Advertisement
ಅವರು ರವಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೈತರ ದಿನಾಚರಣೆ ಮತ್ತು ರೈತ ಜನ ಸಂಪರ್ಕ ಸಭೆಯಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು. ಎಲ್ಲ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸುವಂತೆ ತಿಳಿಸಿ, ರೈತರಿಗೆ ಈ ಕುರಿತು ವಿಎಗಳು ಮಾಹಿತಿ ನೀಡುವಂತೆ ಸೂಚಿಸಿದರು. ಜಲಾನಯನ ಯೋಜನೆಯ ಅವ್ಯವ ಹಾರದ ಬಗ್ಗೆ ಡಿಸಿ ತನಿಖೆ ನಡೆಸಲಾಗು ವುದು ಎಂದು ಸಚಿವೆ ಉತ್ತರಿಸಿದರು.
ಕಬ್ಬು ಬೆಳೆಯಲು ಸಿದ್ಧರಿದ್ದು ಕಾರ್ಖಾನೆಯ ಆವಶ್ಯಕತೆಯಿದೆ ಎಂದು ರೈತರು ತಿಳಿಸಿದರು. ಈಗಾಗಲೇ 2,800 ರೈತರು ಒಪ್ಪಿಗೆ ಪತ್ರ ನೀಡಿದ್ದಾರೆಂದು ರೈತ ಸಂಘದ ನಾಯಕರು ತಿಳಿಸಿದರು. ಕಾರ್ಖಾನೆ ಪುನಶ್ಚೇತನ ಮಾಡುವ ಬದಲು ಮರು ನಿರ್ಮಾಣ ಮಾಡಬೇಕು ಎಂದು ರೈತರು ಕೋರಿದರು. ಎರಡು ಸಭೆಗಳನ್ನು ಈ ಉದ್ದೇಶಕ್ಕಾಗಿ ನಡೆಸಲಾಗಿದೆ ಎಂದು ಸಚಿವೆ ಉತ್ತರಿಸಿದರು. ವಾರಾಹಿ ಯೋಜನೆ
ವಾರಾಹಿ ಯೋಜನೆ ಪ್ರಗತಿ ಕುರಿತು ಉತ್ತರಿಸಿದ ಅಧಿಕಾರಿಗಳು, ಬಲದಂಡೆ ಯೋಜನೆಗೆ ಅಂತಿಮ ಅನುಮೋದನೆ ಬಾಕಿ ಇದೆ. 2019ರಲ್ಲಿ ಆರಂಭಿಸಲಾಗುವುದು ಎಂದರು. ಬಿಲ್ಲಾಡಿ ಬಳಿ ಕಾಲುವೆ ನಡುವೆ ಬಂಡೆ ಒಡೆಯದೆ 3 ಗ್ರಾಮಗಳಿಗೆ ನೀರು ದೊರೆಯುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. ಶೀಘ್ರ ಬಂಡೆ ಒಡೆದು ನೀರು ಒದಗಿಸುವಂತೆ ಸಚಿವರು ಸೂಚಿಸಿದರು.
Related Articles
ಹಾಲಾಡಿ ಗ್ರಾ.ಪಂ.ನಲ್ಲಿ ಜಲಾನಯನ ಇಲಾಖೆ ಯೋಜನೆಯಲ್ಲಿ ಅವ್ಯವಹಾರವಾಗಿದೆ ಎಂದು ವಿಕಾಸ್ ಹೆಗ್ಡೆ ಆರೋಪಿಸಿದರು. ಕಟ್‌ಬೆಲೂರಿನಲ್ಲಿ ಅಧಿಕಾರಿಗಳೇ ಗುತ್ತಿಗೆ ನಡೆಸುತ್ತಿದ್ದಾರೆಂದು ಆರೋಪಿಸಲಾಯಿತು. ತೆಂಗಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು, ಕೊಬ್ಬರಿ ಖರೀದಿ ಕೇಂದ್ರ ಆರಂಭಿಸಬೇಕೆಂದು ಯಡ್ತಾಡಿ ಸತೀಶಕುಮಾರ್ ಶೆಟ್ಟಿ ಒತ್ತಾಯಿಸಿದರು. ಅಡಿಕೆ ಮರ ಹಾನಿಗೆ ಕಡಿಮೆ ಪರಿಹಾರ ಕೊಟ್ಟಿದ್ದಾರೆಂದು ಅಂಪಾರು ಉಮೇಶ್ ಶೆಟ್ಟಿ ಅಸಮಾಧಾನ ಸೂಚಿಸಿದರು. ಡೀಮ್ಡ್ ಅರಣ್ಯ ಪ್ರದೇಶದ ಕೃಷಿಕರಿಗೆ ಸೌಲಭ್ಯ ದೊರಕುತ್ತಿಲ್ಲ ಎಂದು ಹದ್ದೂರು ರಾಜೀವ ಶೆಟ್ಟಿ ಗಮನ ಸೆಳೆದರು. ಸಂಪಿಗೇಡಿ ಸಂಜೀವ ಶೆಟ್ಟಿ ಅವರ ಆರೋಪಕ್ಕೆ ಉತ್ತರಿಸಿದ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ ಅಡಿಕೆ ಹಾನಿ ಸಂಬಂಧ ತಾಂತ್ರಿಕ ಕಾರಣದಿಂದ ಆಗಿರುವ ವಿಳಂಬವನ್ನು ಡಿ. 31ರೊಳಗೆ ಸರಿಪಡಿಸುತ್ತೇವೆ ಎಂದರು.
Advertisement
ರೈತರ ಸಮಸ್ಯೆ ಪರಿಹಾರಕ್ಕೆ ಪಕ್ಷಾತೀತ ಪ್ರಯತ್ನ: ಡಾ| ಜಯಮಾಲಾರೈತರ ಸಮಸ್ಯೆಗಳ ಪರಿಹಾರಕ್ಕೆ ಪಕ್ಷಾತೀತವಾಗಿ ಪ್ರಯತ್ನ ನಡೆಸುವುದಾಗಿ ಸಚಿವೆ ಡಾ| ಜಯಮಾಲಾ ರೈತ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತ ಹೇಳಿದ್ದಾರೆ. ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್ ಮಾತನಾಡಿ, ಪ್ರಾಮಾಣಿಕವಾಗಿ ಸಾಲ ಮರುಪಾವತಿಸುವ ಜಿಲ್ಲೆಯ ರೈತರಿಗೂ ಸಾಲ ಮನ್ನಾ ಯೋಜನೆ ಸೌಲಭ್ಯ ಸಿಗಬೇಕು. ಜತೆಗೆ ಇತರ ಪ್ರೋತ್ಸಾಹಕ ಯೋಜನೆಗಳನ್ನು ಜಾರಿಗೊಳಿಸಬೇಕು. ರೈತರು ಕಾಡುಪ್ರಾಣಿ ಹಾವಳಿಯಿಂದ ತತ್ತರಿಸಿದ್ದಾರೆ. ವಾರಾಹಿ ನೀರಿನ ಯೋಜನೆ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಬೇಕಿದೆ ಎಂದರು. ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿ.ಪಂ. ಸಿಇಒ ಸಿಂಧು ರೂಪೇಶ್, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಸ್ಥಾಯೀ ಸಮಿತಿ ಅಧ್ಯಕ್ಷ ಉದಯ ಕೋಟ್ಯಾನ್, ಸದಸ್ಯರಾದ ಜನಾರ್ದನ ತೋನ್ಸೆ, ಮೈರ್ಮಾಡಿ ಸುಧಾಕರ ಶೆಟ್ಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕುಂದಾಪುರದ ಪ್ರಭಾಕರನ್, ಕಾರ್ಕಳ ವನ್ಯಜೀವಿ ವಿಭಾಗದ ಗಣೇಶ ಭಟ್, ಸಹಾಯಕ ಕಮಿಷನರ್ ಭೂಬಾಲನ್, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಬಿ.ವಿ. ಪೂಜಾರಿ ಪೆರ್ಡೂರು ಮೊದಲಾದ ರೈತ ಮುಖಂಡರು ಉಪಸ್ಥಿತರಿದ್ದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಸ್ವಾಗತಿಸಿ ಉಪ ನಿರ್ದೇಶಕ ಚಂದ್ರಶೇಖರ್ ನಾಯ್ಕ ವಂದಿಸಿದರು. ಸಹಾಯಕ ನಿರ್ದೇಶಕ ಮೋಹನ್ ರಾಜ್ ನಿರೂಪಿಸಿದರು.
ರೈತ ಮುಖಂಡರ ಆಕ್ಷೇಪ
ಸಭೆ ಆರಂಭವಾಗುತ್ತಿದ್ದಂತೆ ಸಂಘಟಕರು ಕೃಷಿ ಸಂಘಟನೆಗಳ ಮುಖ್ಯಸ್ಥರನ್ನು ಒಬ್ಬೊಬ್ಬರಾಗಿ ಕರೆಯುತ್ತಿದ್ದಂತೆ ಕೇವಲ ಅಧಿಕಾರಿಗಳ ಸಭೆ ನಡೆಯುತ್ತಿದೆ ಎಂದು ರೈತರು ಆಕ್ಷೇಪಿಸಿದರು. ಕೊನೆಗೆ ಎಲ್ಲ ಕೃಷಿ ಸಂಘಟನೆಗಳ ಅಧ್ಯಕ್ಷರು ವೇದಿಕೆಗೆ ಬರಬೇಕೆಂದು ವಿನಂತಿಸಲಾಯಿತು.