Advertisement
ಹೌದು. ಕಿತ್ತೂರು ಕರ್ನಾಟಕ ಭಾಗದ ಬಹು ನಿರೀಕ್ಷಿತ ಜಯದೇವ ಹೃದ್ರೋಗ ಚಿಕಿತ್ಸಾ ಆಸ್ಪತ್ರೆಯ ಶಾಖೆ ಸ್ಥಾಪಿಸಲು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಘೋಷಣೆಯಾದ ಕೇವಲ ಒಂದೇ ವಾರದಲ್ಲಿ ಧಾರವಾಡ ಜಿಲ್ಲಾಡಳಿತ ಹುಬ್ಬಳ್ಳಿ ಸಮೀಪದ ರಾಯನಾಳ ಗ್ರಾಮದಲ್ಲಿ ಹೃದ್ರೋಗ ಆಸ್ಪತ್ರೆಗೆ ಸ್ಥಳವನ್ನು ನಿಗದಿಪಡಿಸಿತ್ತು.
Related Articles
Advertisement
ಹೆಚ್ಚುತ್ತಲೇ ಇದೆ ಹೃದ್ರೋಗಿಗಳ ಸಂಖ್ಯೆ: ಪ್ರತಿವರ್ಷ ಅಂದಾಜು 25 ಸಾವಿರಕ್ಕೂ ಅಧಿಕ ಜನ ಹೃದ್ರೋಗಿಗಳು ಚಿಕಿತ್ಸೆ ಅರಿಸಿಕೊಂಡು ಬೆಂಗಳೂರು ಜಯದೇವ ಮತ್ತು ಖಾಸಗಿ ಹೃದ್ರೋಗ ಆಸ್ಪತ್ರೆಗಳ ಕದ ತಟ್ಟುತ್ತಿದ್ದಾರೆ. ಬಡವರು-ಅನಕ್ಷರಸ್ಥರಿಗಂತೂ ಬೆಂಗಳೂರಿನ ಹೃದ್ರೋಗ ಚಿಕಿತ್ಸೆ ದೊಡ್ಡ ಹಿಂಸೆಯಾಗುತ್ತಿದ್ದು, ಚಿಕಿತ್ಸೆಗಿಂತ ಅಲ್ಲಿಗೆ ಹೋಗಿ ಬರುವುದೇ ದೊಡ್ಡ ಸವಾಲಾಗಿದೆ.
ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಹೃದ್ರೋಗ ಸಂಸ್ಥೆ ಬಂದಿರುವುದಕ್ಕೆ ಉತ್ತರ ಕರ್ನಾಟಕ ಭಾಗದ ಬಡ-ಮಧ್ಯಮ ವರ್ಗದ ಜನರು ಸರ್ಕಾರವನ್ನು ಅಭಿನಂದಿಸಿದ್ದಾರೆ. ಜಯದೇವ ಹೃದ್ರೋಗ ಸಂಸ್ಥೆ ಸ್ಥಾಪನೆ ಕುರಿತು ಆರೋಗ್ಯ ಇಲಾಖೆ ಕಾರ್ಯದರ್ಶಿಗಳಾದ ನವೀನರಾಜ್ ಸಿಂಗ್ ಅವರು ಹಿರಿಯ ಅಧಿಕಾರಿಗಳ ಜತೆ ಈಗಾಗಲೇ ರಾಯನಾಳಕ್ಕೆ ಭೇಟಿ ಕೊಟ್ಟು ಹೃದ್ರೋಗ ಆಸ್ಪತ್ರೆ ಸ್ಥಾಪನೆಯಾಗುವ ಜಾಗ ಪರಿಶೀಲನೆ ಮಾಡಿ ಹೋಗಿದ್ದಾರೆ.
ಪರಿಪೂರ್ಣಕ್ಕೂ ಮುನ್ನವೇ ಆಸ್ಪತ್ರೆ: ಇನ್ನು ಜಯದೇವ ಹೃದ್ರೋಗ ಸಂಸ್ಥೆ ಸ್ವಂತ ಕಟ್ಟಡ ನಿರ್ಮಾಣಕ್ಕೂ ಮುನ್ನವೇ ಜಿಲ್ಲೆಯಲ್ಲಿ ತಾತ್ಕಾಲಿಕವಾಗಿ ಎಲ್ಲಿಯಾದರೂ ಆಸ್ಪತ್ರೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಸಣ್ಣ ಪ್ರಮಾಣದ ಯಂತ್ರೋಪಕರಣ ಮತ್ತು ವೈದ್ಯರ ತಂಡ ರಚಿಸಿ ತಾತ್ಕಾಲಿಕವಾಗಿ ವೈದ್ಯಕೀಯ ಸೇವೆ ಆರಂಭಿಸುವ ಚಿಂತನೆ ನಡೆದಿದ್ದು, ಈ ಕುರಿತು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಜಿಲ್ಲಾಡಳಿತ ಜತೆ ಸಂಪರ್ಕ ನಡೆಸಿದ್ದಾರೆ ಎನ್ನಲಾಗಿದೆ. ಐಐಟಿಯನ್ನು ವಾಲಿ¾ ಕಟ್ಟಡದಲ್ಲಿ ನಡೆಸಿದ ಮಾದರಿಯಲ್ಲೇ ಹೃದ್ರೋಗ ಸಂಸ್ಥೆಯನ್ನು ಶೀಘ್ರವೇ ಆರಂಭಿಸಬೇಕು ಎನ್ನುವ ಒತ್ತಾಯ ಕೂಡ ಜಿಲ್ಲೆಯ ಜನರದ್ದಾಗಿದೆ.
ತೀವ್ರಗತಿಯಲ್ಲಿ ಹೃದ್ರೋಗ ಆಸ್ಪತ್ರೆ ನಿರ್ಮಾಣದ ಕೆಲಸ
ಉತ್ತರ ಕರ್ನಾಟಕ ಭಾಗದ ಹೃದ್ರೋಗಿಗಳಿಗೆ ಆದಷ್ಟು ಬೇಗ ಅನುಕೂಲ ಮಾಡಿ ಕೊಡುವ ಉದ್ದೇಶದಿಂದ ಬಜೆಟ್‌ನಲ್ಲಿ ಘೋಷಣೆಯಾದ ಬೆನ್ನಲ್ಲೇ ಹೃದ್ರೋಗ ಆಸ್ಪತ್ರೆ ನಿರ್ಮಾಣದ ಕೆಲಸ ತೀವ್ರಗತಿಯಲ್ಲಿ ಸಾಗಿದೆ. ಎರಡು ವರ್ಷದ ಅವಧಿಯಲ್ಲಿ ಕಟ್ಟಡ ಕಾಮಗಾರಿಗಳನ್ನು ಮುಗಿಸುವ ಗುರಿ ಹೊಂದಲಾಗಿದೆ. ಆದರೆ ಹೃದ್ರೋಗ ಸಂಸ್ಥೆಯನ್ನು 250 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುವ ಬದಲು ಇನ್ನಷ್ಟು ಸೌಲಭ್ಯಗಳೊಂದಿಗೆ ಹೆಚ್ಚು ಜನರಿಗೆ ಅನುಕೂಲವಾಗುವಂತೆ ಮಾಡಲು ಯೋಜಿಸಲಾಗಿದೆ. ಇದಕ್ಕಾಗಿ 500 ಕೋಟಿ ರೂ. ಹಣ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಇದರಿಂದ ಕಿತ್ತೂರು ಕರ್ನಾಟಕ ಮಾತ್ರವಲ್ಲ, ಕಲ್ಯಾಣ ಮತ್ತು ಮಧ್ಯ ಕರ್ನಾಟಕ ಭಾಗದ ಜಿಲ್ಲೆಗಳ ಜನರಿಗೂ ಅನುಕೂಲವಾಗಲಿದೆ. ಹೀಗಾಗಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹಿರಿಯ ವೈದ್ಯರಿಂದ ಈ ಬಗ್ಗೆ ಸಲಹೆ ಪಡೆದಿದ್ದಾರೆ ಎನ್ನಲಾಗಿದೆ.
ಜಿಲ್ಲಾಡಳಿತ ಈಗಾಗಲೇ ರಾಯನಾಳದಲ್ಲಿ 9.5 ಎಕರೆ ಜಾಗೆಯನ್ನು ಹೃದ್ರೋಗ ಆಸ್ಪತ್ರೆ ನಿರ್ಮಾಣಕ್ಕೆ ನೀಡಲಾಗಿದೆ. ಸರ್ಕಾರದ ಎಲ್ಲ ಅಗತ್ಯಗಳನ್ನು ಕಾಲಮಿತಿಯಲ್ಲೇ ಪೂರೈಸಿಕೊಡಲು ನಾವು ಸಿದ್ಧರಿದ್ದೇವೆ. ಶೀಘ್ರವೇ ಪರಿಪೂರ್ಣ ಹೃದ್ರೋಗ ಆಸ್ಪತ್ರೆ ಕೆಲಸ ಆರಂಭಿಸಲಿದೆ. –ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ, ಧಾರವಾಡ.
ಈಗಾಗಲೇ ಈ ಸಂಬಂಧ ಎರಡು ಸುತ್ತಿನ ಸಭೆಗಳು ನಡೆದಿದ್ದು, ಶೀಘ್ರವೇ ಹುಬ್ಬಳ್ಳಿಯ ಜಯದೇವ ಹೃದ್ರೋಗ ಆಸ್ಪತ್ರೆಗೆ ಚಾಲನೆ ಸಿಗಲಿದೆ. ಆದರೆ ಆಸ್ಪತ್ರೆಯನ್ನು ಸುಸಜ್ಜಿತ ಪ್ರಮಾಣದಲ್ಲಿಯೇ ಸ್ಥಾಪಿಸಲು ಯೋಜಿಸಲಾಗಿದ್ದು, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ವತಃ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದಾರೆ. –ಆರೋಗ್ಯ ಇಲಾಖೆ ಹಿರಿಯ ಅಧಿಕಾರಿ, ಬೆಂಗಳೂರು.
-ಡಾ|ಬಸವರಾಜ ಹೊಂಗಲ್