಬೀಳುವ ಸ್ಥಿತಿಯಲ್ಲಿ ರುವ ಹಳೆಯ ಗೋಡೆಗಳು, ಇದರ ಪಕ್ಕದಲ್ಲೇ ಕಸದ ರಾಶಿ, ಮಳೆ ಬಂದರೆ ಸೋರುವ ಛಾವಣಿ, ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳು…..
ಇದು ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಂಡು ಬಂದ ಅವ್ಯವಸ್ಥೆ ದೃಶ್ಯಗಳು…. 300 ಹಾಸಿಗೆಗಳಿರುವ ಜಯನಗರ ಸಾರ್ವ ಜನಿಕ ಆಸ್ಪತ್ರೆಯಲ್ಲಿ ಪ್ರತಿದಿನ ಸಾವಿರಕ್ಕೂ ಅಧಿಕ ಹೊರ ರೋಗಿಗಳು, 100ಕ್ಕೂ ಹೆಚ್ಚಿನ ಒಳರೋಗಿ ಗಳು ಚಿಕಿತ್ಸೆಗೆ ಬರುತ್ತಾರೆ. ಆದರೆ, ಲೋಕೋ ಪಯೋಗಿ ವಿಭಾಗದ ನಿರ್ಲಕ್ಷ್ಯದಿಂದ ಆಸ್ಪತ್ರೆಯ ಕಟ್ಟಡಕ್ಕೆ ಮೂಲಭೂತ ಸೌಕರ್ಯ ಸಿಗದೇ ಶೋಚನೀಯ ಸ್ಥಿತಿ ಬಂದೊದಗಿದೆ. ಆಸ್ಪತ್ರೆಯ ಅವ್ಯವಸ್ಥೆಗಳ ಬಗ್ಗೆ ವೈದ್ಯಾಧಿಕಾರಿಗಳು ಹಲವು ಬಾರಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಅಧಿಕಾರಿಗಳಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಮತ್ತೂಂದೆಡೆ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಪಿಡಬ್ಯೂಡಿ ವಿಭಾಗದ ಕಚೇರಿಯತ್ತ ಸಿಬ್ಬಂದಿ ಹಾಗೂ ಅಧಿಕಾರಿಗಳು ಮುಖ ಮಾಡುತ್ತಿಲ್ಲ. ಆಸ್ಪತ್ರೆಯಲ್ಲಿ ಜನ ಸಾಮಾನ್ಯರಿಗೆ ಸೂಕ್ತ ಆರೋಗ್ಯ ಸೇವೆ ಒದಗಿಸುತ್ತಿದ್ದರೂ ಇದೀಗ ಕಟ್ಟಡದ ಅವ್ಯವಸ್ಥೆ ಕಂಡು ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.
ಅವ್ಯವಸ್ಥೆಯಲ್ಲೇ ರೋಗಿಗಳಿಗೆ ಚಿಕಿತ್ಸೆ: ಆಸ್ಪ ತ್ರೆಯ ಒಂದೊಂದು ಕೊಠಡಿಗಳ ಪರಿಸ್ಥಿತಿಯೂ ಭಿನ್ನವಾಗಿದ್ದು, ಅವ್ಯವಸ್ಥೆಯಲೇ ದಿನ ದೂಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಸ್ಪತ್ರೆಗೆ ದಾಖ ಲಾಗಿರುವ ಕೆಲ ರೋಗಿಗಳು ಆರೋಪಿಸಿದ್ದಾರೆ. ಬಹುತೇಕ ಗೋಡೆಗಳು ಬಿರುಕು ಬಿಟ್ಟಿದ್ದು, ಬೀಳುವ ಹಂತಗಳಲ್ಲಿವೆ. ಆಸ್ಪತ್ರೆ ಮುಂಭಾಗದಲ್ಲಿ ಮೇಲ್ಛಾವಣಿ ಕುಸಿಯುತ್ತಿದೆ. ಮೇಲ್ಛಾವಣಿಗಳಿಂದ ಮಣ್ಣು, ಸಿಮೆಂಟ್ ಸೋರಿಕೆಯಾಗಿ ಆಸ್ಪತ್ರೆಯಲ್ಲಿರುವ ರೋಗಿಗಳ ಕೊಠಡಿಗಳಲ್ಲಿ ದೂಳು ತುಂಬಿಕೊಂಡಿವೆ. ನಿರ್ವಹಣೆ ಇಲ್ಲದೇ ಅಲ್ಲಲ್ಲಿ ನೆಲ ಒಡೆದು ಹೋಗಿವೆ. ಇನ್ನು ಮಳೆ ಬಂದರೆ ಕೆಲ ಕೊಠಡಿಗಳಲ್ಲಿ ಛಾವಣಿ ಸೋರಿಕೆಯಾಗಿ ನೀರು ನಿಂತುಕೊಳ್ಳುತ್ತಿದೆ. ಆಸ್ಪತ್ರೆ ಹಿಂಭಾಗದಲ್ಲಿ ಕಸಗಳ ರಾಶಿ ಬಿದ್ದಿದ್ದು, ಇದನ್ನೂ ನಿರ್ವಹಣೆ ಮಾಡುತ್ತಿಲ್ಲ. ಆಸ್ಪತ್ರೆಯ ಕೆಲ ಕಿಟಕಿಗಳು ಒಡೆದು ಹೋಗಿವೆ. ಶೌಚಾಲಯಗಳಲ್ಲಿ ಶುಚಿತ್ವವಿಲ್ಲದೇ ದುರ್ವಾಸನೆಯಿಂದ ಕೂಡಿದ್ದು, ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಯ ಕೆಲ ಆವರಣಗಳಲ್ಲಿನ ಗೋಡೆಗಳು ಗೆದ್ದಲ ಹಿಡಿದು ಶಿಥಿಲಗೊಂಡಿವೆ. ರೂಂಗಳಲ್ಲಿ ಗೋಡೆಗೆ ಕೈಯಿಂದ ಬಡಿದರೆ ಮಣ್ಣು ಉದುರುತ್ತವೆ. ಹಲವು ವರ್ಷಗಳಿಂದ ಪೇಂಟಿಂಗ್ ಕಾಣದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಗೋಡೆಗಳ ಅಂದ ಹದಗೆಟ್ಟಿದೆ. ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಅವರ ಸಂಬಂಧಿಗಳು ಜೀವ ಕೈಯಲ್ಲಿ ಹಿಡಿದು ಬದುಕುವ ಸ್ಥಿತಿ ಎದುರಾಗಿದ್ದು, ಬಡ ಜನರು ಅನಿವಾರ್ಯ ಕಾರಣಗಳಿಂದ ಈ ಅವ್ಯವಸ್ಥೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉತ್ತಮ ಚಿಕಿತ್ಸೆಯಿದ್ದರೂ ನಿರ್ವಹಣೆಯಲ್ಲಿ ತೊಡಕು: ಆಸ್ಪತ್ರೆ ಕಟ್ಟಡ ನಿರ್ವಹಣೆಯಲ್ಲಿ ತೊಡಕು ಉಂಟಾಗಿರುವುದನ್ನು ಹೊರತುಪಡಿಸಿ ದರೆ ಉಳಿದಂತೆ ಆಸ್ಪತ್ರೆಯಲ್ಲಿ ನುರಿತ ತಜ್ಞ ವೈದ್ಯರು, ಅನುಭವಿ ಶುಶ್ರೂಷಕರು, ಅಗತ್ಯ ಸಿಬ್ಬಂದಿಯಿದ್ದಾರೆ. ಜ್ವರ, ದಂತ, ಮೂಳೆ, ಇಎನ್, ಸ್ತ್ರೀರೋಗ, ಚರ್ಮರೋಗ, ನೇತ್ರ ಚಿಕಿತ್ಸೆ ಹೀಗೆ ವಿವಿಧ ವಿಭಾಗಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 300 ಬೆಡ್‌ಗಳು, 6 ವೆಂಟಿಲೇಟರ್ ಸೌಲಭ್ಯವುಳ್ಳ ಐಸಿಯು, 8 ಎನ್‌ಐಸಿಯು, ಕಡಿಮೆ ದರದಲ್ಲಿ ಔಷಧ ಪೂರೈಸುವ ಜೆನರಿಕ್ ಔಷಧ ಮಳಿಗೆ, ಒಪಿಡಿಯಲ್ಲಿ ಹೆಚ್ಚುವರಿ ಕೌಂಟರ್‌ಗಳು ಸೇರಿದಂತೆ ವಿವಿಧ ಸವಲತ್ತು ಹೊಂದಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಸಂಪೂರ್ಣ ಉಚಿತ ಹಾಗೂ ಇತರೆ ರೋಗಿಗಳಿಗೆ ಶೇ.50ರಷ್ಟು ರಿಯಾಯಿತಿ ದರದಲ್ಲಿ ಸೇವೆ ದೊರೆಯಲಿದೆ.
ಕಟ್ಟಡ ಸರಿಪಡಿಸಿದರೆ ರೋಗಿಗಳಿಗೆ ಅನುಕೂಲ : ಬಡವರು, ಮಧ್ಯಮ ವರ್ಗದವರು, ಶ್ರೀಮಂತರೆನ್ನದೇ ಎಲ್ಲ ವರ್ಗದ ಸಾವಿರಾರು ಮಂದಿ ವಿವಿಧ ಕಾಯಿಲೆಗಳ ಚಿಕಿತ್ಸೆಗಾಗಿ ಜಯನಗರ ಜನರಲ್ ಆಸ್ಪತ್ರೆ ಮೊರೆ ಹೋಗುತ್ತಿದ್ದಾರೆ. ಆದರೆ, ಆಸ್ಪತ್ರೆಯ ಕಟ್ಟಡಗಳು ಪಾಳು ಬಿದ್ದ ಸ್ಥಿತಿಯಲ್ಲಿರುವುದರಿಂದ ವೈದ್ಯರು ಹಾಗೂ ರೋಗಿಗಳು ಪರದಾಡುವಂತಾಗಿದೆ. ಆದಷ್ಟು ಬೇಗ ಆಸ್ಪತ್ರೆಯ ಪಿಡಬ್ಲೂéಡಿ ವಿಭಾಗದ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿ ಈ ಆಸ್ಪತ್ರೆ ಕಟ್ಟಡ ನಿರ್ವಹಣೆ ಮಾಡಿದಲ್ಲಿ ಲಕ್ಷಾಂತರ ರೋಗಿಗಳಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಇಲ್ಲಿನ ವೈದ್ಯಾಧಿಕಾರಿ ಮೂಲಗಳು.
ಹಳೆಯ ಕಟ್ಟಡಗಳಾಗಿದ್ದರೂ ಈ ಆಸ್ಪತ್ರೆಯಲ್ಲಿ ಉತ್ತಮ ಸೇವೆಗಳು ಸಿಗುತ್ತಿವೆ. ಆದರೆ, ಆಸ್ಪತ್ರೆಯ ಪಿಡಬ್ಲೂéಡಿ ವಿಭಾಗವು ಆಸ್ಪತ್ರೆ ಕಟ್ಟಡವನ್ನು ಸೂಕ್ತ ನಿರ್ವಹಣೆ ಮಾಡುವ ಅಗತ್ಯವಿದೆ. ಸದ್ಯ ಇಲ್ಲಿನ ಪಿಡಬ್ಲ್ಯೂಡಿ ವಿಭಾಗವು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತಿದೆ.
●ಹರ್ಷ ಗರುಡನಗಿರಿ, ಮಾಜಿ ಅಧ್ಯಕ್ಷ, ಸಂದರ್ಶಕ ಸಮಿತಿ, ಜಯನಗರ ಸಾರ್ವಜನಿಕ ಆಸ್ಪತ್ರೆ
-ಅವಿನಾಶ ಮೂಡಂಬಿಕಾನ