ಕಲಬುರಗಿ: ಬಿಪಿಎಲ್ ಹಾಗೂ ಯಶಸ್ವಿನಿ ಕಾರ್ಡುದಾರರಿಗೆ ಜತೆಗೆ ಎಸ್‌ಸಿ, ಎಸ್ಟಿ ಜನಾಂಗದವರಿಗೆ ಸಂಪೂರ್ಣ ಉಚಿತ ಹೃದ್ರೋಗದ ಚಿಕಿತ್ಸೆ ನೀಡುವ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪನೆಯಿಂದ ಈ ಭಾಗದ ಜನರಿಗೆ ಭಾಗ್ಯದ ಬಾಗಿಲು ತೆರೆದಂತಾಗಿದ್ದು, ಹೃದ್ರೋಗಿಗಳಿಗೆ ವರದಾನವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ, ಹೃದ್ರೋಗ ಹಾಗೂ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ| ಸಿ.ಎನ್. ಮಂಜುನಾಥ ಹೇಳಿದರು.
ಹಿಂದುಳಿದ ಹೈದ್ರಾಬಾದ ಕರ್ನಾಟಕ ಭಾಗದ ಜನರು ಹೃದ್ರೋಗದ ಸಲುವಾಗಿ ದೂರದ ಮಹಾರಾಷ್ಟ್ರದ ಸೊಲ್ಲಾಪುರ, ತೆಲಂಗಾಣದ ಹೈದ್ರಾಬಾದ ಹಾಗೂ ಬೆಂಗಳೂರಿಗೆ ಬರುವುದನ್ನು ತಪ್ಪಿಸಲು ಒಂಭತ್ತು ತಿಂಗಳ ಹಿಂದೆ ಕಲಬುರಗಿಯಲ್ಲಿ ಸುಸಜ್ಜಿತ ಶಾಖೆ ತೆರೆಯಲಾಗಿದೆ. ಈ ಅವಧಿಯಲ್ಲಿಯೇ 17000 ಹೊರ ರೋಗಿಗಳ ಹಾಗೂ 2000 ಒಳರೋಗಿಗಳ ಚಿಕಿತ್ಸೆ ನಡೆಸಲಾಗಿದೆ.
ಇದು ಆಸ್ಪತ್ರೆಯ ಸೇವಾ ಗುಣಮಟ್ಟ ನಿರೂಪಿಸುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೆಂಗಳೂರು ಮಾದರಿಯಲ್ಲಿಯೇ ಕಲಬುರಗಿ ಶಾಖೆ ಕಾರ್ಯನಿರ್ವಹಿಸುತ್ತಿದೆ. ನುರಿತ ಎಲ್ಲ ವಿಧಧ ತಜ್ಞರ ವೈದ್ಯ ತಂಡವಿದೆ. ಜತೆಗೆ ಉತ್ತಮ ಸಿಬ್ಬಂದಿ ವರ್ಗವಿದೆ. ಹೀಗಾಗಿ ಈ ಭಾಗದಲ್ಲೂ ಜಯದೇವ ಹೃದ್ರೋಗ ಆಸ್ಪತ್ರೆ ಮನೆ ಮಾತಾಗುತ್ತಿದೆ.
1630 ಕ್ಯಾತ್‌ಲ್ಯಾಬ್ ಪ್ರಕ್ರಿಯೆಗಳು ಮತ್ತು ಅಂಜಿಯೋಗ್ರಾಮ್, 343 ಅಂಜಿಯೋಪ್ಲಾಸ್ಟಿ ಚಿಕಿತ್ಸೆ, 21ಪರ್ಮನೆಂಟ್ ಫೇಸ್ ಮೇಕರ್ ಅಳವಡಿಕೆ, 8870 ಜನರಿಗೆ ಇಕೋ ಕಾರ್ಡಿಯಾಗ್ರಾಮ್ ನಡೆಸಲಾಗಿದೆ. ಕಳೆದ ಜ.9ರಂದು 22 ವರ್ಷದ ಮಹಿಳೆ ಹಾಗೂ 14 ವರ್ಷದ ಬಾಲಕನಿಗೆ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿ ತೆರೆದ ಹೃದಯ ಚಿಕಿತ್ಸೆ ಯಶಸ್ವಿಯಾಗಿ ನಿರ್ವಹಿಸಲಾಗಿದೆ.
ಇನ್ನು ಮುಂದೆ ಪ್ರತಿ ಶುಕ್ರವಾರ ಹಾಗೂ ಶನಿವಾರ ಎರಡು ದಿನಗಳ ಕಾಲ ಕಲಬುರಗಿಯಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಯಲಿದೆ. ಇದಕ್ಕಾಗಿ ಬೆಂಗಳೂರಿನಿಂದ ಡಾ| ಶಿವಾನಂದ ಪಾಟೀಲ ಸೇರಿದಂತೆ ಇತರ ನುರಿತ ವೈದ್ಯರ ತಂಡ ಬರಲಿದೆ. ಆಸ್ಪತ್ರೆಯಲ್ಲಿ ಸತತ ವೈದ್ಯಕೀಯ ಸೇವೆ ನೀಡಲು ಡಾ| ವಿರೇಶ ವ್ಹಿ. ಪಾಟೀಲ ಹೆಬ್ಟಾಳ, ನಿಮ್ಸ್ ಡೈರೆಕ್ಟರ್‌ಡಾ| ಜಿ.ಎಚ್. ದೊಡ್ಡಮನಿ,
ಸಾರ್ವಜನಿಕ ಸಂಪರ್ಕಾಧಿಕಾರಿ ಸಂತೋಷ ಭೀಮರಾವ ತೇಗಲತಿಪ್ಪಿ ಮತ್ತು ಸಿಬ್ಬಂದಿ ವರ್ಗ ಸತತ ಶ್ರಮಿಸುತ್ತಿರುವ ಕಾರಣ ಉತ್ತಮ ಸೇವೆ ನೀಡಲು ಕಾರಣವಾಗುತ್ತಿದೆ ಎಂದು ವಿವರಿಸಿದರು. ಜಿಮ್ಸ್ ನಿರ್ದೇಶಕರಾದ ಡಾ| ಜಿ.ಎಚ್. ದೊಡ್ಡಮನಿ, ಡಾ| ಶಿವಾನಂದ ಪಾಟೀಲ, ಡಾ| ವಿರೇಶ ವ್ಹಿ. ಪಾಟೀಲ ಹೆಬ್ಟಾಳ, ಸಾರ್ವಜನಿಕ ಸಂಪರ್ಕಾಧಿಕಾರಿ ಸಂತೋಷ ತೇಗಲತಿಪ್ಪಿ ಇದ್ದರು.