ವಿಜಯಪುರ : ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ನಡೆಸಿದ್ದ ಹೋರಾಟಕ್ಕೆ ಸರ್ಕಾರ ನಮ್ಮ ಮೂಗಿಗೆ ತುಪ್ಪ ಸವರಿಲ್ಲ, ತಲೆಗೇ ತುಪ್ಪ ಸವರುವ ಕೆಲಸ ಮಾಡಿದೆ. ಹೀಗಾಗಿ ಇನು ಎರಡು ದಿನಗಳಲ್ಲಿ ಈ ಬಗ್ಗೆ ನಮ್ಮ ಮುಂದಿನ ನಡೆ ಏನೆಂದು ನಿರ್ಧರಿಸುತ್ತೇವೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.
ಶನಿವಾರ ನಗರದ ಜ್ಞಾನಯೋಗಾಶ್ರಮದಲ್ಲಿ ಆನಾರೋಗ್ಯ ಪೀಡಿದ ಸಿದ್ಧೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಸರ್ಕಾರದ ಹೊಸ ಮೀಸಲಾತಿ ಬಗ್ಗೆ ಬೆಳಗಾವಿಯಲ್ಲಿ ಎರಡು ದಿನಗಳಲ್ಲೇ ರಾಜ್ಯ ಮಟ್ಟದ ಪಂಚಮಸಾಲಿ ಕಾರ್ಯಕಾರಣಿ ಸಭೆ ಕರೆದು ಚರ್ಚಿಸುತ್ತೇವೆ. ಸರ್ಕಾರ ಪ್ರಕಟಿಸಿರುವ ಮೀಸಲಾತಿ ಸ್ವೀಕರಿಸಬೇಕೋ, ಬೇಡವೋ ಎಂದು ಸ್ಪಷ್ಟ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದರು.
ಸರ್ಕಾರ ನಮ್ಮ ಮೂತಿಗೆ ತುಪ್ಪ ಸವರಿದ್ದರೆ ವಾಸನೆಯನ್ನಾದರೂ ತಿಳಿಯಲು ಸಾಧ್ಯವಿತ್ತು. ಆದರೆ ಸರ್ಕಾರ ನಮ್ಮ ತಲೆಗೇ ತುಪ್ಪ ಸವರಿದ್ದರಿಂದ ಏನೆಂದು ತಿಳಿಯದಾಗಿದೆ ಗೊಂದಲ ಸೃಷ್ಟಿಯಾಗಿದೆ ಎಂದು ಸರ್ಕಾರದ ನಡೆಗೆ ಅತೃಪ್ತಿ ವ್ಯಕ್ತಪಡಿಸಿದರು.
ಡಿ.29 ಕ್ಕೆ ಮೀಸಲಾತಿ ಪ್ರಕಟಿಸಿರುವ ಸರ್ಕಾರ, ಎಲ್ಲ ಲಿಂಗಾಯತರನ್ನು ಹೊಸದಾಗಿ ಸೃಷ್ಟಿಸಿರುವ 2ಡಿ ಪ್ರವರ್ಗದ ಅಡಿಯಲ್ಲಿ ತಂದಿದ್ದಾಗಿ ಹೇಳಿದೆ. ನಮ್ಮ ಹೋರಾಟದಿಂದ ಎಲ್ಲ ಪಂಚಮಸಾಲಿ ಮಾತ್ರವಲ್ಲ ಇತರರಿಗೂ ಒಳಿತಾಗಿದೆ ಎಂದು ಸ್ವಾಗತಿಸುತ್ತೇವೆ ಎಂದರು.
ಕಳೆದ 2 ವರ್ಷಗಳಿಂದ ಮನೆ-ಮಠಗಳನ್ನು ಬಿಟ್ಟು 2ಎ ಮೀಸಲಾತಿಗೆ ಹೋರಾಡುತ್ತಿರುವ ಪಂಚಮಸಾಲಿ ಸಮಾಜಕ್ಕೆ ಸಿಕ್ಕ ಮೀಸಲಾತಿ ಎಷ್ಟು ಎಂದು ನಿಖರವಾಗಿ ತಿಳಿಸದೇ ಪಂಚಮಸಾಲಿಗರನ್ನು ಕತ್ತಲಲ್ಲಿ ಇರಿಸಿದೆ. ನಮ್ಮ ದುಡಿಮೆಗೆ ತಕ್ಕಂತೆ ಸರ್ಕಾರ ಪ್ರತಿಫಲ ಕೊಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.