Advertisement

ಜಯದೇವ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ

07:21 AM Feb 10, 2019 | |

ಮೈಸೂರು: ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಎಲ್ಲಾ ವಿಭಾಗಗಳೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿವೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ತಿಳಿಸಿದರು.

Advertisement

ಮೈಸೂರಿನ ಕೆಆರ್‌ಎಸ್‌ ರಸ್ತೆಯಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಜಯದೇವ ಆಸ್ಪತ್ರೆ ಕಳೆದ 10 ವರ್ಷಗಳಲ್ಲಿ ಶೇ 500ರಷ್ಟು ಪ್ರಗತಿ ಸಾಧಿಸಿದ್ದು, ಹೃದ್ರೋಗ ಚಿಕಿತ್ಸಾ ಕ್ಷೇತ್ರದಲ್ಲಿ ಭಾರತದ ಭೂಪಟದಲ್ಲಿ ಮೊದಲನೇ ಸ್ಥಾನದಲ್ಲಿದೆ.

ಜಯದೇವ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಹಾಗೂ ಸಿಬ್ಬಂದಿ ಸೇವಾ ಮನೋಭಾವ ಹಾಗೂ ಆಸ್ಪತ್ರೆ ಮೇಲಿರುವ ವಿಶ್ವಾಸದಿಂದ ಪ್ರತಿದಿನ 500 ಜನ ಹೊರರೋಗಿಗಳು ಬರುತ್ತಿದ್ದಾರೆ. ಪ್ರತಿದಿನ 25 ರಿಂದ 30 ರೋಗಿಗಳಿಗೆ ಆಂಜಿಯೋಪ್ಲಾಸ್ಟಿ ಮತ್ತು ಆಂಜಿಯೋಗ್ರಾಂ ಮಾಡಲಾಗುತ್ತಿದ್ದು, ಈಗಾಗಲೇ 60 ಜನರಿಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

ಇಲ್ಲಿ ವಿಶೇಷ ಹೊರ ರೋಗಿಗಳ ವಿಭಾಗವಿದ್ದು, ಮಾಸ್ಟರ್‌ ಹೆಲ್ತ್‌ ಚೆಕ್‌ಅಪ್‌ ಸಹ ಮಾಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಅತ್ಯುನ್ನತ ಶಿಕ್ಷಣ ಹಾಗೂ ತರಬೇತಿ ಪಡೆದ ತಜ್ಞ ವೈದ್ಯರಿದ್ದು, ಸಾಮಾನ್ಯ ರೋಗಿಗಳಿಗೆ, ಬಡವರಿಗೆ ಪಂಚತಾರಾ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯ ದೊರೆಯುತ್ತಿದೆ. ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ ಅಮೆರಿಕದ ಹೃದ್ರೋಗ ತಜ್ಞರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

3 ವರ್ಷದಲ್ಲಿ ಪೂರ್ಣ: ಕಲಬುರ್ಗಿಯಲ್ಲಿ ಜಯದೇವ ನೂತನ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಆಯವ್ಯಯದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 150 ಕೋಟಿ ರೂ. ನೀಡಿದ್ದಾರೆ. ಅಲ್ಲಿನ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ 7 ಎಕರೆ ಜಾಗ ಗುರುತಿಸಿದ್ದು, 350 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಈ ಆಸ್ಪತ್ರೆಯಿಂದ ಹೈದರಾಬಾದ್‌ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

Advertisement

ದಾನಿಗಳ ದೇಣಿಗೆ: ಬೆಂಗಳೂರಿನಲ್ಲಿ ಪುನರ್ವಸತಿ ಕೇಂದ್ರ, ರೋಗಿಗಳ ತಂಗುದಾಣ ಹಾಗೂ 40 ಹಾಸಿಗೆ ಸಾಮರ್ಥ್ಯವುಳ್ಳ ಕಾರ್ಡಿಯಾಕ್‌ ವಾರ್ಡ್‌ಗಳನ್ನು ದಾನಿಗಳ ಸಹಾಯದಿಂದ ಪ್ರಾರಂಭಿಸಲಾಗುತ್ತಿದೆ. ಹನುಮಾನ್‌ ಮತ್ತು ಶಾರದಮ್ಮ ದಂಪತಿ ಡಾ. ಸಂದೀಪ್‌ ಸ್ಮರಣಾರ್ಥವಾಗಿ 62 ಲಕ್ಷ ದೇಣಿಗೆ ನೀಡಿದ್ದಾರೆ. ಚೆನ್ನೈನ ಬಾದಲ್‌ ಚಂದ್‌ ಟ್ರಸ್ಟ್‌ ನವರು 50 ಲಕ್ಷ ದೇಣಿಗೆ ನೀಡಿದ್ದಾರೆ. ಕೆನರಾಬ್ಯಾಂಕ್‌ ಅಂಗ ಸಂಸ್ಥೆಯಾದ ಕ್ಯಾನ್‌ಫಿನ್‌ ಸಂಸ್ಥೆಯಿಂದ ಹಾರ್ಟ್‌ಲಂಗ್‌ ಉಪಕರಣಕ್ಕೆ 86 ಲಕ್ಷ ರೂ. ದೇಣಿಗೆಯನ್ನು ದಾನಿಗಳುನೀಡಿದ್ದಾರೆ ಎಂದು ಅವರು ವಿವರಿಸಿದರು.

ಈ ಸಂದರ್ಭದಲ್ಲಿ ಆರ್‌ಎಂಒ ಡಾ. ಪಾಂಡುರಂಗ, ಡಾ. ಹರ್ಷಬಸಪ್ಪ, ಡಾ. ಹೇಮಾ ರವೀಶ್‌, ಡಾ. ಭಾರತಿ, ಡಾ. ಸಂತೋಷ್‌, ಡಾ. ರಾಜೀತ್‌, ಡಾ. ದೇವರಾಜ್‌, ನರ್ಸಿಂಗ್‌ ಅಧೀಕ್ಷಕ ಕೆ. ಹರೀಶ್‌, ಪಿಆರ್‌ಒ ಗಳಾದ ವಾಣಿ ಹಾಗೂ ಚಂಪಕಮಾಲ ಮತ್ತಿತರರು ಹಾಜರಿದ್ದರು.

ನಿತ್ಯ 1500 ಮಂದಿಗೆ ಚಿಕಿತ್ಸೆ: ಬೆಂಗಳೂರಿನ ಜಯದೇವ ಆಸ್ಪತ್ರೆ ಈಗಾಗಲೇ 700 ಹಾಸಿಗೆ ಸಾಮರ್ಥ್ಯ ಹೊಂದಿದ್ದು, ನಿತ್ಯ 1500 ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 300 ಹಾಸಿಗೆ ಸಾಮರ್ಥ್ಯದ ಹೊಸ ಕಟ್ಟಡವನ್ನು ಇನ್ಫೋಸಿಸ್‌ ಪ್ರತಿಷ್ಠಾನದ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಕೊಡುಗೆಯಾಗಿ ಕಟ್ಟಿಸಿಕೊಡಲಿದ್ದಾರೆ ಎಂದು ಡಾ. ಮಂಜುನಾಥ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next