ದಾವಣಗೆರೆ: ದಾವಣಗೆರೆಯ ವಿರಕ್ತ ಮಠ ಕೊಡ ಮಾಡುವ ಪ್ರತಿಷ್ಠಿತ ಜಯದೇವಶ್ರೀ ಪ್ರಶಸ್ತಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಜು. 12 ರಿಂದ 14 ರ ವರೆಗೆ ಶಿವಯೋಗಿ ಮಂದಿರ ಆವರಣದಲ್ಲಿ ನಡೆಯುವ ಬಸವ ಚೇತನ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 65ನೇ ಸ್ಮರಣೋತ್ಸವ ಮತ್ತು ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಸಿದ್ದರಾಮಯ್ಯ ಅವರನ್ನು ಜಯದೇವಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು
ಜು. 12 ರ ಮಂಗಳವಾರ ಸಂಜೆ 6.30 ಕ್ಕೆ ನಡೆಯುವ ಸಾಧಕರ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ 50 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ. ಡಾ. ಶಿವಮೂರ್ತಿ ಮುರುಘಾ ಶರಣರು ಸಮಾರಂಭದ ಅಧ್ಯಕ್ಷತೆ ವಹಿಸುವರು.
ಇದನ್ನೂ ಓದಿ: ಜು.7ರಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಎರಡನೇ ವಿವಾಹ, ಆಪ್ತರಿಗೆ ಆಹ್ವಾನ
ಸಿದ್ದರಾಮಯ್ಯ ಅವರೊಂದಿಗೆ ವಿಧಾನ ಪರಿಷತ್ ನ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರಿಗೆ ಶೂನ್ಯಪೀಠ ಅಲ್ಲಮ ಪ್ರಶಸ್ತಿ, ಹರಿಹರದ ಸಾಹಿತಿ ಪ್ರೊ. ಎಚ್.ಎಂ. ಭಿಕ್ಷಾವರ್ತಿಮಠ್ ಅವರಿಗೆ ಶೂನ್ಯಪೀಠ ಚನ್ನಬಸವ ಪ್ರಶಸ್ತಿ, ಹಾವೇರಿ ಜಿಲ್ಲೆ ಹೊಸರಿತ್ತಿಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ಚೆನ್ನಮ್ಮ ಹಳ್ಳಿಕೇರಿ ಅವರಿಗೆ ಶೂನ್ಯಪೀಠ ಅಕ್ಕನಾಗಮ್ಮ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶೂನ್ಯಪೀಠ ಅಲ್ಲಮ ಪ್ರಶಸ್ತಿ 50 ಸಾವಿರ ನಗದು ಹೊಂದಿದೆ. ಶೂನ್ಯಪೀಠ ಚನ್ನಬಸವ ಮತ್ತು ಶೂನ್ಯಪೀಠ ಅಕ್ಕನಾಗಮ್ಮ ಪ್ರಶಸ್ತಿ 25 ಸಾವಿರ ನಗದು ಬಹುಮಾನ ಹೊಂದಿದೆ. ಈ ಹಿಂದೆ ಜಯದೇವಶ್ರೀ ಮತ್ತು ಶೂನ್ಯಪೀಠ ಅಲ್ಲಮ ಪ್ರಶಸ್ತಿ 25 ಸಾವಿರ ನಗದು ಹೊಂದಿದ್ದವು. ಈ ವರ್ಷದಿಂದ ಎರಡೂ ಪ್ರಶಸ್ತಿಗಳ ಮೊತ್ತವನ್ನು ದ್ವಿಗುಣಗೊಳಿ ಸಲಾಗಿದೆ ಎಂದು ತಿಳಿಸಿದರು.
ಶಿವಯೋಗಿ ಮಂದಿರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಜಯದೇವ ಸಾಂಸ್ಕೃತಿಕ ಭವನದಲ್ಲಿ ಸ್ಮರಣೋತ್ಸವ, ಶರಣ ಸಂಸ್ಕೃತಿ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.