Advertisement

ಜಯಮಾಲಾ ಪರ ತೇಜಸ್ವಿನಿ ಗೌಡ ಬ್ಯಾಟಿಂಗ್‌

11:49 AM Jul 04, 2018 | Team Udayavani |

ವಿಧಾನಪರಿಷತ್ತು: ಸಭಾನಾಯಕಿಯಾಗಿ ನೇಮಕಗೊಂಡಿರುವ ಸಚಿವೆ ಡಾ.ಜಯಾಮಾಲ ಅವರನ್ನು ಬೆಂಬಲಿಸಿ ಮಾತನಾಡಿದ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ, “ಹೆಣ್ಣಿಗೆ ಜವಾಬ್ದಾರಿ ಕೊಟ್ಟರೆ, ಅದನ್ನು ಆಕೆ ಸಮರ್ಥವಾಗಿ ನಿಭಾಯಿಸುತ್ತಾಳೆ. ಹಾಗಾಗಿ ನಾನು ಸಹೋದರಿ ಜಯಾಮಾಲ ಅವರನ್ನು ಅಭಿನಂದಿಸುತ್ತೇನೆ ಮತ್ತು ಬೆಂಬಲಿಸುತ್ತೇನೆ’ ಎಂದು ಹೇಳಿದರು.

Advertisement

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿ, ಎಲ್ಲರೂ ರಾಜಕಾರಣದ ಹಿನ್ನೆಲೆಯ ಕುಟುಂಬದಲ್ಲಿ ಹುಟ್ಟಿ ಬರುವುದಿಲ್ಲ. ಪ್ರತಿಭೆ, ಅಧ್ಯಯನ ಮತ್ತು ಜ್ಞಾನ ಯಾರ ಸ್ವತ್ತೂ ಅಲ್ಲ. ಬೇರೆ ಕ್ಷೇತ್ರದಲ್ಲಿ ಎತ್ತರದ ಸಾಧನೆ ಮಾಡಿದ ಒಬ್ಬ ಮಹಿಳೆಯನ್ನು ಸಭಾನಾಯಕಿ ಸ್ಥಾನಕ್ಕೆ ನೇಮಕ ಮಾಡಿರುವಾಗ ಎಲ್ಲರೂ ತಾಳ್ಮೆಯಿಂದ ಇದ್ದು ಸಹಕರಿಸಬೇಕು ಎಂದು ಹೇಳುವ ಮೂಲಕ ಜಯಾಮಾಲ ಅವರ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದ ಕೆಲ ಕಾಂಗ್ರೆಸ್‌ ಸದಸ್ಯರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.

ರಾಜಕೀಯದಲ್ಲಿ ಮಹಿಳೆಯರು “ಅಳಿವಿನಂಚಿನಲ್ಲಿರುವ ಪಳೆಯುಳಿಕೆಗಳು’ ಇದ್ದಂತೆ. ಸ್ಥಳೀಯ ಮಟ್ಟದಲ್ಲಿ ಮಹಿಳೆಯರಿಗೆ ಒಂದಿಷ್ಟು ಅವಕಾಶಗಳು ಸಿಗುತ್ತಿವೆ. ಆದರೆ, ಶಾಸನಸಭೆಗಳಲ್ಲಿ ಈಗಲೂ ಕಷ್ಟ. ಮಹಿಳೆಯರಿಗೆ ಮೀಸಲಾತಿ ನೀಡುವ ಬಗ್ಗೆ ಚರ್ಚೆಗಳು ಆಗುತ್ತವೆ. ಆದರೆ, ಒಟ್ಟು ಜನಸಂಖ್ಯೆಯಲ್ಲಿ ಶೇ.50ರಷ್ಟಿರುವ ಮಹಿಳೆಯರಲ್ಲಿ ತಮಗೆ ಬೇಕಾದವರನ್ನು ಆಯ್ಕೆ ಮಾಡುವ ತಿಳುವಳಿಕೆ, ಜಾಗೃತಿ ಮೂಡಿದರೆ ಮೀಸಲಾತಿ ಅವಶ್ಯಕತೆ ಬೀಳುವುದಿಲ್ಲ ಎಂದರು. 

ಇದಕ್ಕೂ ಮೊದಲ ಮಾತನಾಡಿದ ಬಿಜೆಪಿಯ ಎಂ.ಕೆ. ಪ್ರಾಣೇಶ್‌, 20 ಮಂದಿ ಪತ್ರ ಬರೆದು ಜಯಾಮಾಲ ಅವರನ್ನು ಸಭಾನಾಯಕಿ ಸ್ಥಾನದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿರುವುದು ಸರಿಯಲ್ಲ ಎಂದರು. ಇದಕ್ಕೆ ಕಾಂಗ್ರೆಸ್‌ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿ ಸದಸ್ಯರು ಆಧಾರರಹಿತ ಆರೋಪ ಮಾಡಿ ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಸಿ.ಎಂ.ಇಬ್ರಾಹೀಂ ಹೇಳಿದರು.

20 ಮಂದಿ ರಾಜ್ಯಸಭಾ ಸದಸ್ಯರನ್ನು ಕೇಂದ್ರ ಸರ್ಕಾರದಲ್ಲಿ ಮಂತ್ರಿ ಮಾಡಲಾಗಿದೆ. ಅದೇ ರೀತಿ ವಿಧಾನಪರಿಷತ್‌ ಸದಸ್ಯರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಮಂತ್ರಿ ಸ್ಥಾನ ಕೊಡುವಂತೆ ಮನವಿ ಮಾಡಿ ಬರೆದ ಪತ್ರ ಅದು ಎಂದು ಧರ್ಮಸೇನಾ ಸ್ಪಷ್ಟನೆ ನೀಡಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next