ನಿರ್ದೇಶನ ಮಾಡಬೇಕೆಂಬುದು ಗೀತರಚನೆಕಾರ ಹೃದಯಶಿವ ಅವರ ಕೆಲವು ವರ್ಷಗಳ ಕನಸು. ಬಹಳ ದಿನಗಳಿಂದ ನಿರ್ದೇಶಕನ ಮಾಡಬೇಕೆಂಬ ತಮ್ಮ ಕನಸಿನ ಬಗ್ಗೆ ಹೇಳಿಕೊಳ್ಳುತ್ತಿದ್ದ ಹೃದಯಶಿವ, ಆ ಕುರಿತು ಒಂದೆರೆಡು ಪ್ರಯತ್ನಗಳನ್ನೂ ಮಾಡಿದ್ದರು. ಆದರೆ, ಆ ಪ್ರಯತ್ನಗಳ ಯಶಸ್ವಿಯಾಗಿರಲಿಲ್ಲ. ಈಗ ಹೃದಯಶಿವ ತಮ್ಮ ನಿರ್ದೇಶನದ ಮೊದಲ ಚಿತ್ರವನ್ನು ಸದ್ದಿಲ್ಲದೆ ಮುಗಿಸಿದ್ದಾರೆ.
ಹೌದು, ಹೃದಯಶಿವ ಸದ್ದಿಲ್ಲದೆ “ಜಯಮಹಲ್’ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಇನ್ನು, ನೀನಾಸಂ ಅಶ್ವತ್ಥ್ ಅವರು ಪ್ರಾಂಶುಪಾಲ ಪಾತ್ರದಲ್ಲಿ ನಟಿಸಿದ್ದು, ವಾಸ್ತವತೆಯನ್ನು ನಂಬುವ, ವಾದಿಸುವ ಮತ್ತು ಸಂಪ್ರದಾಯಸ್ಥನಾಗಿರುವ ಮೂರು ಶೇಡ್‌ಗಳಲ್ಲಿ ನಟಿಸಿದ್ದಾರೆ. ಶುಭಾ ಪೂಂಜಾ ಇಲ್ಲಿ ಗೃಹಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಅವರದು ವಿದೇಶದಿಂದ ಭಾರತಕ್ಕೆ ಮರಳುವ ಪಾತ್ರವಂತೆ.
ಇನ್ನು ಕರಿಸುಬ್ಬು ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಹೃದಯಶಿವ ನಿರ್ದೇಶಿಸಿರುವುದಷ್ಟೇ ಅಲ್ಲ, ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ರಚಿಸಿದ್ದಾರೆ. ವಿಶೃಷವೆಂದರೆ, ಅವರು ಚಿತ್ರದ ಸಂಭಾಷಣೆ ಬರೆದಿದ್ದು ಕಬ್ಬನ್‌ಪಾರ್ಕ್‌ನಲ್ಲಿ. ಅಷ್ಟೇ ಅಲ್ಲ, ಚಿತ್ರಕತೆ ಬರೆದಿದ್ದು ಲಾಲ್‌ಬಾಗ್‌ನಲ್ಲಿ. ಸಿನಿಮಾ ಕುರಿತಂತೆ ಸಾಕಷ್ಟು ಚರ್ಚೆಗಳನ್ನೆಲ್ಲ ನಡೆಸಿದ್ದು ಸಹ ಪಾರ್ಕ್‌ಗಳಲ್ಲಿ ಅನ್ನುವುದು ವಿಶೇಷ.
ಈ ಚಿತ್ರವು ಕನ್ನಡವಲ್ಲದೆ ತಮಿಳಿನಲ್ಲೂ ಏಕಕಾಲಕ್ಕೆ ನಿರ್ಮಾಣವಾಗಿದ್ದು, “ಮಾತಂಗಿ’ ಹೆಸರಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ನಾಗಾರ್ಜುನ್ ಅವರು ಛಾಯಾಗ್ರಹಣ ಮಾಡಿದರೆ, ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರವನ್ನು ಹೃದಯಶಿವ ಅವರ ಸ್ನೇಹಿತರಾದ ಮೋಟಕಾನಹಳ್ಳಿ ಎಂ.ರೇಣುಕ ಸ್ವರೂಪ್ ಎನ್ನುವವರು ನಿರ್ಮಿಸಿದ್ದಾರೆ. ಚಿತ್ರ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ.