ಮುಂಬಯಿ: ಕರಾವಳಿಯ ಅಭಿವೃದ್ಧಿಗಾಗಿ ಸೇವಾ ನಿರತವಾಗಿ, ಮಹಾನಗರದಲ್ಲಿ ವಿವಿಧ ಜಾತೀಯ ಸಂಘಟನೆಗಳ ಪ್ರಮುಖರು ಕ್ರಿಯಾಶೀಲ ರಾಗಿರುವ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 21ನೇ ವಾರ್ಷಿಕ ಮಹಾಸಭೆ ನ. 5ರಂದು ಸಂಜೆ ಕುರ್ಲಾ ಪೂರ್ವ ಬಂಟರ ಭವನದ ಅನೆಕ್ಸ್ ಸಭಾಗೃಹದಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಹಾಗೂ ಅಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿತು.
ಈ ಸಂದರ್ಭ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಉದ್ಯಮಿ, ಸಮಾಜ ಸೇವಕ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಾಜಿ ಅಧ್ಯಕ್ಷ ಎಲ್. ವಿ. ಅಮೀನ್ ಅವರನ್ನು ಸವಾರ್ನುಮತದಿಂದ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರನ್ನು ನಿರ್ಗಮನ ಅಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿ ಅವರು ಪುಷ್ಪಗುತ್ಛ ನೀಡಿ ಅಭಿನಂದಿಸಿ ಸ್ವಾಗತಿಸಿದರು.
ಎಲ್. ವಿ. ಅಮೀನ್:
ಮೂಲತಃ ಮಂಗಳೂರಿನ ಬಜಪೆಯವ ರಾದ ಎಲ್. ವಿ. ಅಮೀನ್ 1970ರಲ್ಲಿ ಬಜಪೆಯ ಸೈಂಟ್ ಜೋಸೆಫ್ ಪ್ರೀ ಯುನಿ ವರ್ಸಿಟಿ ಕಾಲೇಜಿನಲ್ಲಿ ಶಿಕ್ಷಣ ಪಡೆದು ಮುಂಬಯಿ ಸೇರಿದರು. 1972ರಲ್ಲಿ ಮುಂಬಯಿಯ ದಾದರ್ ಎಂಜಿನಿಯರಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಮೆಕಾನಿಕಲ್ ಡ್ರಾಫ್ಟ್ ಮೇನ್ ಪದವಿ ಗಳಿಸಿದರು. 1974ರಲ್ಲಿ ಅಂಬಿಕಾ ಗ್ರೂಫ್ ಆಫ್ ಕಂಪೆನಿಯನ್ನು ಸ್ಥಾಪಿಸಿ ತನ್ನ ಉದ್ಯಮವನ್ನು ಮುಂಬಯಿ ಮಾತ್ರವಲ್ಲದೆ ಗುಜರಾತ್‌ಗೂ ಪಸರಿಸಿದರು. ರಾಜಕೀಯದಲ್ಲೂ ಕ್ರಿಯಾಶೀಲರಾಗಿರುವ ಅಮೀನರು ಬಿಜೆಪಿಯಲ್ಲಿ 1980ರಿಂದ ವಿವಿಧ ಜವಾಬ್ದಾರಿಯನ್ನು ಹೊಂದಿ ಸಮಾಜ ಸೇವೆ ಮಾಡುತ್ತಿದ್ದಾರೆ.
ದೀರ್ಘಕಾಲದಿಂದ ಬಿಲ್ಲವರ ಅಸೋಸಿ ಯೇಶನ್ ಮುಂಬಯಿ ಇದರಲ್ಲಿ ಕಾರ್ಯ ನಿರತರಾಗಿರುವ ಎಲ್. ವಿ. ಅಮೀನ್ ಭಾರತ್ ಬ್ಯಾಂಕ್‌ನ ನಿರ್ದೇಶಕರಾಗಿಯೂ ಕನ್ನಡ ಸಂಘ ಸಂತಾಕ್ರೂಜ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಉಪಾಧ್ಯಕ್ಷರಾಗಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಇವರು ಬಜಪೆ ದೊಡ್ಡಿಕಟ್ಟೆ ಶ್ರೀ ಸ್ವಯಂಭೂಲಿಂಗೇಶ್ವರ ಕ್ಷೇತ್ರದ ಅಧ್ಯಕ್ಷರಾಗಿ, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಬಜ್ಪೆ ಕರಂಬಾರ್ ಇದರ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ನಗರದ ಮಾತ್ರವಲ್ಲದೆ ನಾಡಿನ ಅನೇಕ ಸಂಘಟನೆಗಳು ಇವರನ್ನು ಗೌರವಿಸಿವೆ. ಇವರ ಸಾಧನೆಗಳಿಗೆ ಸಮಾಜರತ್ನ ಪುರಸ್ಕಾರ, ಭಾರತ ಜ್ಯೋತಿ ಪ್ರಶಸ್ತಿ, ಸುವರ್ಣ ಕನ್ನಡಿಗ ಪುರಸ್ಕಾರ, ಸಮಾಜ ಭೂಷಣ ಪ್ರಶಸ್ತಿ, ಯಶಸ್ವಿ ಸಂಧಾನಕಾರ, ಚಾರ್ಕೋಪ್ ಕನ್ನಡಿಗರ ಬಳಗದಿಂದ ಪ್ರಶಸ್ತಿ, ಏಶಿಯಾ ಸ್ಪೆಸಿಫಿಕ್ ಅವಾರ್ಡ್ ಇನ್ನಿತರ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.